
ಮೇ 3 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB vs CSK) ಗೆಲುವು ಸಾಧಿಸುವಲ್ಲಿ ತಂಡದ ವೇಗದ ಬೌಲರ್ ಯಶ್ ದಯಾಳ್ (Yash Dayal) ಪ್ರಮುಖ ಪಾತ್ರವಹಿಸಿದರು. ವಾಸ್ತವವಾಗಿ ಕೊನೆಯ ಓವರ್‌ನಲ್ಲಿ ಸಿಎಸ್ಕೆ ಗೆಲುವಿಗೆ 15 ರನ್ಗಳ ಅವಶ್ಯಕತೆ ಇತ್ತು. ಸ್ಟ್ರೈಕ್ನಲ್ಲಿ ಗೇಮ್ ಫಿನಿಶರ್ ಖ್ಯಾತಿಯ ಧೋನಿ ಇದ್ದರೆ, ನಾನ್ ಸ್ಟ್ರೈಕ್ನಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದ ಜಡೇಜಾ ಇದ್ದರು. ಇಂತಹ ಸ್ಫೋಟಕ ದಾಂಡಿಗರಿದ್ದರೂ ಚೆನ್ನೈ ತಂಡಕ್ಕೆ ಗೆಲುವು ಸಿಗಲಿಲ್ಲ. ಇದೇ ರೀತಿಯ ಪ್ರದರ್ಶನವನ್ನು ಕಳೆದ ಸೀಸನ್ನಲ್ಲೂ ಇದೇ ಸಿಎಸ್ಕೆ ವಿರುದ್ಧ ಯಶ್ ದಯಾಳ್ ನೀಡಿದ್ದರು. ಕಳೆದ ಸೀಸನ್ ಮ್ಯಾಚ್ನಲ್ಲೂ ಧೋನಿ ಹಾಗೂ ಜಡೇಜಾ ಕ್ರೀಸ್ನಲ್ಲಿದ್ದರೂ 17 ರನ್ಗಳ ಗುರಿಯನ್ನು ಈ ಇಬ್ಬರು ದಾಂಡಿಗರಿಗೆ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಒಂದು ಸಮಯದಲ್ಲಿ 5 ಎಸೆತಗಳಲ್ಲಿ 5 ಸಿಕ್ಸರ್ ಹೊಡಿಸಿಕೊಂಡು ವೃತ್ತಿಜೀವನಕ್ಕೆ ಕುತ್ತು ತಂದುಕೊಂಡಿದ್ದ ಯಶ್ ದಯಾಳ್ ಇದೀಗ ಆರ್‌ಸಿಬಿ ಪಾಲಿನ ಆಪತ್ಭಾಂದವರಾಗಿದ್ದಾರೆ. ದಯಾಳ್ ಅವರ ಈ ರೀತಿಯ ಬದಲಾವಣೆಗೆ ಕೊಹ್ಲಿಯೇ (Virat Kohli) ಕಾರಣರೆಂದು ಅವರ ತಂದೆ ಹೇಳಿಕೊಂಡಿದ್ದಾರೆ.
ಯಶ್ ದಯಾಳ್ ಅವರ ಪ್ರದರ್ಶನದ ಬಗ್ಗೆ ಮಾತನಾಡಿರುವ ಅವರ ತಂದೆ, ‘ವಿರಾಟ್ ಕೊಹ್ಲಿಯಿಂದಾಗಿ ನನ್ನ ಮಗ ಇಂದು ಮುಕ್ತವಾಗಿ ಆಡುತ್ತಿದ್ದಾನೆ. ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾನೆ. ನನ್ನ ಮಗ ಆರ್‌ಸಿಬಿ ಸೇರಿದಾಗಿನಿಂದ ವಿರಾಟ್ ಕೊಹ್ಲಿ ಅವನ ಜೊತೆ ನಿರಂತರವಾಗಿ ಮಾತನಾಡುತ್ತಿದ್ದಾರೆ. ಕೊಹ್ಲಿ ಆಗಾಗ್ಗೆ ದಯಾಳ್ನನ್ನು ತನ್ನ ಕೋಣೆಗೆ ಕರೆಸಿಕೊಂಡು ಮಾತನಾಡುತ್ತಾರೆ. ಹಲವು ಬಾರಿ ಅವರೇ ಯಶ್ ಕೋಣೆಗೆ ಹೋಗಿ ಆಟದ ಬಗ್ಗೆ ವಿವರಿಸುತ್ತಲೇ ಇರುತ್ತಾರೆ. ಕಷ್ಟಪಟ್ಟು ಕೆಲಸ ಮಾಡು, ನಾನು ನಿನ್ನೊಂದಿಗಿದ್ದೇನೆ, ಚಿಂತಿಸಬೇಡ, ಕಷ್ಟಪಟ್ಟು ಕೆಲಸ ಮಾಡುವುದನ್ನು ನಿಲ್ಲಿಸಬೇಡಿ, ತಪ್ಪುಗಳನ್ನು ಮಾಡು ಆದರೆ ಅವುಗಳಿಂದ ಕಲಿ ಮತ್ತು ಮುಂದುವರಿ ಎಂದು ಕೊಹ್ಲಿ, ದಯಾಳ್ಗೆ ಸಲಹೆ ನೀಡಿದ್ದಾರೆ ಎಂದು ಯಶ್ ದಯಾಳ್ ತಂದೆ ಹೇಳಿಕೊಂಡಿದ್ದಾರೆ.
ವಾಸ್ತವವಾಗಿ 2023 ರ ಐಪಿಎಲ್‌ನಲ್ಲಿ ಯಶ್ ದಯಾಳ್ ಗುಜರಾತ್ ಟೈಟಾನ್ಸ್ ಪರ ಆಡುವಾಗ, ಕೊನೆಯ ಓವರ್‌ನಲ್ಲಿ 5 ಎಸೆತಗಳಲ್ಲಿ ಸತತ 5 ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದರು. ಇದರಿಂದಾಗಿ ತುಂಬಾ ಅಪಹಾಸ್ಯಕ್ಕೊಳಗಾಗಿದ್ದ ದಯಾಳ್, ಆ ಬಳಿಕ ಖಿನ್ನತೆಗೂ ಒಳಗಾಗಿದ್ದರು. ಆದರೆ ಐಪಿಎಲ್ 2024 ರಲ್ಲಿ ಆರ್‌ಸಿಬಿ ಸೇರಿದ ದಯಾಳ್ ವೃತ್ತಿಜೀವನದಲ್ಲಿ ಅದ್ಭುತವೇ ನಡೆದು ಹೋಯಿತು. ಈ ಸೀಸನ್‌ನಲ್ಲಿ ಧೋನಿ ವಿರುದ್ಧ 17 ರನ್‌ಗಳನ್ನು ಡಿಫೆಂಡ್ ಮಾಡುವ ಮೂಲಕ ಹೀರೋ ಆಗಿದ್ದ ದಯಾಳ್, ಕಳೆದ ಎರಡು ವರ್ಷಗಳಲ್ಲಿ ಕ್ರಿಕೆಟಿಗರಾಗಿ ಸಾಕಷ್ಟು ಸುಧಾರಿಸಿದ್ದಾರೆ.
IPL 2025: ಐಪಿಎಲ್ ಪ್ರಸಾರವನ್ನು ನಿಷೇಧಿಸಿದ ಪಾಕಿಸ್ತಾನಕ
ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಯಶ್ ದಯಾಳ್ 6 ಎಸೆತಗಳಲ್ಲಿ 15 ರನ್‌ಗಳನ್ನು ರಕ್ಷಿಸಬೇಕಾಯಿತು. ಮೊದಲ 2 ಎಸೆತಗಳಲ್ಲಿ ಕೇವಲ 2 ರನ್‌ಗಳನ್ನು ನೀಡಿದ ದಯಾಳ್, ಕಳೆದ ಸೀಸನ್‌ನಂತೆ ಈ ಬಾರಿಯೂ ಮೂರನೇ ಎಸೆತದಲ್ಲಿ ಧೋನಿಯನ್ನು ಔಟ್ ಮಾಡಿದರು. ಆದರೆ ನಾಲ್ಕನೇ ಎಸೆತವನ್ನು ದಯಾಳ್ ನೋ ಬಾಲ್ ಎಸೆದರು, ಆ ಎಸೆತದಲ್ಲಿ ಶಿವಂ ದುಬೆ ಸಿಕ್ಸರ್ ಬಾರಿಸಿದರು. ಆ ಬಳಿಕ ಚೆನ್ನೈ ಗೆಲುವಿಗೆ 3 ಎಸೆತಗಳಲ್ಲಿ ಕೇವಲ 6 ರನ್ಗಳ ಅವಶ್ಯಕತೆಯಿತ್ತು. ಆದರೆ ದಯಾಳ್ ತಾಳ್ಮೆಯಿಂದ ಆಟ ಮುಂದುವರಿಸಿ ಮುಂದಿನ 3 ಎಸೆತಗಳಲ್ಲಿ ಕೇವಲ 3 ರನ್ ನೀಡಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Sun, 4 May 25