
ಐಪಿಎಲ್ 2026 (IPL2026) ರ 67ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (SRH vs RCB) ತಂಡಗಳು ಮುಖಾಮುಖಿಯಾಗಿದ್ದವು. ಪಾಯಿಂಟ್ ಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆಯಲು ಈ ಪಂದ್ಯದಲ್ಲಿ ಗೆಲ್ಲುವುದು ಉಭಯ ತಂಡಗಳಿಗೆ ಅತ್ಯಂತ ಮುಖ್ಯವಾಗಿತ್ತು. ಅದರಲ್ಲೂ ಸನ್‌ರೈಸರ್ಸ್ ಅಗ್ರಸ್ಥಾನಕ್ಕೇರಬೇಕೆಂದರೆ ಆರ್‌ಸಿಬಿ ವಿರುದ್ಧ ಭಾರೀ ಅಂತರದ ಗೆಲುವು ದಾಖಲಿಸಬೇಕಿತ್ತು. ಆದರೆ ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲುವು ಸಾಧಿಸಿತ್ತಾದರೂ ಅಗ್ರ 2ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ತಂಡ 256 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಆರ್‌ಸಿಬಿ ಕೊನೆಯ ಲೀಗ್ ಪಂದ್ಯದಲ್ಲಿ ಸೋಲಿಗೆ ಕೊರಳೊಡ್ಡಬೇಕಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹೈದರಾಬಾದ್ ತಂಡಕ್ಕೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ನಾಲ್ಕು ಓವರ್‌ಗಳಲ್ಲಿ 45 ರನ್ ಸೇರಿಸಿದರು. ಆದರೆ ರಸಿಕ್ ಸಲಾಂ ದಾರ್ ಬೌಲಿಂಗ್ನಲ್ಲಿ ಹೆಡ್ ಔಟಾಗುವ ಮೂಲಕ ಈ ಜೊತೆಯಾಟ ಮುರಿದುಬಿತ್ತು. ನಂತರ ಅಭಿಷೇಕ್ ಶರ್ಮಾ, ಇಶಾನ್ ಕಿಶಾನ್ ಅವರೊಂದಿಗೆ ಸ್ಫೋಟಕ ಜೊತೆಯಾಟ ಕಟ್ಟಿದರು. ಮೂರು ಜೀವದಾನಗಳ ಲಾಭ ಪಡೆದ ಅಭಿಷೇಕ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿ, 22 ಎಸೆತಗಳಲ್ಲಿ 56 ರನ್ ಬಾರಿಸಿ ಔಟಾದರು.
ಆ ನಂತರ ಜೊತೆಯಾದ ಇಶಾನ್ ಕಿಶಾನ್ ಹಾಗೂ ಹೆನ್ರಿಕ್ ಕ್ಲಾಸೆನ್ ಕೂಡ ತಲಾ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು 200 ರನ್ಗಳ ಗಡಿ ದಾಟಿಸಿದರು. ಕ್ಲಾಸೆನ್ 24 ಎಸೆತಗಳಲ್ಲಿ 51 ರನ್ ಗಳಿಸಿದರೆ, ಇಶಾನ್ ಕಿಶಾನ್ 79 ರನ್ ಗಳಿಸಿದರು. ನಿತೀಶ್ ರೆಡ್ಡಿ ಕೂಡ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 12 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರು.
SRH vs RCB IPL 2026 Highlights: ಸನ್‌ರೈಸರ್ಸ್ ವಿರುದ್ಧ 55 ರನ್‌ಗಳಿಂದ ಸೋತ ಆರ್‌ಸಿಬಿ
ಈ ಗುರಿ ಬೆನ್ನಟ್ಟಿದ ಆರ್ಸಿಬಿಗೂ ಸ್ಫೋಟಕ ಆರಂಭ ಸಿಕ್ಕಿತು. ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ 44 ರನ್ ಬಾರಿಸಿ ಉತ್ತಮ ಆರಂಭ ನೀಡಿದರು. ಆದರೆ ಎಹ್ಸಾನ್ ಮಾಲಿಂಗ, ವೆಂಕಟೇಶ್ ಅವರನ್ನು ಔಟ್ ಮಾಡುವ ಮೂಲಕ ರನ ವೇಗಕ್ಕೆ ಕಡಿವಾಣ ಹಾಕಿದರು. ನಂತರ ಶಕೀಬ್ ಹುಸೇನ್ ಆರ್‌ಸಿಬಿಗೆ ದೊಡ್ಡ ಹೊಡೆತ ನೀಡಿ, ವಿರಾಟ್ ಕೊಹ್ಲಿಯನ್ನು 15 ರನ್‌ಗೆ ಔಟ್ ಮಾಡಿದರು. ದೇವದತ್ ಪಡಿಕ್ಕಲ್ ಕೂಡ 14 ಎಸೆತಗಳಲ್ಲಿ ಕೇವಲ 21 ರನ್ ಗಳಿಸಿ ಔಟಾದರು. ನಾಯಕನ ಇನ್ನಿಂಗ್ಸ್ ಆಡಿದ ರಜತ್ ಪಾಟಿದಾರ್ 56 ರನ್ ಗಳಿಸಿದರಾದರೂ ಅವರ ಇನ್ನಿಂಗ್ಸ್ ತುಂಬಾ ನಿಧಾನವಾಗಿತ್ತು. ಕೃನಾಲ್ ಪಾಂಡ್ಯ ಅಜೇಯ 41 ಮತ್ತು ಟಿಮ್ ಡೇವಿಡ್ ಅಜೇಯ 15 ರನ್ ಗಳಿಸಿದರು. ಕೊನೆಯಲ್ಲಿ, ಆರ್‌ಸಿಬಿ ಕೇವಲ 200 ರನ್ ಗಳಿಸಿ ಪಂದ್ಯವನ್ನು 55 ರನ್‌ಗಳಿಂದ ಸೋತಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 pm, Fri, 22 May 26