
ಏಪ್ರಿಲ್ 28 ರಂದು ನಡೆದ ಐಪಿಎಲ್ 2025 (IPL 2025) ರ 47ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ (RR vs GT) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 209 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ಕೇವಲ 2 ವಿಕೆಟ್ ಕಳೆದುಕೊಂಡು 15.5 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ರಾಜಸ್ಥಾನ್ ಪರ ಸಿಡಿಲಬ್ಬರದ ಶತಕ ಸಿಡಿಸಿದ 14 ವರ್ಷದ ವೈಭವ್ ಸೂರ್ಯವಂಶಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದು ಮಾತ್ರವಲ್ಲದೆ ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಶತಕ ಸಿಡಿಸಿದ ಹಾಗೂ ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 209 ರನ್ ಗಳಿಸಿತು. ತಂಡದ ಪರ ಆರಂಭಿಕ ಆಟಗಾರ ಸಾಯಿ ಸುದರ್ಶನ್ 30 ಎಸೆತಗಳಲ್ಲಿ 39 ರನ್ ಗಳಿಸಿದರು. ಇವಲ್ಲದೆ, ನಾಯಕ ಶುಭ್ಮನ್ ಗಿಲ್ ಕೂಡ 50 ಎಸೆತಗಳಲ್ಲಿ 84 ರನ್‌ಗಳ ಇನ್ನಿಂಗ್ಸ್ ಆಡಿದರು. ಇನ್ನು ಕಳೆದ ಸೀಸನ್ವರೆಗೂ ರಾಜಸ್ಥಾನ್ ಪರ ಆಡುತ್ತಿದ್ದ ಜೋಸ್ ಬಟ್ಲರ್, ಈ ಬಾರಿ ಅದೇ ತಂಡದ ವಿರುದ್ಧ ಕೇವಲ 26 ಎಸೆತಗಳಲ್ಲಿ 50 ರನ್ ಬಾರಿಸಿದರು. ಈ ಮೂವರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ, ಗುಜರಾತ್ ತಂಡದ ಬೇರೆ ಯಾವುದೇ ಆಟಗಾರನು ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ.
210 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ಗೆ ವೈಭವ್ ಸೂರ್ಯವಂಶಿ ಹಿಂದೇದೂ ಸಿಕ್ಕಿರದ ಆರಂಭ ಒದಗಿಸಿಕೊಟ್ಟರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದಿದ್ದ ವೈಭವ್ ಮೊದಲ 17 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದರು. ಇದಾದ ನಂತರ ಕೇವಲ 35 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಪೂರ್ಣಗೊಳಿಸಿದರು. ಈ ಮೂಲಕ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಅವರು ಯೂಸುಫ್ ಪಠಾಣ್ ಅವರ ದಾಖಲೆಯನ್ನು ಮುರಿದರು.
IPL 2025: 35 ಎಸೆತಗಳಲ್ಲಿ ಶತಕ..! ಟಿ20 ಕ್ರಿಕೆಟ್ನಲ್ಲಿ ಇತಿಹಾಸ ಬರೆದ 9ನೇ ಕ್ಲಾಸ್ ವೈಭವ್
ಇದಲ್ಲದೆ, ಕ್ರಿಸ್ ಗೇಲ್ ನಂತರ ಐಪಿಎಲ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತಿಮವಾಗಿ ವೈಭವ್ ತಮ್ಮ ಇನ್ನಿಂಗ್ಸ್‌ನಲ್ಲಿ 38 ಎಸೆತಗಳನ್ನು ಎದುರಿಸಿ 11 ಸಿಕ್ಸರ್‌ಗಳ ಜೊತೆಗೆ 7 ಬೌಂಡರಿಗಳನ್ನು ಬಾರಿಸಿದರು. ಆದರೆ, 11.5ನೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಸೂರ್ಯವಂಶಿ ಇನಿಂಗ್ಸ್‌ಗೆ ಅಂತ್ಯ ಹಾಡಿದರು. ವೈಭವ್ ಹೊರತಾಗಿ ಯಶಸ್ವಿ ಜೈಸ್ವಾಲ್ ಕೂಡ ಅರ್ಧಶತಕ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:18 pm, Mon, 28 April 25