
ಧರ್ಮಶಾಲಾದಲ್ಲಿ ನಡೆದ ಐಪಿಎಲ್ 2025 (IPL 2025) ರ 54 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ (PBKS vs LSG) ತಂಡವನ್ನು ಹೀನಾಯವಾಗಿ ಸೋಲಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 236 ರನ್ ಗಳಿಸಿತು. ಈ ಬೃಹತ್ ಗುರಿ ಬೆನ್ನಟ್ಟಿದ ಲಕ್ನೋ ಬ್ಯಾಟ್ಸ್‌ಮನ್‌ಗಳು ಅರ್ಷದೀಪ್ ಸಿಂಗ್ (Arshdeep Singh) ದಾಳಿಗೆ ತತ್ತರಿಸಿದರು. ಹೀಗಾಗಿ ಇಡೀ ತಂಡ ಕೇವಲ 199 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಪಂಜಾಬ್ ತಂಡ ಪಂದ್ಯವನ್ನು 37 ರನ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ 7 ಗೆಲುವುಗಳೊಂದಿಗೆ 15 ಅಂಕ ಕಲೆಹಾಕಿ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಇತ್ತ ಲಕ್ನೋ ತಂಡ 6ನೇ ಸೋಲಿನೊಂದಿಗೆ 7ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಆಘಾತಕಾರಿ ಆರಂಭ ಕಂಡಿತು. ಆಕಾಶ್ ಸಿಂಗ್ ಮೊದಲ ಓವರ್‌ನಲ್ಲೇ ಪ್ರಿಯಾಂಶ್ ಆರ್ಯ ಅವರನ್ನು ಬಲಿಪಶುವನ್ನಾಗಿ ಮಾಡಿದರು. ಇದಾದ ನಂತರ ಪ್ರಭ್ಸಿಮ್ರಾನ್ ಸಿಂಗ್ ಮತ್ತು ಜೋಶ್ ಇಂಗ್ಲಿಸ್ ಜವಾಬ್ದಾರಿಯನ್ನು ವಹಿಸಿಕೊಂಡರು. ಇವರಿಬ್ಬರ ನಡುವೆ ಎರಡನೇ ವಿಕೆಟ್‌ಗೆ 48 ರನ್‌ಗಳ ಪಾಲುದಾರಿಕೆ ಇತ್ತು. ಈ ವೇಳೆ 30 ರನ್ ಬಾರಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಂಗ್ಲಿಸ್‌ಗೆ ಆಕಾಶ್ ಸಿಂಗ್ ಪೆವಿಲಿಯನ್ ದಾರಿ ತೋರಿಸಿದರು.
50 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ತಂಡದ ಇನ್ನಿಂಗ್ಸ್ ನಿಭಾಯಿಸುವ ಜವಬ್ದಾರಿ ಹೊತ್ತ ಶ್ರೇಯಸ್ ಅಯ್ಯರ್ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಮೂರನೇ ವಿಕೆಟ್‌ಗೆ 78 ರನ್ ಸೇರಿಸಿದರು. ನಾಯಕ ಅಯ್ಯರ್ 25 ಎಸೆತಗಳಲ್ಲಿ 45 ರನ್ ಗಳಿಸಿ ಔಟಾದರೆ, ಪ್ರಭ್ಸಿಮ್ರಾನ್ ಸಿಂಗ್ ತಮ್ಮ ಐಪಿಎಲ್ ವೃತ್ತಿಜೀವನದ ಎರಡನೇ ಶತಕ ಗಳಿಸುವುದನ್ನು ಒಂಬತ್ತು ರನ್‌ಗಳಿಂದ ತಪ್ಪಿಸಿಕೊಂಡರು. ಲಕ್ನೋ ವಿರುದ್ಧ ಅವರ ಬ್ಯಾಟ್‌ನಿಂದ ಆರು ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳು ಸಿಡಿದವು. ಕೊನೆಯಲ್ಲಿ ನೆಹಾಲ್ ವಾಧೇರಾ 16 ರನ್ ಗಳಿಸಿದರೆ, ಶಶಾಂಕ್ ಮತ್ತು ಸ್ಟೊಯಿನಿಸ್ ಕ್ರಮವಾಗಿ 33 ಮತ್ತು 15 ರನ್ ಗಳಿಸಿ ಅಜೇಯರಾಗಿ ಉಳಿದರು. ಲಕ್ನೋ ಪರ ಆಕಾಶ್ ಸಿಂಗ್ ಮತ್ತು ದಿಗ್ವೇಶ್ ರಥಿ ತಲಾ ಎರಡು ವಿಕೆಟ್ ಪಡೆದರೆ, ಪ್ರಿನ್ಸ್ ಯಾದವ್ ಒಂದು ವಿಕೆಟ್ ಪಡೆದರು.
236 ರನ್‌ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡ ಅರ್ಷದೀಪ್ ದಾಳಿಯ ಮುಂದೆ ಆರಂಭದಲ್ಲೇ ಶರಣಾಯಿತು. ಅರ್ಷದೀಪ್ ತಮ್ಮ ಮೊದಲ ಸ್ಪೆಲ್‌ನಲ್ಲಿ 3 ಓವರ್‌ಗಳನ್ನು ಬೌಲ್ ಮಾಡಿ ಕೇವಲ 10 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಈ ಅವಧಿಯಲ್ಲಿ, ಅವರು ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್ ಮತ್ತು ನಿಕೋಲಸ್ ಪೂರನ್ ಅವರಂತಹ ಮೂವರು ಅಪಾಯಕಾರಿ ಆಟಗಾರರ ವಿಕೆಟ್‌ಗಳನ್ನು ಪಡೆಯುವ ಮೂಲಕ ಲಕ್ನೋದ ಬ್ಯಾಟಿಂಗ್ ತಂಡದ ಬೆನ್ನೆಲುಬನ್ನು ಮುರಿದರು.
IPL 2025: ಕಿರಿಯ ವಯಸ್ಸಿನಲ್ಲೇ ದಾಖಲೆ; 14 ವರ್ಷದ ವೈಭವ್ ಆಟಕ್ಕೆ ಫಿದಾ ಆದ ಪ್ರಧಾನಿ ಮೋದಿ
ನಾಯಕ ರಿಷಭ್ ಪಂತ್ ಕೂಡ ಎಂದಿನಂತೆ ತಮ್ಮ ನಿರಾಶಾದಾಯಕ ಪ್ರದರ್ಶನವನ್ನು ಈ ಪಂದ್ಯದಲ್ಲೂ ಮುಂದುವರೆಸಿದರು. ಈ ಪಂದ್ಯದಲ್ಲಿ 17 ಎಸೆತಗಳನ್ನು ಎದುರಿಸಿದ 18 ರನ್ ಗಳಿಸಿ ಔಟಾದರು. ಡೇವಿಡ್ ಮಿಲ್ಲರ್ ಕೂಡ 8 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು. ಕೊನೆಯಲ್ಲಿ, ಆಯುಷ್ ಬಡೋನಿ 40 ಎಸೆತಗಳಲ್ಲಿ 74 ರನ್ ಗಳಿಸಿದರೆ, ಅಬ್ದುಲ್ ಸಮದ್ ಕೂಡ 24 ಎಸೆತಗಳಲ್ಲಿ 45 ರನ್ ಗಳಿಸಿ ತಂಡದ ಪರ ಕೊಂಚ ಹೋರಾಟ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿ ಲಕ್ನೋ ಪರ ಯಾವ ಆಟಗಾರನಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಅಂತಿಮವಾಗಿ ಲಕ್ನೋ ತಂಡ 7 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ 37 ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:32 pm, Sun, 4 May 25