
2026 ರ ಐಪಿಎಲ್ (IPL 2026) ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ತವರು ಪಂದ್ಯಗಳನ್ನು ಎಲ್ಲಿ ಆಡಲಿದೆ ಎಂಬುದು ಇದುವರೆಗು ಖಚಿತವಾಗಿರಲಿಲ್ಲ. ಇದಕ್ಕೆ ಕಾರಣ ಆರ್ಸಿಬಿ ಫ್ರಾಂಚೈಸಿ ಹಾಗೂ ರಾಜ್ಯ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ. ಇದೀಗ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡಿರುವಂತೆ ಕಾಣುತ್ತಿದ್ದು, ಆರ್ಸಿಬಿ ತಂಡ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಇಂದು ನಡೆದ ಸಚಿವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸರ್ಕಾರದ ಈ ನಿರ್ಧಾರ ಆರ್ಸಿಬಿ ಅಭಿಮಾನಿಗಳನ್ನು ಸಂತಸದ ಅಲೆಯಲ್ಲಿ ಮಿಂದೇಳುವಂತೆ ಮಾಡಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಅನುಮತಿ ನೀಡುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಇಂದು ಬೆಳಗ್ಗೆ ಗೃಹ ಇಲಾಖೆ ಜೊತೆ ಗೃಹ ಮಂತ್ರಿ ಪರಮೇಶ್ವರ್ ಸಭೆ ನಡೆಸಿದ್ದರು. ಅದರಂತೆ ಈ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಎಕ್ಸ್‌ಪರ್ಟ್ ಕಮಿಟಿ ವರದಿ ಮೇಲೆ ಕ್ಯಾಬಿನೆಟ್ನಲ್ಲಿ ಪಂದ್ಯಗಳನ್ನು ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸರ್ಕಾರದ ಈ ನಿರ್ಧಾರಕ್ಕೆ ಪೂರಕವಾಗಿ ನಿವೃತ್ತ ನ್ಯಾಯಮೂರ್ತಿ ಕುನ್ಹಾ ಅವರ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲ ಕೆಎಸ್‌ಸಿಎ ಕೆಲಸ ಆರಂಭಿಸಿದೆ. ಆ ಪ್ರಕಾರ, ಈಗಾಗಲೇ ಕ್ರೀಡಾಂಗಣದಲ್ಲಿ ಕುನ್ಹಾ ವರದಿ ಶಿಫಾರಸ್ಸು ಮಾಡಿರುವಂತೆ ಕೆಲ ಸೌಕರ್ಯ ಒದಗಿಸಲು ಕೆಲಸ ಮಾಡಲಾಗ್ತಿದೆ. ಹೀಗಾಗಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಬಹುದು ಎಂದು ಎಕ್ಸ್‌ಪರ್ಟ್ ಕಮಿಟಿ ವರದಿ ನೀಡತ್ತು. ಇದೀಗ ಎಕ್ಸ್‌ಪರ್ಟ್ ಕಮಿಟಿ ವರದಿಯ ಮೇಲೆ ಸಚಿವ ಸಂಪುಟದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗೆಯೇ ಐಪಿಎಲ್ ಜೊತೆ ಜೊತೆಗೆ ಮೂಲ ಸೌಕರ್ಯ ಕಾಮಗಾರಿಗಳು ನಡೆಯಲಿದ್ದು, ಎಕ್ಸ್‌ಪರ್ಟ್ ಕಮಿಟಿ ಈ ಕಾಮಗಾರಿಗಳನ್ನ ಮಾನಿಟರಿಂಗ್ ಮಾಡಲಿದೆ.
RCB: ಆರ್ಸಿಬಿ ಖರೀದಿಗೆ ಖಜಾನೆ ತೆರೆದ 2 ಲಕ್ಷ ಕೋಟಿ ರೂ. ಒಡೆಯ
ಇದರಡಿಯಲ್ಲಿ ಆಸನಗಳ ವ್ಯವಸ್ಥೆಯ ಬಗ್ಗೆಯೂ ಸಮಿತಿ ಪರಿಶೀಲನೆ ನಡೆಸಲಿದ್ದು, ಅಭಿಮಾನಿಗಳ ಸಂಖ್ಯೆಗೆ ಅನುಗುಣವಾಗಿ ಸ್ಟ್ಯಾಂಡ್ಗಳಿಗೆ ಅನುಮತಿ ನೀಡಲಾಗಿದೆ. ಹಾಗೆಯೇ 30 ರಿಂದ 35 ಸಾವಿರ ಜನರಿಗೆ ಕ್ರೀಡಾಂಗಣದಲ್ಲಿದಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಲಾಗಿದೆ. ಆದಾಗ್ಯೂ ಕೆಎಸ್ಸಿಎ ನೀಡಿರುವ ಭರವಸೆಗಳನ್ನು ಪಾಲಿಸಿದಿದ್ದರೆ ಅನುಮತಿ ಬಗ್ಗೆ ಪುನರ್ ಪರಿಶೀಲನೆ ಮಾಡುವುದಾಗಿಯೂ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:02 pm, Thu, 12 February 26