IPL 2026: ಕಳೆದ 5 ಆವೃತ್ತಿಗಳ ಫಲಿತಾಂಶ; ಈ ಬಾರಿಯೂ ಆರ್​ಸಿಬಿಯೇ ಚಾಂಪಿಯನ್

RCB IPL 2026 Championship Prediction: 2026ರ ಐಪಿಎಲ್ ಲೀಗ್ ಸುತ್ತು ಮುಕ್ತಾಯಗೊಂಡಿದೆ. ಅಗ್ರಸ್ಥಾನಿ RCB ಕ್ವಾಲಿಫೈಯರ್ 1ರಲ್ಲಿ GT ತಂಡವನ್ನು ಎದುರಿಸಲಿದೆ. 2020ರಿಂದ 2025ರವರೆಗಿನ ಐಪಿಎಲ್ ಚಾಂಪಿಯನ್‌ಗಳನ್ನು ವಿಶ್ಲೇಷಿಸಿದರೆ, ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನ ಅಥವಾ ಎರಡನೇ ಸ್ಥಾನ ಪಡೆದ ತಂಡಗಳು ಪರ್ಯಾಯವಾಗಿ ಪ್ರಶಸ್ತಿ ಗೆದ್ದಿರುವುದು ಕಂಡುಬರುತ್ತದೆ. ಈ ಟ್ರೆಂಡ್ ಮುಂದುವರೆದರೆ, 2026ರಲ್ಲಿ ಅಗ್ರಸ್ಥಾನದಲ್ಲಿರುವ RCB ಚಾಂಪಿಯನ್ ಆಗಲಿದೆ ಎಂದು ಈ ಲೇಖನ ವಿವರಿಸುತ್ತದೆ.

IPL 2026: ಕಳೆದ 5 ಆವೃತ್ತಿಗಳ ಫಲಿತಾಂಶ; ಈ ಬಾರಿಯೂ ಆರ್​ಸಿಬಿಯೇ ಚಾಂಪಿಯನ್
Rcb

Updated on: May 24, 2026 | 5:30 PM

2026 ರ ಐಪಿಎಲ್‌ನ (IPL 2026) ಲೀಗ್ ಸುತ್ತು ಅಂತ್ಯವಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಹಾಲಿ ಚಾಂಪಿಯನ್ ಆರ್​ಸಿಬಿ (RCB) ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಏಕೆಂದರೆ ಉಭಯ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ. ಅಗ್ರಸ್ಥಾನದಲ್ಲಿರುವ ಆರ್​ಸಿಬಿ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿತು. ಇತ್ತ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಕೂಡ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದೆ. ಆದರೆ ಗುಜರಾತ್ ತಂಡದ ನೆಟ್ ರನ್​ರೇಟ್ ಆರ್​ಸಿಬಿಗಿಂತ ಕಡಿಮೆ ಇದೆ.

ಆರ್​ಸಿಬಿಯೇ ಚಾಂಪಿಯನ್

ಉಭಯ ತಂಡಗಳು ಈ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿವೆ. ಹೀಗಾಗಿ ಯಾವ ತಂಡಕ್ಕೆ ಚಾಂಪಿಯನ್ ಪಟ್ಟ ಸಿಗಲಿದೆ ಎಂದು ಹೇಳುವುದು ಕಷ್ಟಕರ. ಆದರೆ ಕಳೆದ 5 ಐಪಿಎಲ್ ಆವೃತ್ತಿಗಳಲ್ಲಿ ಯಾವ ತಂಡ ಚಾಂಪಿಯನ್ ಆಗಿದೆ ಎಂಬುದನ್ನು ಗಮನಿಸಿದರೆ, ಕಾಕತಾಳೀಯವಾಗಿ ಈ ಬಾರಿ ಆರ್​ಸಿಬಿಯೇ ಚಾಂಪಿಯನ್ ಆಗಲಿದೆ. ಅದು ಹೇಗೆ ಎಂಬುದನ್ನು ವಿವರವಾಗಿ ನೋಡುವುದಾದರೆ..

ಕಳೆದ 5 ವರ್ಷಗಳ ಅಂಕಿ ಅಂಶ ಹೀಗಿದೆ

2020 ರ ಐಪಿಎಲ್‌ನ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡ ಎರಡನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಎತ್ತಿಹಿಡಿದಿತ್ತು. ಇದಾದ ಬಳಿಕ 2021 ರ ಐಪಿಎಲ್​ನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಸಿಎಸ್​ಕೆ, ಫೈನಲ್ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತ್ತು. ಹಾಗೆಯೇ 2022 ರ ಐಪಿಎಲ್​ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದ ಗುಜರಾತ್ ತಂಡ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು.

ಇದಾದ ಬಳಿಕ ನಡೆದಿದ್ದ 2023 ರ ಐಪಿಎಲ್‌ನಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಸಿಎಸ್​ಕೆ, ಗುಜರಾತ್ ತಂಡವನ್ನು ಮಣಿಸಿ ಪ್ರಶಸ್ತಿ ಮೂಡಿಗೇರಿಸಿಕೊಂಡಿತ್ತು. ನಂತರ 2024 ರ ಐಪಿಎಲ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದ ಕೆಕೆಆರ್, ಫೈನಲ್​ನಲ್ಲಿ ಸನ್‌ರೈಸರ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಇನ್ನು 2025 ರ ಆವೃತ್ತಿಯಲ್ಲಿ ಅಂದರೆ ಹಿಂದಿನ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಆರ್​ಸಿಬಿ, ಪಂಜಾಬ್ ತಂಡವನ್ನು ಸೋಲಿಸಿ ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿದಿತ್ತು.

IPL 2026: ಆರ್​ಸಿಬಿ- ಗುಜರಾತ್ ಕ್ವಾಲಿಫೈಯರ್ 1 ಪಂದ್ಯ ರದ್ದಾದರೆ ಯಾರಿಗೆ ಫೈನಲ್ ಟಿಕೆಟ್?

ಅಂದರೆ 2020 ರ ಐಪಿಎಲ್​ನಿಂದ ಕಳೆದ ಆವೃತ್ತಿಯವರೆಗೆ ಗಮನಿಸಿದರೆ, 2020, 2022, 2024 ರ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದ ತಂಡ ಚಾಂಪಿಯನ್ ಆದರೆ, 2021, 2023 ಹಾಗೂ 2025 ರ ಆವೃತ್ತಿಗಳಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ತಂಡಗಳು ಚಾಂಪಿಯನ್ ಆಗಿವೆ. ಇದೀಗ ಇದೇ ಟ್ರೆಂಡ್ ಮುಂದುವರೆದರೆ, 2026 ರ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಆರ್​ಸಿಬಿಯೇ ಚಾಂಪಿಯನ್ ಆಗಲಿದೆ. ಕಳೆದ ಐದು ವರ್ಷಗಳ ಟ್ರೆಂಡ್ ಮುಂದುವರೆದು ಈ ಬಾರಿಯೂ ಆರ್​ಸಿಬಿಯೇ ಚಾಂಪಿಯನ್ ಆಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Sun, 24 May 26

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us