
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಪರ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರಾ ಎಂಬುದೇ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ನಿಗೂಢತೆಯನ್ನು ಕಾಯ್ದುಕೊಂಡಿದ್ದಾರೆ.
ಏಪ್ರಿಲ್ 18 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಫಿಲ್ ಸಾಲ್ಟ್ ಅವರ ಬೆರಳಿಗೆ ಗಾಯವಾಗಿತ್ತು. ಈ ಗಾಯದ ಕಾರಣ ಅವರು ಚಿಕಿತ್ಸೆಗಾಗಿ ಇಂಗ್ಲೆಂಡ್ಗೆ ತೆರಳಿದ್ದರು. ಇದೀಗ ಅವರು ಆರ್ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಇತ್ತ ಪ್ಲೇಆಫ್ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡವನ್ನು ಕೂಡಿಕೊಂಡರೂ ಸಾಲ್ಟ್ ಅವರನ್ನು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಣಕ್ಕಿಳಿಸಿರಲಿಲ್ಲ.
ಇದೀಗ ಆರ್ಸಿಬಿ ತಂಡವು ಕೊನೆಯ ಪಂದ್ಯವಾಡಲು ಸಜ್ಜಾಗಿದೆ. ಈ ಪಂದ್ಯದಲ್ಲಾದರೂ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಯನ್ನು ರಜತ್ ಪಾಟಿದಾರ್ ಅವರ ಮುಂದಿಡಲಾಗಿದೆ.
ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ರಜತ್ ಪಾಟಿದಾರ್, ಫಿಲ್ ಸಾಲ್ಟ್ ಸದ್ಯ ಸಂಪೂರ್ಣ ಫಿಟ್ ಆಗಿದ್ದಾರೆ. ಅಲ್ಲದೆ ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಆದರೆ ನಾವು ಇನ್ನೂ ಕೂಡ ಪ್ಲೇಯಿಂಗ್ ಇಲೆವೆನ್ ನಿರ್ಧರಿಸಿಲ್ಲ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಅಂದರೆ ಫಿಲ್ ಸಾಲ್ಟ್ ಅವರನ್ನು ಪ್ಲೇಯಿಂಗ್ ಇಲೆವೆನ್ಗೆ ಸೇರಿಸಿಕೊಳ್ಳುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ ಇಂದಿನ ಮ್ಯಾಚ್ನಲ್ಲಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ಕೂಡ ಅಂತಿಮ ನಿರ್ಧಾರ ಮಾಡಿಲ್ಲ ಎಂದು ರಜತ್ ಪಾಟಿದಾರ್ ತಿಳಿಸಿದ್ದಾರೆ.
ಒಂದು ವೇಳೆ ಫೈನಲ್ ಪಂದ್ಯದಲ್ಲಿ ರಜತ್ ಪಾಟಿದಾರ್ ಕಣಕ್ಕಿಳಿದಿದ್ದರೆ ಆರಂಭಿಕನಾಗಿ ವೆಂಕಟೇಶ್ ಅಯ್ಯರ್ ಮುಂದುವರೆಯಲಿದ್ದಾರೆ. ಕಳೆದ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸಿದ್ದ ಅಯ್ಯರ್ ಆರ್ಸಿಬಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ: IPL 2026 Final: ಫೈನಲ್ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ?
ಹೀಗಾಗಿ ಫಿಲ್ ಸಾಲ್ಟ್ ಹೊರಗುಳಿದರೆ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಇನಿಂಗ್ಸ್ ಆರಂಭಿಸಲಿದ್ದಾರೆ. ಹಾಗೆಯೇ ವಿದೇಶಿ ಆಟಗಾರರನ್ನಾಗಿ ಟಿಮ್ ಡೇವಿಡ್, ಜೋಶ್ ಹೇಝಲ್ವುಡ್, ರೊಮಾರಿಯೊ ಶೆಫರ್ಡ್ ಹಾಗೂ ಜೇಕಬ್ ಡಫಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
Published On - 12:29 pm, Sun, 31 May 26