
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆತಿಥೇಯ ಆರ್‌ಸಿಬಿ (RCB vs LSG) ಸತತ ಎರಡನೇ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಲೀಗ್ನಲ್ಲಿ ಇದುವರೆಗೆ 5 ಪಂದ್ಯಗಳನ್ನಾಡಿರುವ ಆರ್‌ಸಿಬಿ (RCB) ಇದರಲ್ಲಿ 4 ಪಂದ್ಯಗಳನ್ನು ಗೆದ್ದು, ಒಂದು ಪಂದ್ಯವನ್ನು ಸೋತಿದೆ. ಹೀಗಾಗಿ 8 ಅಂಕಗಳು ಮತ್ತು ನೆಟ್ ರನ್ರೇಟ್ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಹಿಂದಿಕ್ಕಿ ಆ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 147 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ 15.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಈ ಮೂಲಕ ಆರ್‌ಸಿಬಿ ಮೊಟ್ಟ ಮೊದಲ ಬಾರಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಲಕ್ನೋ ತಂಡವನ್ನು ಸೋಲಿಸಿದ ಸಾಧನೆ ಮಾಡಿತು. ಈ ಹಿಂದೆ ಉಭಯ ತಂಡಗಳು ಚಿನ್ನಸ್ವಾಮಿಯಲ್ಲಿ 2 ಪಂದ್ಯಗಳನ್ನು ಆಡಿದ್ದವು. ಈ ಎರಡೂ ಪಂದ್ಯಗಳಲ್ಲೂ ಲಕ್ನೋ ಗೆಲುವು ಸಾಧಿಸಿತ್ತು.
ಈ ಪಂದ್ಯದಲ್ಲಿ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಸಂಪೂರ್ಣ 20 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು.ಇದಕ್ಕೆ ಕಾರಣ ತಂಡಕ್ಕೆ ಸಿಕ್ಕ ಕಳಪೆ ಆರಂಭ. ಆರಂಭಿಕ ಐಡೆನ್ ಮಾರ್ಕ್ರಾಮ್‌ಗೆ ಕೇವಲ 12 ರನ್‌ಗೆ ಔಟಾದರೆ, ನಾಯಕ ರಿಷಭ್ ಪಂತ್ ಐದನೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಎಸೆತದಿಂದ ಗಾಯಗೊಂಡು ನಿವೃತ್ತರಾದರು. ಕೊನೆಯಲ್ಲಿ ಪಂತ್ ಬ್ಯಾಟಿಂಗ್ಗೆ ಮರಳಿದರಾದರೂ ಕೇವಲ ಒಂದು ರನ್ ಗಳಿಸಿ ಔಟಾದರು. ಉಳಿದಂತೆ ಆಯುಷ್ ಬಡೋನಿ 38 ರನ್ ಗಳಿಸಿದರೆ, ಮುಕುಲ್ ಚೌಧರಿ 39 ರನ್ ಗಳಿಸಿ ತಂಡವನ್ನು ಈ ಸ್ಕೋರ್ ತಲುಪಿಸಿದರು. ಮತ್ತೊಂದೆಡೆ, ಆರ್‌ಸಿಬಿ ಪರ ಮಿಂಚಿದ ರಸಿಕ್ ದಾರ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ ಮೂರು ವಿಕೆಟ್‌ಗಳನ್ನು ಮತ್ತು ಕೃನಾಲ್ ಪಾಂಡ್ಯ ಎರಡು ವಿಕೆಟ್‌ಗಳನ್ನು ಪಡೆದರು. ಜೋಶ್ ಹ್ಯಾಜಲ್‌ವುಡ್ ಕೂಡ ಒಂದು ವಿಕೆಟ್ ಪಡೆದರು.
RCB vs LSG: ಬರೋಬ್ಬರಿ 102 ಮೀಟರ್; ಸ್ಟೇಡಿಯಂನಿಂದ ಹೊರ ಹೋದ ಚೆಂಡು
ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಆಕ್ರಮಣಕಾರಿ ಆರಂಭ ಒದಗಿಸಿಕೊಟ್ಟರು. ಕೇವಲ 34 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸ್ ಸೇರಿದಂತೆ 49 ರನ್ ಗಳಿಸಿದರು. ಅವರ ಇನ್ನಿಂಗ್ಸ್ ತಂಡಕ್ಕೆ ರನ್ ಚೇಸಿಂಗ್ ಅನ್ನು ಹೆಚ್ಚು ಸುಲಭಗೊಳಿಸಿತು. ಇದರ ಜೊತೆಗೆ ಕೊಹ್ಲಿ, ದೇವದತ್ ಪಡಿಕ್ಕಲ್ ಅವರೊಂದಿಗೆ ಎರಡನೇ ವಿಕೆಟ್‌ಗೆ ನಿರ್ಣಾಯಕ ಪಾಲುದಾರಿಕೆಯನ್ನು ರೂಪಿಸಿದರು. ನಂತರ ನಾಯಕ ರಜತ್ ಪಾಟಿದಾರ್ 13 ಎಸೆತಗಳಲ್ಲಿ 27 ರನ್ ಮತ್ತು ಜಿತೇಶ್ ಶರ್ಮಾ ಕೂಡ 9 ಎಸೆತಗಳಲ್ಲಿ 23 ರನ್ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ, ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್ ಪಂದ್ಯವನ್ನು ಮುಕ್ತಾಯಗೊಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:56 pm, Wed, 15 April 26