ಇಂಡಿಯನ್ ಪ್ರೀಮಿಯರ್ ಲೀಗ್ (IPL) ಎಂದರೆ ಕೇವಲ ಮೈದಾನದೊಳಗಿನ ಸಿಕ್ಸರ್-ಬೌಂಡರಿಗಳ ಅಬ್ಬರವಷ್ಟೇ ಅಲ್ಲ, ಮೈದಾನದ ಹೊರಗೆ ನಡೆಯುವ ಫ್ರಾಂಚೈಸಿಗಳ ಬಿಸ್ನೆಸ್ ತಂತ್ರಗಳು ಕೂಡ ಅಷ್ಟೇ ರೋಮಾಂಚನಕಾರಿಯಾಗಿರುತ್ತವೆ. ಐಪಿಎಲ್ ಹರಾಜಿಗೂ ಮುನ್ನ ನಡೆಯುವ ‘ಟ್ರೇಡಿಂಗ್ ವಿಂಡೋ’ ಇತ್ತೀಚಿನ ವರ್ಷಗಳಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ಒಂದು ತಂಡದಲ್ಲಿದ್ದ ಸ್ಟಾರ್ ಆಟಗಾರ ರಾತ್ರೋರಾತ್ರಿ ಮತ್ತೊಂದು ತಂಡದ ಜೆರ್ಸಿ ತೊಟ್ಟು ಪ್ರತ್ಯಕ್ಷವಾಗುವ ಈ ವ್ಯವಸ್ಥೆಯ ಹಿಂದೆ ಕೋಟಿ ಕೋಟಿ ರೂಪಾಯಿಗಳ ವ್ಯವಹಾರ ಅಡಗಿರುತ್ತದೆ.
ಹಾಗಾದರೆ, ಈ ಟ್ರೇಡಿಂಗ್ ಎಂದರೇನು? ಇದರಲ್ಲಿ ಯಾರಿಗೆ ಲಾಭ? ಮತ್ತು ಎಲ್ಲರೂ ಚರ್ಚಿಸುವ ಈ ‘ಟ್ರಾನ್ಸಫರ್ ಫೀ’ ನಿಯಮಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…
Loading...
{{{html}}}
ಟ್ರೇಡಿಂಗ್ ಅಂದರೆ ಏನು?
ಐಪಿಎಲ್ನಲ್ಲಿ ಒಂದು ಫ್ರಾಂಚೈಸಿಯು ತನ್ನಲ್ಲಿರುವ ಆಟಗಾರನನ್ನು ಮತ್ತೊಂದು ಫ್ರಾಂಚೈಸಿಗೆ ವರ್ಗಾಯಿಸುವುದನ್ನು ‘ಟ್ರೇಡಿಂಗ್’ ಎನ್ನಲಾಗುತ್ತದೆ. ಇದು ಎರಡು ರೀತಿಯಲ್ಲಿ ನಡೆಯುತ್ತದೆ: ಒಂದು, ಇಬ್ಬರು ಆಟಗಾರರ ಅದಲು-ಬದಲು . ಎರಡು, ಕೇವಲ ನಗದು ಹಣ ನೀಡಿ ಆಟಗಾರನನ್ನು ಖರೀದಿಸುವುದು.
ಟ್ರೇಡಿಂಗ್ನಿಂದ ಯಾರಿಗೆ ಲಾಭ?
- ಆಟಗಾರನಿಗೆ: ಹಳೆಯ ತಂಡದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗದಿದ್ದರೆ, ಹೊಸ ತಂಡದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಹೆಚ್ಚಿನ ಚಾನ್ಸ್ ಸಿಗುತ್ತದೆ. ಜೊತೆಗೆ ಆರ್ಥಿಕವಾಗಿಯೂ ಲಾಭವಾಗಬಹುದು.
- ಹೊಸ ತಂಡಕ್ಕೆ: ಹರಾಜಿಗಾಗಿ ಕಾಯದೆ, ತಮಗೆ ತಕ್ಷಣವೇ ಅಗತ್ಯವಿರುವ ನಿರ್ದಿಷ್ಟ ಆಟಗಾರನನ್ನು ನೇರವಾಗಿ ಪಡೆದು ತಂಡದ ಕೊರತೆ ನೀಗಿಸಿಕೊಳ್ಳಬಹುದು.
- ಹಳೆಯ ತಂಡಕ್ಕೆ: ಆಟಗಾರನನ್ನು ಬಿಟ್ಟುಕೊಡುವುದರಿಂದ ಹಣ ಬಿಡುಗಡೆಯಾಗಿ, ಮುಂದಿನ ಹರಾಜಿನಲ್ಲಿ ಇತರ ಆಟಗಾರರನ್ನು ಖರೀದಿಸಲು ತಂಡದ ಬಜೆಟ್ ಹೆಚ್ಚುತ್ತದೆ.
- ಬಿಸಿಸಿಐಗೆ: ದೊಡ್ಡ ಆಟಗಾರರು ತಂಡ ಬದಲಾಯಿಸಿದಾಗ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮತ್ತು ಲೀಗ್ನ ಬ್ರ್ಯಾಂಡ್ ಮೌಲ್ಯ ದುಪ್ಪಟ್ಟಾಗುತ್ತದೆ.
ಇವೆಲ್ಲದರ ನಡುವೆ ಫ್ರಾಂಚೈಸಿಗಳ ಮಧ್ಯೆ ಕೂಡ ಕೋಟಿ ಕೋಟಿ ರೂಪಾಯಿ ವಿನಿಮಯವಾಗುತ್ತದೆ ಎಂಬ ವಿಚಾರ ಅನೇಕರಿಗೆ ಗೊತ್ತಿಲ್ಲ. ಅದು ಸಹ ‘ಟ್ರಾನ್ಸಫರ್ ಫೀ’ ಮೂಲಕವೇ ನಡೆಯುತ್ತದೆ ಎಂಬುದು ಇಲ್ಲಿನ ವಿಶೇಷ.
ಏನಿದು ‘ಟ್ರಾನ್ಸಫರ್ ಫೀ’?
ಆಟಗಾರನ ಮೂಲ ಹರಾಜು ಬೆಲೆಯ ಹೊರತಾಗಿ, ಆತನನ್ನು ಬಿಟ್ಟುಕೊಡಲು ಹಳೆಯ ತಂಡಕ್ಕೆ ಹೊಸ ತಂಡವು ಕೊಡುವ ‘ಹೆಚ್ಚುವರಿ ಗುಪ್ತ ಹಣವೇ’ ಈ ಟ್ರಾನ್ಸಫರ್ ಫೀ.
ಐಪಿಎಲ್ ಇತಿಹಾಸದಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತೊರೆದು ಮುಂಬೈ ಇಂಡಿಯನ್ಸ್ ಸೇರಿದಾಗ ಈ ನಿಯಮ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು.
ಟ್ರಾನ್ಸಫರ್ ಫೀ ಕುರಿತ ಪ್ರಮುಖ ನಿಯಮಗಳು ಇಲ್ಲಿವೆ:
ಬಜೆಟ್ಗೆ ಸಂಬಂಧವಿಲ್ಲ: ಇದು ಅತ್ಯಂತ ರೋಚಕ ನಿಯಮ. ಹೊಸ ತಂಡವು ಕೊಡುವ ಈ ಟ್ರಾನ್ಸಫರ್ ಫೀ ಮೊತ್ತವು ಆ ತಂಡದ ಐಪಿಎಲ್ ಹರಾಜು ಬಜೆಟ್ನಿಂದ ಕಡಿತವಾಗುವುದಿಲ್ಲ. ಇದು ಫ್ರಾಂಚೈಸಿ ಮಾಲೀಕರು ತಮ್ಮ ಸ್ವಂತ ಜೇಬಿನಿಂದ ನೇರವಾಗಿ ಕೊಡುವ ನಗದು ವ್ಯವಹಾರವಾಗಿರುತ್ತದೆ. ಹೀಗಾಗಿ ಶ್ರೀಮಂತ ಫ್ರಾಂಚೈಸಿಗಳಿಗೆ ಇದು ದೊಡ್ಡ ಅಸ್ತ್ರ.
ಮೊತ್ತಕ್ಕೆ ಮಿತಿ ಇಲ್ಲ: ಟ್ರಾನ್ಸಫರ್ ಫೀ ಇಷ್ಟೇ ಇರಬೇಕು ಎಂಬ ನಿಯಮವಿಲ್ಲ. ಇದು 5 ಕೋಟಿ ಇರಬಹುದು ಅಥವಾ 50 ಕೋಟಿ ಇರಬಹುದು! ಎರಡು ತಂಡಗಳು ಪರಸ್ಪರ ಒಪ್ಪುವ ಯಾವುದೇ ಮೊತ್ತವನ್ನು ನಿಗದಿಪಡಿಸಬಹುದು.
ಆಟಗಾರನಿಗೂ ಸಿಗುತ್ತೆ ಜಾಕ್ಪಾಟ್: ಬಿಸಿಸಿಐ ನಿಯಮಗಳ ಪ್ರಕಾರ, ಖರೀದಿಸುವ ತಂಡವು ಕೊಡುವ ಒಟ್ಟು ಟ್ರಾನ್ಸಫರ್ ಫೀ ಮೊತ್ತದಲ್ಲಿ ಶೇಕಡಾ 50 ರಷ್ಟು ಹಣವನ್ನು ಆಟಗಾರನು ಪಡೆಯಬಹುದು. ಇನ್ನುಳಿದ ಹಣ ಆತನನ್ನು ಬಿಟ್ಟುಕೊಟ್ಟ ಮೂಲ ತಂಡದ ಖಾತೆ ಸೇರುತ್ತದೆ. ಆದರೆ, ಈ ಹಣದ ಹಂಚಿಕೆಯು ಸಂಪೂರ್ಣವಾಗಿ ಫ್ರಾಂಚೈಸಿ ಮತ್ತು ಆಟಗಾರನ ನಡುವಿನ ಪರಸ್ಪರ ಒಪ್ಪಂದಕ್ಕೆ ಒಳಪಟ್ಟಿರುತ್ತದೆ. ಅಂದರೆ, ಒಪ್ಪಂದದ ಪ್ರಕಾರ ಫ್ರಾಂಚೈಸಿಯು ಆಟಗಾರನಿಗೆ ಹಣವನ್ನು ನೀಡಬಹುದು ಅಥವಾ ನೀಡದೆಯೂ ಇರಬಹುದು.”
ಎಲ್ಲವೂ ರಹಸ್ಯ: ಈ ಟ್ರಾನ್ಸಫರ್ ಫೀ ಎಷ್ಟು ಎಂಬುದನ್ನು ಬಿಸಿಸಿಐ ಮತ್ತು ಸಂಬಂಧಪಟ್ಟ ಎರಡು ಫ್ರಾಂಚೈಸಿಗಳನ್ನು ಹೊರತುಪಡಿಸಿ, ಅಧಿಕೃತವಾಗಿ ಮಾಧ್ಯಮಗಳಿಗಾಗಲಿ ಅಥವಾ ಸಾರ್ವಜನಿಕರಿಗಾಗಲಿ ಬಹಿರಂಗಪಡಿಸುವುದಿಲ್ಲ. ಅಂದರೆ, ಇಲ್ಲಿ ಒಳಗೊಳಗೆ ಎರಡು ಫ್ರಾಂಚೈಸಿಗಳ ನಡುವೆ ಕೋಟಿ ಕೋಟಿ ರೂಪಾಯಿಗಳ ವ್ಯವಹಾರ ನಡೆದರೂ, ಅದಕ್ಕೂ ಐಪಿಎಲ್ ಹರಾಜಿನ ಪರ್ಸ್ (Purse) ಮೊತ್ತಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಹಾಗೆಯೇ, ಈ ಹಣದ ವಿವರಗಳನ್ನು ಎಲ್ಲೂ ಪ್ರಕಟಿಸುವ ಅಗತ್ಯವೂ ಫ್ರಾಂಚೈಸಿಗಳಿಗಿರುವುದಿಲ್ಲ.
“ಉದಾಹರಣೆಗೆ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯರನ್ನು ಬಿಟ್ಟುಕೊಡಲು ಪಂಜಾಬ್ ಕಿಂಗ್ಸ್ ತಂಡದೊಂದಿಗೆ ಮಾತುಕತೆ ನಡೆಸುತ್ತಿದೆ ಅಂದುಕೊಳ್ಳೋಣ. ಈ ವೇಳೆ ಹಾರ್ದಿಕ್ಗೆ ಪ್ರತಿಯಾಗಿ ಪಂಜಾಬ್ ಕಿಂಗ್ಸ್ನಿಂದ ಅರ್ಷದೀಪ್ ಸಿಂಗ್ ಅವರನ್ನು ಕೇಳುವುದರ ಜೊತೆಗೆ, ಮುಂಬೈ ಇಂಡಿಯನ್ಸ್ ಹೆಚ್ಚುವರಿಯಾಗಿ 50 ಕೋಟಿ ರೂಪಾಯಿ ನೀಡಬೇಕೆಂದು ಬೇಡಿಕೆ ಇಡಬಹುದು. ಒಳಗೊಳಗೆ ನಡೆಯುವ ಇಂತಹ ಬೃಹತ್ ನಗದು ವ್ಯವಹಾರಗಳನ್ನು ಫ್ರಾಂಚೈಸಿಗಳು ಎಲ್ಲೂ ಬಹಿರಂಗಪಡಿಸುವುದಿಲ್ಲ ಮತ್ತು ಅದನ್ನು ಬಹಿರಂಗಪಡಿಸಬೇಕಾದ ಅಗತ್ಯವೂ ಇರುವುದಿಲ್ಲ. ಅಂದರೆ, ಇಲ್ಲಿ ಆಟಗಾರರ ಟ್ರೇಡ್ ಮೂಲಕವೂ ಫ್ರಾಂಚೈಸಿಗಳು ಕೋಟಿ ಕೋಟಿ ರೂಪಾಯಿಗಳ ಲಾಭವನ್ನು ಗಳಿಸುತ್ತವೆ.
ಇದನ್ನೂ ಓದಿ: ಡ್ರಗ್ಸ್ ಸೇವನೆ: ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗನಿಗೆ ನಿಷೇಧ!
ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ನಲ್ಲಿ ನಡೆಯುವ ಈ ಆಟಗಾರರ ಟ್ರೇಡಿಂಗ್ ಮತ್ತು ಟ್ರಾನ್ಸಫರ್ ಫೀ ವ್ಯವಹಾರವು ಕೇವಲ ಆಟಗಾರರ ಅದಲು-ಬದಲಲ್ಲ. ಅದು ಮೈದಾನದ ಹೊರಗೆ ನಡೆಯುವ ಹೈ-ವೋಲ್ಟೇಜ್ ಕಾರ್ಪೊರೇಟ್ ಬಿಸ್ನೆಸ್ ಗೇಮ್! ಇಲ್ಲಿ ತಂತ್ರಗಾರಿಕೆ, ಕೋಟಿ ಕೋಟಿ ರೂಪಾಯಿಗಳ ಲೆಕ್ಕಾಚಾರ ಮತ್ತು ಫ್ರಾಂಚೈಸಿಗಳ ಜಾಣ್ಮೆ ಎಲ್ಲವೂ ಅಡಗಿದೆ. ಈ ಕಾಣದ ಹಣದ ಆಟವೇ ಐಪಿಎಲ್ ಲೀಗ್ ಅನ್ನು ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ರೋಮಾಂಚನಕಾರಿ ಕ್ರೀಡಾಕೂಟವನ್ನಾಗಿ ಮಾಡಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.