IPL 2025: ಆರ್​ಸಿಬಿ ಸೇರಲು ಬಯಸಿದ್ರಾ ಪಂತ್? ವೈರಲ್ ಟ್ವೀಟ್ ಬಗ್ಗೆ ರಿಷಬ್ ಹೇಳಿದ್ದೇನು?

|

Updated on: Sep 26, 2024 | 5:39 PM

Rishabh Pant: ತನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪಂತ್ ಗರಂ ಆಗಿದ್ದಾರೆ. ಸತ್ಯ ಗೊತ್ತಿಲ್ಲದೆ ಏಕೆ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತೀರಿ ಎಂದು ಪಂತ್, ನೆಟ್ಟಿಗರ ವಿರುದ್ಧ ಖಾರವಾಗಿ ಮಾತನಾಡಿದ್ದಾರೆ. ಅಷ್ಟಕ್ಕೂ ಪಂತ್ ಈ ರೀತಿಯಾಗಿ ಪ್ರತಿಕ್ರಿಯಿಸಲು ಕಾರಣವೇನು ಎಂಬ ವಿವರ ಇಲ್ಲಿದೆ.

IPL 2025: ಆರ್​ಸಿಬಿ ಸೇರಲು ಬಯಸಿದ್ರಾ ಪಂತ್? ವೈರಲ್ ಟ್ವೀಟ್ ಬಗ್ಗೆ ರಿಷಬ್ ಹೇಳಿದ್ದೇನು?
ರಿಷಬ್ ಪಂತ್
Follow us on

ಭೀಕರ ಅಪಘಾತಕ್ಕೀಡಾಗಿ ವರ್ಷಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್, ಕೆಲವು ತಿಂಗಳುಗಳಿಂದ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಂತ್ ಪ್ರಸ್ತುತ ಕಾನ್ಪುರದಲ್ಲಿದ್ದು ಶುಕ್ರವಾರದಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಆದರೆ ಇದಕ್ಕೂ ಮುನ್ನ ತನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪಂತ್ ಗರಂ ಆಗಿದ್ದಾರೆ. ಸತ್ಯ ಗೊತ್ತಿಲ್ಲದೆ ಏಕೆ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತೀರಿ ಎಂದು ಪಂತ್, ನೆಟ್ಟಿಗರ ವಿರುದ್ಧ ಖಾರವಾಗಿ ಮಾತನಾಡಿದ್ದಾರೆ.

ಟ್ವೀಟ್‌ನಲ್ಲಿ ಇರುವುದೇನು?

ವಾಸ್ತವವಾಗಿ, ಇಂದು ಬೆಳಿಗ್ಗೆಯಿಂದ ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಪಂತ್​ಗೆ ಸಂಬಂಧಿಸಿದ ಪೋಸ್ಟ್​ವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಈ ಪೋಸ್ಟ್​ನಲ್ಲಿ, ರಿಷಬ್ ಪಂತ್ ಆರ್​ಸಿಬಿ ಸೇರಲು ಉತ್ಸುಕರಾಗಿದ್ದು, ಅವರ ಮ್ಯಾನೇಜರ್ ಮೂಲಕ ಆರ್​ಸಿಬಿ ಮಾಲೀಕರನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಪಂತ್, ಆರ್​ಸಿಬಿ ತಂಡದ ನಾಯಕರಾಗಲು ಬಯಸಿದ್ದರು. ಆದರೆ ಆರ್​ಸಿಬಿ ಮ್ಯಾನೇಜ್​ಮೆಂಟ್ ಪಂತ್ ಅವರ ಬೇಡಿಕೆಗೆ ಸಮ್ಮತಿಸಲಿಲ್ಲ. ಅಲ್ಲದೆ ಪಂತ್ ಆರ್​ಸಿಬಿಗೆ ಬರುವುದು ವಿರಾಟ್ ಕೊಹ್ಲಿಗೆ ಇಷ್ಟವಿಲ್ಲ ಎಂದು ಬರೆಯಲಾಗಿತ್ತು. ಆದರೆ ಈ ಸುದ್ದಿಯನ್ನು ಆಧಾರರಹಿತ ಎಂದು ಕರೆದಿರುವ ಪಂತ್, ಸುಳ್ಳ ಸುದ್ದಿಯನ್ನು ಹಬ್ಬಿಸದಂತೆ ಸಲಹೆ ನೀಡಿದ್ದಾರೆ.

ಕೋಪಗೊಂಡ ರಿಷಬ್ ಪಂತ್

ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ರಿಷಬ್ ಪಂತ್, ‘ಸುಳ್ಳು ಸುದ್ದಿ. ಸಾಮಾಜಿಕ ಜಾಲತಾಣಗಳಲ್ಲಿ ಯಾಕೆ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತೀರಿ? ಇದು ಸಂಪೂರ್ಣವಾಗಿ ತಪ್ಪು. ಅನಗತ್ಯವಾಗಿ ಸುಳ್ಳು ವಾತಾವರಣ ಸೃಷ್ಟಿಸಬೇಡಿ. ಇದು ಸಂಭವಿಸುತ್ತಿರುವುದು ಇದೇ ಮೊದಲಲ್ಲ ಅಥವಾ ಕೊನೆಯ ಬಾರಿಯೂ ಅಲ್ಲ ಆದರೆ ಬರೆಯುವ ಮೊದಲು ದಯವಿಟ್ಟು ನಿಮ್ಮ ಆಪಾದಿತ ಮೂಲಗಳನ್ನು ಪರಿಶೀಲಿಸಿ. ದಿನೇ ದಿನೇ ಈ ರೀತಿಯ ಕೆಲಸಗಳು ಹೆಚ್ಚಾಗುತ್ತಿವೆ. ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಈ ಹೇಳಿಕೆ ಅನ್ವಯವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಪಂತ್ ಕಣ್ಣು ಕಾನ್ಪುರದ ಮೇಲೆ

ಇನ್ನು ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ತಿಂಗಳುಗಳ ನಂತರ ಕಾಣಿಸಿಕೊಳ್ಳುತ್ತಿರುವ ಪಂತ್, ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದರು. ಇದೀಗ ಕಾನ್ಪುರದಲ್ಲಿ ನಡೆಯಲ್ಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ಮುಂದುವರೆಸುವ ಗುರಿಯೊಂದಿಗೆ ಪಂತ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ