IPL 2026: ಪಂಜಾಬ್​ಗೆ ಸುವರ್ಣಾವಕಾಶ; ಇಬ್ಬರು ಸ್ಟಾರ್ ಆಟಗಾರರಿಲ್ಲದೆ ಕಣಕ್ಕಿಳಿಯಲಿದೆ ಲಕ್ನೋ

LSG vs PBKS IPL 2026: ಐಪಿಎಲ್ 2026ರ 68ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ಗೆ ಪ್ಲೇಆಫ್ ತಲುಪಲು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಅನಿವಾರ್ಯ. ಲಕ್ನೋ ತಂಡ ಈಗಾಗಲೇ ಸ್ಪರ್ಧೆಯಿಂದ ಹೊರಗಿದ್ದರೂ, ಮಿಚೆಲ್ ಮಾರ್ಷ್ ಮತ್ತು ಏಡೆನ್ ಮಾರ್ಕ್ರಾಮ್ ಅಲಭ್ಯತೆ ಪಂಜಾಬ್‌ಗೆ ದೊಡ್ಡ ನಿರಾಳತೆಯನ್ನು ನೀಡಿದೆ. ಮಾರ್ಷ್ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಅವರ ಅನುಪಸ್ಥಿತಿ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು.

IPL 2026: ಪಂಜಾಬ್​ಗೆ ಸುವರ್ಣಾವಕಾಶ; ಇಬ್ಬರು ಸ್ಟಾರ್ ಆಟಗಾರರಿಲ್ಲದೆ ಕಣಕ್ಕಿಳಿಯಲಿದೆ ಲಕ್ನೋ
Lsg

Updated on: May 23, 2026 | 5:04 PM

ಐಪಿಎಲ್ 2026 (IPL2026) ರ 68 ನೇ ಲೀಗ್ ಪಂದ್ಯವು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ (LSG vs  PBKS) ನಡುವೆ ನಡೆಯಲಿದೆ. ಪ್ಲೇಆಫ್ ದೃಷ್ಟಿಯಿಂದ ಪಂಜಾಬ್ ಕಿಂಗ್ಸ್‌ಗೆ ಈ ಪಂದ್ಯ ನಿರ್ಣಾಯಕವಾಗಿದೆ. ಈ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಗೆಲ್ಲದಿದ್ದರೆ, ಪ್ಲೇಆಫ್ ರೇಸ್‌ನಿಂದ ಹೊರಗುಳಿಯಲಿದೆ. ಹೀಗಾಗಿ ಪಂಜಾಬ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ ಮತ್ತೊಂದೆಡೆ, ಲಕ್ನೋ ತಂಡ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿರುವುದರಿಂದ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಈ ಪಂದ್ಯಕ್ಕೂ ಮುನ್ನ ಪಂಜಾಬ್​ಗೆ ನಿರಾಳಕರ ಸುದ್ದಿ ಸಿಕ್ಕಿದ್ದು, ಈ ಪಂದ್ಯದಲ್ಲಿ ಲಕ್ನೋ ತಂಡದ ಇಬ್ಬರು ಸ್ಟಾರ್ ಬ್ಯಾಟ್ಸ್‌ಮನ್​ಗಳಾದ ಮಿಚೆಲ್ ಮಾರ್ಷ್​ ಹಾಗೂ ಏಡೆನ್ ಮಾರ್ಕ್ರಾಮ್ ಆಡುವುದಿಲ್ಲ ಎಂದು ವರದಿಯಾಗಿದೆ.

ತಂಡದ ತೊರೆದ ಮಿಚೆಲ್ ಮಾರ್ಷ್​

ಇಎಸ್‌ಪಿಎನ್‌ಕ್ರಿನ್‌ಫೋ ವರದಿಯ ಪ್ರಕಾರ, ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಲಕ್ನೋ ತಂಡವನ್ನು ತೊರೆದಿದ್ದು ಅವರು ಈ ಪಂದ್ಯವನ್ನು ಆಡುವುದಿಲ್ಲ. ಮಾರ್ಷ್​ ಅಲಭ್ಯತೆ ಪಂಜಾಬ್ ತಂಡಕ್ಕೆ ಕೊಂಚ ನಿರಾಳತೆ ತಂದಿದೆ. ಏಕೆಂದರೆ ಮಾರ್ಷ್​ ಪ್ರಸ್ತತ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಸೀಸನ್​ನಲ್ಲಿ ಆಡಿದ 13 ಇನ್ನಿಂಗ್ಸ್‌ಗಳಲ್ಲಿ 563 ರನ್ ಗಳಿಸಿದ್ದಾರೆ. ಅಲ್ಲದೆ ಮಾರ್ಷ್​ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶತಕ ಬಾರಿಸಿದ್ದರು. ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 90 ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ 96 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.

ಮಾರ್ಕ್ರಾಮ್ ಕೂಡ ಔಟ್

ಮಾರ್ಷ್​ ಜೊತೆಗೆ ದಕ್ಷಿಣ ಆಪ್ರಿಕಾದ ಸ್ಟಾರ್ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಕೂಡ ಕೊನೆಯ ಲೀಗ್ ಪಂದ್ಯದಲ್ಲಿ ಆಡುತ್ತಿಲ್ಲ. ವಾಸ್ತವವಾಗಿ ಮಾರ್ಕ್ರಾಮ್ ರಾಜಸ್ಥಾನ್ ವಿರುದ್ಧದ ಪಂದ್ಯಕ್ಕೂ ಲಭ್ಯರಿರಲಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಅವರು ಈಗಾಗಲೇ ತಂಡವನ್ನು ತೊರೆದು ದಕ್ಷಿಣ ಆಫ್ರಿಕಾಗೆ ವಾಪಸ್ಸಾಗಿದ್ದಾರೆ. ಈ ಸೀಸನ್​ನಲ್ಲಿ ಮಾರ್ಕ್ರಾಮ್ ಅವರ ಪ್ರದರ್ಶನವೂ ಅಷ್ಟೇನೂ ಹೇಳಿಕೊಳ್ಳುವಂತಿರಲಿಲ್ಲ. ಹೀಗಾಗಿ ಮಾರ್ಕ್ರಾಮ್ ಅಲಭ್ಯತೆ ಲಕ್ನೋ ತಂಡಕ್ಕೆ ಹೆಚ್ಚು ತೊಂದರೆ ನೀಡದಿದ್ದರೂ, ಮಾರ್ಷ್​ ಅವರ ಅಲಭ್ಯತೆ ಲಕ್ನೋ ತಂಡಕ್ಕೆ ದೊಡ್ಡ ಹೊಡೆತವಾಗಿದೆ.

ಮಾರ್ಷ್ ಬದಲಿಗೆ ಯಾರು?

ಅರ್ಶಿನ್ ಕುಲಕರ್ಣಿ ಪಂಜಾಬ್ ಕಿಂಗ್ಸ್ ವಿರುದ್ಧ ಮಿಚೆಲ್ ಮಾರ್ಷ್ ಬದಲಿಗೆ ಜೋಶ್ ಇಂಗ್ಲಿಸ್ ಜೊತೆ ಆರಂಭಿಕರಾಗಿ ಆಡಬಹುದು. ಈ ಆವೃತ್ತಿಯಲ್ಲಿ ಅರ್ಶಿನ್ ಕುಲಕರ್ಣಿ ಆರ್‌ಸಿಬಿ ವಿರುದ್ಧ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದರು. ಇದೀಗ ಅವರು ಇಂಗ್ಲಿಸ್ ಜೊತೆಗೆ ಇನ್ನಿಂಗ್ಸ್ ಆರಂಭಿಸಬಹುದು.

ಸಂಭಾವ್ಯ ಪ್ಲೇಯಿಂಗ್ 11

ಲಕ್ನೋ ಸೂಪರ್ ಜೈಂಟ್ಸ್: ಅರ್ಶಿನ್ ಕುಲಕರ್ಣಿ, ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಅಬ್ದುಲ್ ಸಮದ್, ಆಯುಷ್ ಬಡೋನಿ, ಶಹಬಾಜ್ ಅಹ್ಮದ್, ಮೊಹ್ಸಿನ್ ಖಾನ್, ಮಾಯಾಂಕ್ ಯಾದವ್, ಆಕಾಶ್ ಸಿಂಗ್, ಪ್ರಿನ್ಸ್ ಯಾದವ್.

ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಾಂಶ್ ಶೆಡ್ಜ್, ಮಾರ್ಕಸ್ ಸ್ಟೊಯಿನಿಸ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಉಮರ್ಜಾಯ್, ಹರ್ಪ್ರೀತ್ ಬ್ರಾರ್, ಲಾಕಿ ಫರ್ಗುಸನ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Sat, 23 May 26

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us