AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘನ್ ವಿರುದ್ಧ ಹೀನಾಯ ಸೋಲು; ಬಾಂಗ್ಲಾ ಆಟಗಾರರ ಮೇಲೆ ಫ್ಯಾನ್ಸ್ ದಾಳಿ

Bangladesh Cricket: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ ವೈಟ್ ವಾಶ್ ಮುಖಭಂಗಕ್ಕೊಳಗಾಯಿತು. ಇದರಿಂದ ಕೆರಳಿದ ಅಭಿಮಾನಿಗಳು ತಂಡದ ವಾಹನಗಳ ಮೇಲೆ ದಾಳಿ ನಡೆಸಿದರು. ಈ ಘಟನೆಯಿಂದ ಆಘಾತಕ್ಕೊಳಗಾದ ಆಟಗಾರ ಮೊಹಮ್ಮದ್ ನಯೀಮ್ ಶೇಖ್, ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ, ದೇಶವನ್ನು ಪ್ರತಿನಿಧಿಸುವ ನೋವನ್ನು ಹಂಚಿಕೊಂಡರು. ತಂಡಕ್ಕೆ ಬೆಂಬಲ ಬೇಕೇ ಹೊರತು ದ್ವೇಷವಲ್ಲ ಎಂದರು.

ಅಫ್ಘನ್ ವಿರುದ್ಧ ಹೀನಾಯ ಸೋಲು; ಬಾಂಗ್ಲಾ ಆಟಗಾರರ ಮೇಲೆ ಫ್ಯಾನ್ಸ್ ದಾಳಿ
Bangladesh
ಪೃಥ್ವಿಶಂಕರ
|

Updated on:Oct 17, 2025 | 6:28 PM

Share

ಬಾಂಗ್ಲಾದೇಶ ತಂಡ ಇತ್ತೀಚೆಗೆ ಯುಎಇಯಲ್ಲಿ ಅಫ್ಘಾನಿಸ್ತಾನ (Bangladesh vs Afghanistan) ವಿರುದ್ಧ ಟಿ20 ಮತ್ತು ಏಕದಿನ ಸರಣಿಗಳನ್ನು ಆಡಿತ್ತು. ಮೊದಲು ನಡೆದ ಟಿ20 ಸರಣಿಯಲ್ಲಿ ಬಾಂಗ್ಲಾದೇಶ ತಂಡ ಉತ್ತಮ ಪ್ರದರ್ಶನ ನೀಡಿ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿತು. ಆದರೆ ಏಕದಿನ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿದ ಬಾಂಗ್ಲಾ ತಂಡ ಸರಣಿಯಲ್ಲಿ ವೈಟ್ ವಾಶ್ ಮುಖಭಂಗಕ್ಕೆ ಒಳಗಾಯಿತು. ಪರಿಣಾಮವಾಗಿ ತವರಿಗೆ ಹಿಂದಿರುಗಿದ ಬಾಂಗ್ಲಾದೇಶದ ಆಟಗಾರರ ಮೇಲೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಬಂದ ಇಡೀ ತಂಡವನ್ನು ಅಪಹಾಸ್ಯಕ್ಕೆ ಒಳಪಡಿಸಲಾಗಿದ್ದು ಮಾತ್ರವಲ್ಲದೆ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ ಅಭಿಮಾನಿಗಳು ದಾಳಿ ಮಾಡಿದ್ದಾರೆ.

ಬಾಂಗ್ಲಾದೇಶ ಆಟಗಾರರ ಮೇಲೆ ಹಲ್ಲೆ

ಈ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶದ ಪ್ರದರ್ಶನ ಕಳಪೆಯಾಗಿತ್ತು. ಮೊದಲ ಪಂದ್ಯವನ್ನು 5 ವಿಕೆಟ್‌ಗಳಿಂದ ಸೋತ ಬಾಂಗ್ಲಾ ತಂಡ ನಂತರ ಎರಡನೇ ಪಂದ್ಯದಲ್ಲಿ 81 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಮೂರನೇ ಪಂದ್ಯವನ್ನು 200 ರನ್‌ಗಳ ಅಂತರದಿಂದ ಸೋತಿತು. ತಂಡದ ಕಳಪೆ ಪ್ರದರ್ಶನದಿಂದ ಬಾಂಗ್ಲಾದೇಶ ಅಭಿಮಾನಿಗಳು ತೀವ್ರ ಅಸಮಾಧಾನಗೊಂಡಿದ್ದು, ಆಟಗಾರರು ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ. ಈ ದಾಳಿಯಿಂದ ಆಘಾತಕ್ಕೊಳಗಾಗಿರುವ ಬಾಂಗ್ಲಾದೇಶದ ಆಟಗಾರ ಮೊಹಮ್ಮದ್ ನಯೀಮ್ ಶೇಖ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾವನಾತ್ಮಕ ಟಿಪ್ಪಣಿಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ನೋವು ಹಂಚಿಕೊಂಡ ನಯೀಮ್ ಶೇಖ್

‘ನಾವು ಮೈದಾನಕ್ಕಿಳಿದಾಗ ಕೇವಲ ಆಟ ಮಾತ್ರ ಆಡುವುದಿಲ್ಲ. ನಮ್ಮ ಎದೆಯ ಮೇಲೆ ನಮ್ಮ ದೇಶದ ಹೆಸರನ್ನು ಧರಿಸಿರುತ್ತೇವೆ. ಕೆಂಪು ಮತ್ತು ಹಸಿರು ಧ್ವಜ ನಮ್ಮ ದೇಹದ ಮೇಲೆ ಮಾತ್ರವಲ್ಲ; ಅದು ನಮ್ಮ ರಕ್ತದಲ್ಲಿದೆ. ಪ್ರತಿ ಚೆಂಡು, ಪ್ರತಿ ಓಟ, ಪ್ರತಿ ಉಸಿರಿನೊಂದಿಗೆ, ನಾವು ಆ ಧ್ವಜವನ್ನು ಹೆಮ್ಮೆಪಡುವಂತೆ ಮಾಡಲು ಶ್ರಮಿಸುತ್ತೇವೆ. ಹೌದು, ಕೆಲವೊಮ್ಮೆ ನಾವು ಯಶಸ್ವಿಯಾಗುತ್ತೇವೆ, ಕೆಲವೊಮ್ಮೆ ನಾವು ಯಶಸ್ವಿಯಾಗುವುದಿಲ್ಲ. ಆಟದಲ್ಲಿ ಗೆಲುವು ಮತ್ತು ಸೋಲು ಸಹಜ. ಅದು ಕ್ರೀಡೆಯ ಒಂದು ಭಾಗ. ನಾವು ಸೋತಾಗ, ನೀವು ದುಃಖ ಮತ್ತು ಕೋಪವನ್ನು ಅನುಭವಿಸುತ್ತೀರಿ ಎಂದು ನಮಗೆ ತಿಳಿದಿದೆ, ಏಕೆಂದರೆ ನೀವು ಈ ದೇಶವನ್ನು ನಮ್ಮಂತೆಯೇ ಪ್ರೀತಿಸುತ್ತೀರಿ.

‘ಆದರೆ ಇಂದು ನಮ್ಮ ಮೇಲೆ ದ್ವೇಷದ ಸುರಿಮಳೆ ಸುರಿಸಿದ ರೀತಿ, ನಮ್ಮ ವಾಹನಗಳ ಮೇಲಿನ ದಾಳಿಗಳು ನನಗೆ ನಿಜಕ್ಕೂ ನೋವುಂಟು ಮಾಡಿದೆ. ನಾವು ಮನುಷ್ಯರು, ನಾವು ತಪ್ಪುಗಳನ್ನು ಮಾಡುತ್ತೇವೆ, ಆದರೆ ನಮ್ಮ ದೇಶದ ಬಗ್ಗೆ ನಮಗೆ ಎಂದಿಗೂ ಪ್ರೀತಿ ಮತ್ತು ಪ್ರಯತ್ನದ ಕೊರತೆ ಇರುವುದಿಲ್ಲ. ಪ್ರತಿ ಕ್ಷಣವೂ, ನಮ್ಮ ದೇಶಕ್ಕೆ, ನಮ್ಮ ಜನರಿಗೆ, ನಿಮ್ಮ ಮುಖದಲ್ಲಿ ನಗು ತರಿಸಲು ನಾವು ಶ್ರಮಿಸುತ್ತೇವೆ. ನಮಗೆ ಬೆಂಬಲ ಬೇಕು, ದ್ವೇಷವಲ್ಲ. ಟೀಕೆ ಕೋಪವನ್ನು ಆಧರಿಸಿರಬಾರದು, ಕಾರಣವನ್ನು ಆಧರಿಸಿರಬೇಕು. ಏಕೆಂದರೆ ನಾವೆಲ್ಲರೂ ಒಂದೇ ಧ್ವಜದ ಮಕ್ಕಳು. ನಾವು ಗೆದ್ದರೂ ಸೋತರೂ, ಕೆಂಪು ಮತ್ತು ಹಸಿರು ಬಣ್ಣಗಳು ಯಾವಾಗಲೂ ನಮಗೆಲ್ಲರಿಗೂ ಹೆಮ್ಮೆಯ ಮೂಲವಾಗಿರುತ್ತವೆ, ಕೋಪವಲ್ಲ. ನಾವು ಹೋರಾಡುತ್ತೇವೆ ಮತ್ತು ನಾವು ಮತ್ತೆ ಎದ್ದು ನಿಲ್ಲುತ್ತೇವೆ, ದೇಶಕ್ಕಾಗಿ, ನಿಮಗಾಗಿ, ಈ ಧ್ವಜಕ್ಕಾಗಿ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Fri, 17 October 25