IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಿಟೆನ್ಷನ್ ಗಡುವು ನಾಳೆಗೆ (ಅ.31) ಮುಗಿಯಲಿದೆ. ಗುರುವಾರ ಸಂಜೆ 5 ಗಂಟೆಯೊಳಗೆ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು. ಇದಾದ ಬಳಿಕವಷ್ಟೇ ಪ್ರತಿ ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡ ಆಟಗಾರರು ಯಾರೆಂಬುದು ಬಹಿರಂಗವಾಗಲಿದೆ. ಈ ರಿಟೆನ್ಷನ್ಗೆ ಒಂದಷ್ಟು ಷರತ್ತುಗಳನ್ನು ಸಹ ವಿಧಿಸಲಾಗಿದೆ. ಆ ಷರತ್ತುಗಳೇನು? ಎಷ್ಟು ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…
ಐಪಿಎಲ್ ರಿಟೈನ್ ಅಥವಾ ರಿಟೆನ್ಷನ್ ಎಂದರೆ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳುವುದು. ಅಂದರೆ ಮೆಗಾ ಹರಾಜಿಗೂ ಮುನ್ನ ಇಂತಿಷ್ಟು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಐಪಿಎಲ್ 2025ರ ಮೆಗಾ ಹರಾಜಿನ ನಿಯಮದ ಪ್ರಕಾರ ಗರಿಷ್ಠ 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು. ಈ ಆರು ಆಟಗಾರರಲ್ಲಿ ಓರ್ವ ಅನ್ಕ್ಯಾಪ್ಡ್ ಆಟಗಾರನಿರಬೇಕು.
ರಾಷ್ಟ್ರೀಯ ತಂಡದ ಪರ ಆಡದ ಹಾಗೂ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡು 5 ವರ್ಷಗಳನ್ನು ಕಳೆದಿರುವ ಆಟಗಾರರನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
ಫ್ರಾಂಚೈಸಿಗಳು 6 ಆಟಗಾರರನ್ನು ಉಳಿಸಿಕೊಳ್ಳಲು ಬಯಸಿದರೆ 79 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಅದೇ 5 ಕ್ಯಾಪ್ಡ್ ಆಟಗಾರರನ್ನು ಮಾತ್ರ ಉಳಿಸಿಕೊಂಡರೆ 75 ಕೋಟಿ ರೂ. ವ್ಯಯಿಸಬೇಕು.
ಐಪಿಎಲ್ ಮೆಗಾ ಹರಾಜಿನ ನಿಯಮದ ಪ್ರಕಾರ 6 ಆಟಗಾರರನ್ನು ಉಳಿಸಿಕೊಳ್ಳಲು ಬಯಸಿದರೆ 79 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಅಂದರೆ ಇಲ್ಲಿ ಮೊದಲ ಆಟಗಾರನಿಗೆ 18 ಕೋಟಿ ರೂ. ಎರಡನೇ ಆಟಗಾರನಿಗೆ 14 ಕೋಟಿ ರೂ. ಮೂರನೇ ಆಟಗಾರನಿಗೆ 11 ಕೋಟಿ ರೂ. ನಾಲ್ಕನೇ ಆಟಗಾರನಿಗೆ 18 ಕೋಟಿ ರೂ. ಮತ್ತು ಐದನೇ ಆಟಗಾರನಿಗೆ 14 ಕೋಟಿ ರೂ. ನಿಗದಿ ಮಾಡಲಾಗಿದೆ. ಹಾಗೆಯೇ ಅನ್ಕ್ಯಾಪ್ಡ್ ಪಟ್ಟಿಯಲ್ಲಿ ಉಳಿಸಿಕೊಳ್ಳುವ ಆಟಗಾರನಿಗೆ 4 ಕೋಟಿ ರೂ. ನೀಡಬೇಕಾಗುತ್ತದೆ.
ಇಲ್ಲಿ 5 ಕ್ಯಾಪ್ಡ್ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಬಯಸಿದರೆ, ಫ್ರಾಂಚೈಸಿ 75 ಕೋಟಿ ರೂ. ಅನ್ನು ತಮಗೆ ಬೇಕಾದಂತೆ ವಿಭಾಗಿಸಬಹುದು. ಅಂದರೆ ಇಬ್ಬರು ಆಟಗಾರರಿಗೆ 25+25 ಕೋಟಿ ರೂ. ನೀಡಿ, ಉಳಿದ ಮೂವರು ಆಟಗಾರರಿಗೆ 10+10+5 ಕೋಟಿ ರೂ. ನೀಡಬಹುದಾಗಿದೆ. ಈ ಮೂಲಕ ಒಟ್ಟು ರಿಟೈನ್ ಮೊತ್ತವನ್ನು ತಮಗೆ ಬೇಕಾದಂತೆ ಹಂಚಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗಿದೆ.
ಒಂದು ಫ್ರಾಂಚೈಸಿಯು 5 ಕ್ಕಿಂತ ಕಡಿಮೆ ಆಟಗಾರರನ್ನು ಉಳಿಸಿಕೊಂಡರೆ, ಮೊದಲು ಹೇಳಿದಂತೆ ಮೊದಲ ಆಟಗಾರನಿಗೆ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ ರೂ, ಮೂರನೇ ಆಟಗಾರನಿಗೆ 11 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು ನಾಲ್ಕನೇ ಆಟಗಾರ 18 ಕೋಟಿ ರೂ. ಪಡೆಯಲಿದ್ದಾರೆ. ಅಂದರೆ ಇಲ್ಲಿ ನಾಲ್ವರು ಆಟಗಾರರ ರಿಟೈನ್ ಮೊತ್ತ 61 ಕೋಟಿ ರೂ, ಮೂವರು ಆಟಗಾರರ ರಿಟೈನ್ ಮೊತ್ತ 43 ಕೋಟಿ ರೂ, ಇಬ್ಬರು ಆಟಗಾರರ ರಿಟೈನ್ ಮೊತ್ತ 32 ಕೋಟಿ ರೂ. ಆಗಿರಲಿದೆ.
ಮೆಗಾ ಹರಾಜಿಗೆ ಆಟಗಾರರನ್ನು ಬಿಡುಗಡೆ ಮಾಡುವ ಮುನ್ನ ಆರ್ಟಿಎಂ ಆಯ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಇಲ್ಲಿ ಐವರು ಆಟಗಾರರನ್ನು ಉಳಿಸಿಕೊಂಡರೆ, ಓರ್ವ ಆಟಗಾರನ ಮೇಳೆ ಆರ್ಟಿಎಂ ಆಯ್ಕೆ ಬಳಸಿಕೊಳ್ಳಬಹುದು. ಅದೇ ರೀತಿ ನಾಲ್ವರನ್ನು ರಿಟೈನ್ ಮಾಡಿದರೆ, ಇಬ್ಬರನ್ನು ಆರ್ಟಿಎಂ ಅಡಿಯಲ್ಲಿ ಬಿಡುಗಡೆ ಮಾಡಬಹುದು. ಹಾಗೆಯೇ ಮೂವರನ್ನು ಉಳಿಸಿಕೊಂಡು, ಮೂವರು ಆಟಗಾರರ ಮೇಲೂ ಆರ್ಟಿಎಂ ಆಯ್ಕೆ ಬಳಸಬಹುದಾಗಿದೆ.
ಆರ್ಟಿಎಂ ಎಂದರೆ ರೈಟ್ ಟು ಮ್ಯಾಚ್ (RTM) ಆಯ್ಕೆ. ಅಂದರೆ ಮೆಗಾ ಹರಾಜಿನಲ್ಲಿ ಆಟಗಾರರನ್ನು ಸ್ವಾಧೀನಪಡಿಸಿಕೊಳ್ಳಲು ಇರುವ ವಿಶೇಷ ಆಯ್ಕೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಆಟಗಾರರ ಮೇಲೆ ಹಕ್ಕುಸ್ವಾಮ್ಯ ಸ್ಥಾಪಿಸುವುದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಆರ್ಟಿಎಂ ಆಯ್ಕೆಯನ್ನು ಬಳಸಲಾದ ಆಟಗಾರನನ್ನು ನೇರವಾಗಿ ಆಯ್ಕೆ ಮಾಡುವಂತಿಲ್ಲ ಎಂಬುದು.
ಅಂದರೆ ಒಬ್ಬ ಆಟಗಾರನ ಮೇಲೆ ಆರ್ಟಿಎಂ ಆಯ್ಕೆ ಬಳಸಿದರೆ ಆತನನ್ನು ಮೆಗಾ ಹರಾಜಿಗಾಗಿ ಬಿಡುಗಡೆ ಮಾಡಬೇಕಾಗುತ್ತದೆ. ಇದಾಗ್ಯೂ ಮೆಗಾ ಹರಾಜಿನಲ್ಲಿ ಆ ಆಟಗಾರನ ಸಂಪೂರ್ಣ ಹಕ್ಕು ಬಿಡುಗಡೆ ಮಾಡಿದ ಫ್ರಾಂಚೈಸಿಯ ಬಳಿಯೇ ಇರಲಿದೆ. ಇದುವೇ ಈ ಆಯ್ಕೆಯ ವಿಶೇಷತೆ.
ಉದಾಹರಣೆಗೆ: ಆರ್ಸಿಬಿ ತಂಡವು ರಜತ್ ಪಾಟಿದಾರ್ ಅವರನ್ನು ಹರಾಜಿಗಾಗಿ ರಿಲೀಸ್ ಮಾಡಿದೆ ಎಂದಿಟ್ಟುಕೊಳ್ಳಿ. ಆದರೆ ಬಿಡುಗಡೆಗೂ ಮುನ್ನ ಆರ್ಟಿಎಂ ಆಯ್ಕೆ ಬಳಸಿ ಮೆಗಾ ಹರಾಜಿಗಾಗಿ ರಿಲೀಸ್ ಮಾಡಿದರೆ, ಪಾಟಿದಾರ್ ಮೇಲಿನ ಹಕ್ಕು ಆರ್ಸಿಬಿ ಬಳಿಯೇ ಇರುತ್ತದೆ. ಅದರಂತೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ರಜತ್ ಪಾಟಿದಾರ್ (ಆರ್ಟಿಎಂ) ಅವರ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 10 ಕೋಟಿ ರೂ.ವರೆಗೆ ಬಿಡ್ ಮಾಡಿತು ಎಂದಿಟ್ಟುಕೊಳ್ಳಿ. ಈ ವೇಳೆ ಆ ಮೊತ್ತವನ್ನು ತಾವೇ ನೀಡುತ್ತೇವೆ ಎಂದು ಪಾಟಿದಾರ್ ಅವರನ್ನು ಆರ್ಸಿಬಿ ಮರಳಿ ಖರೀದಿಸಬಹುದು. ಒಂದು ವೇಳೆ ಬಿಡುಗಡೆ ಮಾಡಿದ ತಂಡವು ಮರಳಿ ಖರೀದಿಸಲು ಇಚ್ಛಿಸದಿದ್ದರೆ ಮಾತ್ರ ಆರ್ಟಿಎಂ ಆಯ್ಕೆಯಲ್ಲಿ ಕಾಣಿಸಿಕೊಂಡ ಆಟಗಾರರು ಕೊನೆಯದಾಗಿ ಬಿಡ್ ಮಾಡಿದ ತಂಡದ ಪಾಲಾಗಲಿದ್ದಾರೆ.
Published On - 2:08 pm, Wed, 30 October 24