IPL Brand Value: ಐಪಿಎಲ್ ಸಾಮ್ರಾಜ್ಯಕ್ಕೆ ಹೊಡೆತ..! ಬ್ರಾಂಡ್ ಮೌಲ್ಯದಲ್ಲಿ ಭಾರಿ ಕುಸಿತ

IPL Brand Value Decline: ಕಳೆದ ಎರಡು ವರ್ಷಗಳಿಂದ ಐಪಿಎಲ್ ಬ್ರಾಂಡ್ ಮೌಲ್ಯ ಕುಸಿಯುತ್ತಿದೆ, ಇದು ಬಿಸಿಸಿಐಗೆ ಹೊಸ ಆತಂಕ ತಂದಿದೆ. ಪ್ರಸಾರಕರಾದ ಡಿಸ್ನಿ ಸ್ಟಾರ್ ಮತ್ತು ವಯಾಕಾಮ್ 18 ವಿಲೀನ ಹಾಗೂ ಮನಿ ಗೇಮಿಂಗ್ ಆ್ಯಪ್‌ಗಳ ನಿಷೇಧ ಪ್ರಮುಖ ಕಾರಣಗಳಾಗಿವೆ. ಇದರಿಂದ ಐಪಿಎಲ್‌ನ ಆದಾಯಕ್ಕೆ ಹೊಡೆತ ಬಿದ್ದು, ಬ್ರಾಂಡ್ ಮೌಲ್ಯ 92,500 ಕೋಟಿ ರೂ.ಗಳಿಂದ 76,100 ಕೋಟಿ ರೂ.ಗಳಿಗೆ ಇಳಿದಿದೆ.

IPL Brand Value: ಐಪಿಎಲ್ ಸಾಮ್ರಾಜ್ಯಕ್ಕೆ ಹೊಡೆತ..! ಬ್ರಾಂಡ್ ಮೌಲ್ಯದಲ್ಲಿ ಭಾರಿ ಕುಸಿತ
Ipl

Updated on: Oct 17, 2025 | 3:48 PM

ಬಿಸಿಸಿಐನ (BCCI) ಮಿಲಿಯನ್ ಡಾಲರ್ ಕೂಸು ಐಪಿಎಲ್​ನ (IPL) ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಬಿಸಿಸಿಐ ಖಜಾನೆಯೂ ಕೂಡ ಊಹೆಗೆ ನಿಲುಕದಷ್ಟು ತುಂಬುತ್ತಿದೆ. ಇದರಿಂದಾಗಿ ವಿಶ್ವ ಕ್ರಿಕೆಟ್​ನ ಸಾರ್ವಭೌಮನಾಗಿ ಮೆರೆಯುತ್ತಿರುವ ಬಿಸಿಸಿಐಗೆ ಹೊಸ ಆತಂಕ ಶುರುವಾಗಿದೆ. ಅದೆನೆಂದರೆ ಕಳೆದ ಎರಡು ವರ್ಷಗಳಲ್ಲಿ ತನ್ನ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದ್ದ ಐಪಿಎಲ್​ನ ಬ್ರಾಂಡ್ ಮೌಲ್ಯ ಕುಸಿಯಲಾರಂಭಿಸಿದೆ. ವಾಸ್ತವವಾಗಿ 2008 ರಿಂದ ಆರಂಭವಾದ ಐಪಿಎಲ್, ಅಂದಿನಿಂದ ಇಲ್ಲಿಯವರೆಗೆ ತನ್ನ ಬ್ರಾಂಡ್ ಮೌಲ್ಯವನ್ನು ದಾಖಲೆಯ ಮೊತ್ತಕ್ಕೆ ಏರಿಸಿಕೊಂಡಿತ್ತು. ಆದರೆ ಕಳೆದೆರಡು ವರ್ಷಗಳಿಂದ ಐಪಿಎಲ್​ನ ಬ್ರಾಂಡ್ ಮೌಲ್ಯ ಹಿಮ್ಮುಖವಾಗಿ ಚಲಿಸಲಾರಂಭಿಸಿದೆ.

ಕುಸಿದ ಐಪಿಎಲ್‌ನ ಬ್ರಾಂಡ್ ಮೌಲ್ಯ

ಕಳೆದ ವರ್ಷಕ್ಕೆ ಹೋಲಿಸಿದರೆ ಐಪಿಎಲ್‌ನ ಬ್ರಾಂಡ್ ಮೌಲ್ಯ ಕಡಿಮೆಯಾಗಿದೆ. ಆದರೆ ಕಳೆದ ಕೆಲವು ಪಂದ್ಯಾವಳಿಗಳ ನಂತರ ನಾವು ಲೀಗ್‌ನ ಬ್ರಾಂಡ್ ಮೌಲ್ಯವನ್ನು ಲೆಕ್ಕ ಹಾಕಿದರೆ, ಅದು ಕಡಿಮೆಯಾಗಿದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ. ಕಳೆದ ವರ್ಷ, ಐಪಿಎಲ್‌ನ ಬ್ರಾಂಡ್ ಮೌಲ್ಯ 82,700 ಕೋಟಿ ರೂ. ಆಗಿತ್ತು. ಆದರೆ ಇತ್ತೀಚೆಗೆ ಪ್ರಕಟವಾದ ವರದಿಯ ಪ್ರಕಾರ, ಬ್ರಾಂಡ್ ಮೌಲ್ಯ 76100 ಕೋಟಿ ರೂ.ಗೆ ಕುಸಿದಿದೆ.

16,400 ಕೋಟಿ ರೂ.ಗಳ ನಷ್ಟ

ವಾರ್ಷಿಕ ಮೌಲ್ಯಮಾಪನ ವರದಿಯನ್ನು ಪ್ರಕಟಿಸುವ ಡಿಡಿ & ಅಡ್ವೈಸರಿ, ಸತತ ಎರಡನೇ ವರ್ಷ ಐಪಿಎಲ್ ಮೌಲ್ಯದಲ್ಲಿ ಇಳಿಕೆಯನ್ನು ದಾಖಲಿಸಿದೆ. 2023 ರಲ್ಲಿ, ಐಪಿಎಲ್‌ನ ಬ್ರಾಂಡ್ ಮೌಲ್ಯ 92,500 ಕೋಟಿ ರೂ. ಆಗಿತ್ತು. 2023 ರಲ್ಲಿ 92,500 ಕೋಟಿ ರೂ.ಗಳಿದ್ದ ಬ್ರಾಂಡ್ ಮೌಲ್ಯ 2024 ರಲ್ಲಿ 82,700 ಕೋಟಿ ರೂ.ಗಳಿಗೆ ಕುಸಿದಿತ್ತು. ಇದೀಗ 2025 ರಲ್ಲಿ 76,100 ಕೋಟಿ ರೂ.ಗಳಿಗೆ ಕುಸಿದಿದೆ. ಇದರಿಂದ ಕಳೆದ ಎರಡು ವರ್ಷಗಳಲ್ಲಿ ಬಿಸಿಸಿಐ 16,400 ಕೋಟಿ ರೂ.ಗಳ ನಷ್ಟ ಅನುಭವಿಸಿದೆ.

ಬ್ರಾಂಡ್ ಮೌಲ್ಯ ಕುಸಿಯಲು ಕಾರಣಗಳೇನು?

ಐಪಿಎಲ್​ನ ಬ್ಯಾಂಡ್ ಮೌಲ್ಯ ಕುಸಿಯಲು ಕಾರಣ ಏನು ಎಂಬುದನ್ನು ಬಿಯಾಂಡ್ 22 ಯಾರ್ಡ್ಸ್ ವರದಿ ವಿವರಿಸಿದ್ದು, ಆ ವರದಿಯ ಪ್ರಕಾರ, ಪ್ರಸಾರಕರ ವಿಲೀನವು ಒಂದು ಪ್ರಮುಖ ಕಾರಣವಾಗಿದೆ ಎಂದಿದೆ. ಅಂದರೆ 2024 ರಲ್ಲಿ ಐಪಿಎಲ್​ನ ಪ್ರಮುಖ ಪ್ರಸಾರಕರಾದ ಡಿಸ್ನಿ ಸ್ಟಾರ್ ಮತ್ತು ವಯಾಕಾಮ್ 18 ವಿಲೀನಗೊಂಡವು. ಇದು ಮಾಧ್ಯಮ ಹಕ್ಕುಗಳಿಗಾಗಿ ಸ್ಪರ್ಧೆಯನ್ನು ಕಡಿಮೆ ಮಾಡಿತು. ಇದು ಐಪಿಎಲ್ ಪ್ರಸಾರದ ಮೌಲ್ಯದ ಮೇಲೆ ಪರಿಣಾಮ ಬೀರಿದೆ ಎಂಬುದು ವರದಿಯಿಂದ ಬಹಿರಂಗಗೊಂಡಿದೆ.

ಹಾಗೆಯೇ ಎರಡನೆಯದಾಗಿ ಭಾರತ ಸರ್ಕಾರ ಹಣದ ಗೇಮಿಂಗ್ ಅಪ್ಲಿಕೇಶನ್ ಅನ್ನು ನಿಷೇಧಿಸಿದೆ. ಇದರಿಂದಾಗಿ ಈ ಸ್ಪರ್ಧೆಯ ಮೇಲೆ ಅದರ ಪರಿಣಾಮ ಕಂಡುಬಂದಿದೆ. ಹಣದ ಗೇಮಿಂಗ್ ಅಪ್ಲಿಕೇಶನ್‌ಗಳು ಐಪಿಎಲ್ ಅನ್ನು ಪ್ರಾಯೋಜಿಸುತ್ತಿದ್ದವು. ಆ ಮೂಲಕ, ಐಪಿಎಲ್‌ನ ಬ್ರಾಂಡ್ ಮೌಲ್ಯ ಕೂಡ ಹೆಚ್ಚಾಗಿತ್ತು. ಈ ಗೇಮಿಂಗ್ ಅಪ್ಲಿಕೇಶನ್​ಗಳಿಂದ ಬಿಸಿಸಿಐ ಖಾತೆಗೆ ಪ್ರತಿ ವರ್ಷ 1500 ರಿಂದ 2000 ಕೋಟಿ ರೂ. ಆದಾಯ ಹರಿದುಬರುತ್ತಿತ್ತು. ಆದರೆ ಈಗ ಅಪ್ಲಿಕೇಶನ್‌ನ ಮೇಲಿನ ನಿಷೇಧದಿಂದಾಗಿ ಐಪಿಎಲ್​ಗೆ ಬರುವ ಆದಾಯ ನಿಂತುಹೋಗಿದೆ. ಇದರಿಂದಾಗಿ, ಲೀಗ್‌ನ ಆದಾಯ ಕಡಿಮೆಯಾಗಿದೆ. ಈ ಎರಡು ಕಾರಣಗಳಿಂದಾಗಿ, ಐಪಿಎಲ್‌ನ ಬ್ರಾಂಡ್ ಮೌಲ್ಯ ಕಡಿಮೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Fri, 17 October 25