
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಐಪಿಎಲ್ 2026 (IPL 2026) ರ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ (CSK vs PBKS) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 209 ರನ್ ಗಳಿಸಿತು. ತಂಡದ ಪರ ಆಯುಷ್ ಮ್ಹಾತ್ರೆ 73 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಈ ಗುರಿ ಬೆನ್ನಟ್ಟಿದ ಪಂಜಾಬ್ ನಾಯಕ ಶ್ರೇಯಸ್ ಅವರ ಅರ್ಧಶತಕದ ನೆರವಿನಿಂದ 18.4 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ಇದರೊಂದಿಗೆ ಪಂಜಾಬ್ ಲೀಗ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದರೆ, ಇತ್ತ ಸಿಎಸ್‌ಕೆ ಸತತ ಎರಡನೇ ಸೋಲು ಕಂಡಿತು.
ಎಂದಿನಂತೆ ಈ ಪಂದ್ಯದಲ್ಲೂ ಚೆನ್ನೈಗೆ ಉತ್ತಮ ಆರಂಭ ಸಿಗಲಿಲ್ಲ. ಬಹುನಿರೀಕ್ಷಿತ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಮತ್ತೆ ವಿಫಲರಾದರು. ಆದಾಗ್ಯೂ 20 ವರ್ಷದ ಆಯುಷ್ ಮ್ಹಾತ್ರೆ 73 ರನ್ ಗಳಿಸುವ ಮೂಲಕ ತಂಡವನ್ನು ಬಲವಾದ ಸ್ಥಿತಿಗೆ ಕೊಂಡೊಯ್ದರು. ಸರ್ಫರಾಜ್ ಖಾನ್ ಕೂಡ ಕೇವಲ 12 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 32 ರನ್ ಗಳಿಸಿದರು. ಅದೇ ಸಮಯದಲ್ಲಿ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕಾರ್ತಿಕ್ ಶರ್ಮಾ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. ಆದರೆ ಶಿವಂ ದುಬೆ ಕೊನೆಯ ಓವರ್‌ನಲ್ಲಿ ತಮ್ಮ ಅನುಭವವನ್ನು ಪೂರ್ಣವಾಗಿ ಬಳಸಿಕೊಂಡು 28 ಎಸೆತಗಳಲ್ಲಿ 45 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಪ್ರದರ್ಶನವು ಚೆನ್ನೈ ತಂಡವನ್ನು 200 ರನ್‌ಗಳ ಗಡಿ ದಾಟಿಸಿತು.
ಗೆಲುವಿಗೆ 210 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡದ ಪರ ಪ್ರಿಯಾಂಶ್ ಆರ್ಯ ಮತ್ತು ಪ್ರಬ್ಸಿಮ್ರಾನ್ ಸಿಂಗ್ ಉತ್ತಮ ಆರಂಭ ನೀಡಿದರು. ಆರಂಭದಿಂದಲೇ ಅಬ್ಬರಿಸಿದ ಆರ್ಯ ಕೇವಲ 11 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 39 ರನ್ ಗಳಿಸಿ ಔಟಾದರು. ಇದರ ನಂತರ, ಪ್ರಬ್ಸಿಮ್ರಾನ್ 34 ಎಸೆತಗಳಲ್ಲಿ 43 ರನ್ ಗಳಿಸಿದರೆ, ಕೂಪರ್ 22 ಎಸೆತಗಳಲ್ಲಿ 36 ರನ್ ಗಳಿಸಿದರು. ನಂತರ, ಶ್ರೇಯಸ್ ಅಯ್ಯರ್ ಜೊತೆಗೂಡಿದ ನೆಹಾಲ್ ವದೇರಾ, ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ಗಳಿಗೆ ನೀರುಣಿಸಲು ಪ್ರಾರಂಭಿಸಿದರು.
CSK vs PBKS IPL 2026 Highlights: ತವರಿನಲ್ಲಿ ಸತತ 6ನೇ ಪಂದ್ಯ ಸೋತ ಸಿಎಸ್‌ಕೆ
ಇಬ್ಬರೂ ಅದ್ಭುತವಾಗಿ ಆಡಿ ಪಂಜಾಬ್ ಕಿಂಗ್ಸ್ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. 29 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಅನ್ಶುಲ್ ಕಾಂಬೋಜ್ ಔಟ್ ಮಾಡಿದರೆ, 9 ಎಸೆತಗಳಲ್ಲಿ 10 ರನ್ ಗಳಿಸಿ ವದೇರಾ ಕೂಡ ಔಟಾದರು. ಕೊನೆಯಲ್ಲಿ ಪಂಜಾಬ್ ಕಿಂಗ್ಸ್ ಗೆಲ್ಲಲು 12 ಎಸೆತಗಳಲ್ಲಿ 12 ರನ್ ಅಗತ್ಯವಿದ್ದಾಗ, ಶಶಾಂಕ್ ಸಿಂಗ್ ಮತ್ತು ಸ್ಟೊಯಿನಿಸ್ ಜೊತೆಯಾಟದಿಂದ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:23 pm, Fri, 3 April 26