
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 (IPL 2026) ರ 20ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡವನ್ನು ಎದುರಿಸಿತ್ತು. ಈ ಲೀಗ್ನಲ್ಲಿ ಉಭಯ ತಂಡಗಳಿಗೆ ಇದು ನಾಲ್ಕನೇ ಪಂದ್ಯವಾಗಿತ್ತು. ಅದರಂತೆ ತವರು ಮೈದಾನದಲ್ಲಿ ಆರ್ಸಿಬಿಯನ್ನು ಮಣಿಸುವ ಇರಾದೆಯಲ್ಲಿದ್ದ ಮುಂಬೈಗೆ ಮತ್ತೆ ನಿರಾಸೆ ಎದುರಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಮೂವರ ಅರ್ಧಶತಕದ ನೆರವಿನಿಂದ 241 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ 222 ರನ್ ಕಲೆಹಾಕಲಷ್ಟೇ ಶಕ್ತವಾಗಿ 18 ರನ್ಗಳಿಂದ ಸೋಲೊಪ್ಪಿಕೊಂಡಿತು. ಇದು ಮುಂಬೈಗೆ ಸತತ ಮೂರನೇ ಸೋಲಾದರೆ, ಇತ್ತ ಕಳೆದ ಪಂದ್ಯದಲ್ಲಿ ಸೋಲುಕಂಡಿದ್ದ ಆರ್‌ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಆರಂಭ ಕಂಡಿತು. ಫಿಲ್ ಸಾಲ್ಟ್ ಕೇವಲ 36 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಒಳಗೊಂಡಂತೆ 78 ರನ್ ಗಳಿಸಿದರು. ವಿರಾಟ್ ಕೊಹ್ಲಿ ಕೂಡ 38 ಎಸೆತಗಳಲ್ಲಿ 50 ರನ್ ಕಲೆಹಾಕಿದರು. ಈ ಅವಧಿಯಲ್ಲಿ, ಇಬ್ಬರು ಆಟಗಾರರು ಮೊದಲ ವಿಕೆಟ್‌ಗೆ 120 ರನ್‌ಗಳ ಜೊತೆಯಾಟ ನೀಡಿದರು. ನಂತರ ನಾಯಕ ರಜತ್ ಪಾಟಿದಾರ್ ಅದ್ಭುತ ಪ್ರದರ್ಶನ ನೀಡಿ, ಕೇವಲ 20 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಒಳಗೊಂಡಂತೆ 53 ರನ್ ಬಾರಿಸಿದರು. ನಂತರ ಟಿಮ್ ಡೇವಿಡ್ ಕೂಡ ಅಜೇಯ 34 ರನ್ ಗಳಿಸಿ ತಂಡವನ್ನು ಈ ಸ್ಕೋರ್‌ಗೆ ಕೊಂಡೊಯ್ದರು.
ಮತ್ತೊಂದೆಡೆ, ಮುಂಬೈ ಪರ ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ, ಮಿಚೆಲ್ ಸ್ಯಾಂಟ್ನರ್ ಮತ್ತು ಟ್ರೆಂಟ್ ಬೌಲ್ಟ್ ತಲಾ ಒಂದು ವಿಕೆಟ್ ಪಡೆದರಾದರೂ ಯಾವುದೇ ಬೌಲರ್ಗೆ ಆರ್‌ಸಿಬಿಯ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್ ಉತ್ತಮವಾಗಿ ಆರಂಭವಾಯಿತು, ಆದರೆ ಆರನೇ ಓವರ್‌ನಲ್ಲಿ ರೋಹಿತ್ ಶರ್ಮಾ ಗಾಯಗೊಂಡು ನಿವೃತ್ತರಾದರು. ಇತ್ತ ರಯಾನ್ ರಿಕಲ್ಟನ್ 22 ಎಸೆತಗಳಲ್ಲಿ 37 ರನ್ ಗಳಿಸುವ ಮೂಲಕ ರನ್ ಚೇಸ್‌ಗೆ ಅಡಿಪಾಯ ಹಾಕಿದರು. ಸೂರ್ಯಕುಮಾರ್ ಯಾದವ್ ಕೂಡ 22 ಎಸೆತಗಳಲ್ಲಿ 33 ರನ್ ಗಳಿಸಿದರು, ಆದರೆ ತಿಲಕ್ ವರ್ಮಾ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ನಂತರ ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು.
MI vs RCB: ಮುಂಬೈ ವಿರುದ್ಧ ಸಿಡಿಲಬ್ಬರದ ಅರ್ಧಶತಕ ಚಚ್ಚಿದ ಸಾಲ್ಟ್
ಆದರೆ ಶೆರ್ಫೇನ್ ರುದರ್ಫೋರ್ಡ್ ಕೊನೆಯವರೆಗೂ ಹೋರಾಡಿ 31 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ಪರ ಸುಯಾಶ್ ಶರ್ಮಾ ಎರಡು ವಿಕೆಟ್ ಪಡೆದರೆ, ಕೃನಾಲ್ ಮತ್ತು ರಸಿಕ್ ಸಲಾಂ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:51 pm, Sun, 12 April 26