IPL 2025: ಫುಲ್ ವೈಟ್… RCB ಅಭಿಮಾನಿಗಳ ಮಾಸ್ಟರ್ ಪ್ಲ್ಯಾನ್

IPL 2025 RCB vs KKR: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 58ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ವೇಳೆ ವಿರಾಟ್ ಕೊಹ್ಲಿಗೆ ವಿಶೇಷ ಗೌರವ ಸಲ್ಲಿಸಲು ಆರ್​ಸಿಬಿ ಅಭಿಮಾನಿಗಳು ಪ್ಲ್ಯಾನ್ ರೂಪಿಸಿದ್ದಾರೆ.

IPL 2025: ಫುಲ್ ವೈಟ್... RCB ಅಭಿಮಾನಿಗಳ ಮಾಸ್ಟರ್ ಪ್ಲ್ಯಾನ್
Virat Kohli Fans

Updated on: May 14, 2025 | 7:54 AM

ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಅದು ಕೂಡ ವಿದಾಯ ಪಂದ್ಯವಿಲ್ಲದೆ. ಮೇ 12 ರಂದು ಸೋಷಿಯಲ್ ಮೀಡಿಯಾ ಮೂಲಕ ಕೊಹ್ಲಿ 14 ವರ್ಷಗಳ ಸುದೀರ್ಘ ಟೆಸ್ಟ್ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ್ದಾರೆ. ಈ ವಿದಾಯವನ್ನು ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅದರಲ್ಲೂ ಬೀಳ್ಕೊಡುಗೆ ಪಂದ್ಯವಿಲ್ಲದೇ ಕೆರಿಯರ್ ಅಂತ್ಯಗೊಳಿಸಿರುವುದು ಅಭಿಮಾನಿಗಳನ್ನು ಮತ್ತಷ್ಟು ದುಃಖತಪ್ತರನ್ನಾಗಿಸಿದೆ. ಹೀಗಾಗಿಯೇ ಇದೀಗ RCB ಅಭಿಮಾನಿಗಳು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ. ಈ ಪ್ಲ್ಯಾನ್​ನೊಂದಿಗೆ ವಿರಾಟ್ ಕೊಹ್ಲಿಗೆ ಗೌರವಯುತ ಬೀಳ್ಕೊಡುಗೆ ನೀಡಲು ಮುಂದಾಗಿದ್ದಾರೆ.

ಹೌದು, ಮೇ 17 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಶುರುವಾಗುತ್ತಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯ ನಡೆಯುತ್ತಿರುವುದು ಆರ್​ಸಿಬಿ ತಂಡದ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ.

ಈ ಪಂದ್ಯ ವೀಕ್ಷಿಸಲು ಆಗಮಿಸುವ ಎಲ್ಲಾ ಅಭಿಮಾನಿಗಳು ವೈಟ್ ಟಿ ಶರ್ಟ್ ಧರಿಸಿ ಆಗಮಿಸಬೇಕೆಂದು ಇದೀಗ ಆರ್​ಸಿಬಿ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡುತ್ತಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿಗೆ ಅಂತಿಮ ಗೌರವ ಸಲ್ಲಿಸಲು ಆರ್​ಸಿಬಿ ಅಭಿಮಾನಿಗಳು ಪ್ಲ್ಯಾನ್ ರೂಪಿಸಿದ್ದಾರೆ.

ಆರ್​ಸಿಬಿ ಅಭಿಮಾನಿಗಳ ಮನವಿ ಸಂದೇಶ:

ಆರ್‌ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳಲ್ಲಿ ಒಂದು ಮನವಿ… ಎಲ್ಲಾ ಅಭಿಮಾನಿಗಳು ಆರ್​ಸಿಬಿ ತಂಡದ ಮುಂದಿನ ಪಂದ್ಯದ ವೇಳೆ ಕೆಂಪು ಮತ್ತು ಕಪ್ಪು ಜೆರ್ಸಿಯ ಬದಲಿಗೆ ಬಿಳಿ ಬಣ್ಣದ ಜೆರ್ಸಿ ಅಥವಾ ಟಿ ಶರ್ಟ್​ ಧರಿಸಬೇಕೆಂದು ಕೋರಲಾಗಿದೆ. ಸೋಮವಾರದಂದು ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿರುವ ಕೊಹ್ಲಿಗೆ ಗೌರವ ಸಲ್ಲಿಸುವುದು ಇದರ ಉದ್ದೇಶ.

ವಿರಾಟ್ ಕೊಹ್ಲಿ ನಮ್ಮಲ್ಲಿ ಹಲವರನ್ನು ಟೆಸ್ಟ್ ಕ್ರಿಕೆಟ್‌ ಅನ್ನು ಪ್ರೀತಿಸುವಂತೆ ಮಾಡಿದವರು. ಅವರು ಬಿಳಿ ಉಡುಪಿನಲ್ಲಿ ಆಡುವುದನ್ನು ಇನ್ನು ಎಂದಿಗೂ ನೇರಪ್ರಸಾರದಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರ ನೆಚ್ಚಿನ ಸ್ವರೂಪದಲ್ಲಿ ಅವರು ಎಷ್ಟು ಪ್ರೀತಿಸಲ್ಪಟ್ಟಿದ್ದರು ಎಂಬುದನ್ನು ನಾವು ಅವರಿಗೆ ತೋರಿಸಬೇಕಿದೆ.

ಇದಕ್ಕಾಗಿ ಪ್ರತಿಯೊಬ್ಬರು ವೈಟ್ ಜೆರ್ಸಿಯೊಂದಿಗೆ ಆರ್​ಸಿಬಿ-ಕೆಕೆಆರ್ ಪಂದ್ಯ ವೀಕ್ಷಿಸಲು ಆಗಮಿಸಬೇಕೆಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಲಾಗುತ್ತಿದೆ. ಅಲ್ಲದೆ ಮೇ 17 ರಂದು ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಬಿಳಿ ಜೆರ್ಸಿ ಮಾರಾಟ ಮಾಡುವುದಾಗಿಯೂ ಕೆಲ ಅಭಿಮಾನಿಗಳು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: IPL 2025: RCB ತಂಡಕ್ಕೆ ಆಘಾತ: ಉಳಿದ ಪಂದ್ಯಗಳಿಗೆ ಪ್ರಮುಖ ಆಟಗಾರ ಅಲಭ್ಯ

ಹೀಗಾಗಿ ಶನಿವಾರ ನಡೆಯಲಿರುವ ಪಂದ್ಯದ ವೇಳೆ ಆರ್​ಸಿಬಿ ತಂಡದ ಕೆಂಪು ಕೋಟೆ ಶ್ವೇತವಸ್ತ್ರದಿಂದ ಕಂಗೊಳಿಸಲಿದೆ ಎನ್ನಬಹುದು. ಈ ಮೂಲಕ ವಿರಾಟ್ ಕೊಹ್ಲಿಗೆ ಗೌರವಯುತ ಬೀಳ್ಕೊಡುಗೆ ನೀಡಲು ಆರ್​ಸಿಬಿ ಅಭಿಮಾನಿಗಳು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.