Ireland-West Indies: ಬಲಿಷ್ಠ ವೆಸ್ಟ್ ಇಂಡೀಸ್​ಗೆ ಸೋಲುಣಿಸಿ ಹೊಸ ಇತಿಹಾಸ ಬರೆದ ಐರ್ಲೆಂಡ್

| Updated By: ಝಾಹಿರ್ ಯೂಸುಫ್

Updated on: Jan 17, 2022 | 2:52 PM

Ireland-West Indies: ಏಕದಿನ ಶ್ರೇಯಾಂಕದಲ್ಲಿ 12 ನೇ ಸ್ಥಾನದಲ್ಲಿರುವ ಐರ್ಲೆಂಡ್ 8ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ಅನ್ನು ಅವರದ್ದೇ ನೆಲದಲ್ಲಿ ಸೋಲಿಸಿ ಇತಿಹಾಸ ಬರೆಯಿತು.

Ireland-West Indies: ಬಲಿಷ್ಠ ವೆಸ್ಟ್ ಇಂಡೀಸ್​ಗೆ ಸೋಲುಣಿಸಿ ಹೊಸ ಇತಿಹಾಸ ಬರೆದ ಐರ್ಲೆಂಡ್
Ireland-West Indies
Follow us on

ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗು ಬಡಿದು ಐರ್ಲೆಂಡ್ ತಂಡ ಹೊಸ ಇತಿಹಾಸ ಬರೆದಿದೆ. ಅದು ಕೂಡ ಕೆರಿಬಿಯನ್ನರ ನಾಡಲ್ಲಿ ಎಂಬುದು ವಿಶೇಷ. ಹೌದು, ವೆಸ್ಟ್​ ಇಂಡೀಸ್​ನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆಲ್ಲುವ ಮೂಲಕ ಐರ್ಲೆಂಡ್ ತಂಡವು ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಏಕದಿನ ಅಂಕಪಟ್ಟಿಯ ಅಗ್ರ ಹತ್ತರಲ್ಲಿರುವ ತಂಡದ ವಿರುದ್ದ ಗೆಲುವು ದಾಖಲಿಸಿದ ಸಾಧನೆ ಮಾಡಿದೆ. ವಿಶೇಷ ಎಂದರೆ ಈ ಗೆಲುವಿನೊಂದಿಗೆ ಐರ್ಲೆಂಡ್ 10 ಅಂಕಗಳನ್ನು ಪಡೆದು ವಿಶ್ವಕಪ್ ಸೂಪರ್ ಲೀಗ್ ನ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

1-1 ಅಂತರದಿಂದ ಸಮಗೊಂಡಿದ್ದ ಈ ಸರಣಿಯ ಅಂತಿಮ ಪಂದ್ಯವು ನಿರ್ಣಾಯಕವಾಗಿತ್ತು. ಅದರಂತೆ ಜಮೈಕಾದ ಸಬಿನಾ ಪಾರ್ಕ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಐರ್ಲೆಂಡ್ 2 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್​ ಇಂಡೀಸ್ ತಂಡಕ್ಕೆ ಶಾಯ್ ಹೋಪ್ ಮತ್ತು ಜಸ್ಟಿನ್ ಗ್ರೀವ್ಸ್ ಮೊದಲ ವಿಕೆಟ್‌ಗೆ 72 ರನ್ ಜೊತೆಯಾಟದೊಂದಿಗೆ ಉತ್ತಮ ಆರಂಭ ಒದಗಿಸಿದ್ದರು. ಈ ಹಂತದಲ್ಲಿ ಹೋಪ್ 53 ರನ್ ಗಳಿಸಿ ಔಟಾದರು. ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್ ಕೇವಲ 29 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಜೇಸನ್ ಹೋಲ್ಡರ್ ಕೆಳ ಕ್ರಮಾಂಕದಲ್ಲಿ 44 ರನ್‌ಗಳ ಇನ್ನಿಂಗ್ಸ್‌ ಆಡುವ ಮೂಲಕ ತಂಡಕ್ಕೆ ಆಸರೆಯಾದರು. ಇದಾಗ್ಯೂ ವೆಸ್ಟ್ ಇಂಡೀಸ್ 44.4 ಓವರ್​ನಲ್ಲಿ 212 ರನ್​ಗಳಿಗೆ ಸರ್ವಪತನ ಕಂಡಿತು. ಐರ್ಲೆಂಡ್ ಪರ ಆಂಡಿ ಮೆಕ್‌ಬ್ರೈನ್ 28 ರನ್‌ಗಳಿಗೆ 4 ವಿಕೆಟ್ ಪಡೆದು ಮಿಂಚಿದರು.

213 ರನ್​ಗಳ ಗುರಿ ಪಡೆದ ಐರ್ಲೆಂಡ್ 18 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ನಾಯಕ ಪಾಲ್ ಸ್ಟಿರ್ಲಿಂಗ್ (44) ಹಾಗೂ ಆ್ಯಂಡಿ ಮೆಕ್ ಬ್ರೈನ್ (59) ಹಾಗೂ ಹ್ಯಾರಿ ಟೆಕ್ಟರ್ (52) ಉಪಯುಕ್ತ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಐರ್ಲೆಂಡ್ ತಂಡವು 44.5 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿ ಪಂದ್ಯ ಮತ್ತು ಸರಣಿಯನ್ನು ವಶಪಡಿಸಿಕೊಂಡಿತು. ಈ ಗೆಲುವಿನೊಂದಿಗೆ ಐರ್ಲೆಂಡ್ ವಿಶ್ವಕಪ್ ಸೂಪರ್ ಲೀಗ್‌ನಲ್ಲಿ 68 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಇಂಗ್ಲೆಂಡ್ 95 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಬಾಂಗ್ಲಾದೇಶ 80 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಭಾರತ 49 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

ಅಷ್ಟೇ ಅಲ್ಲದೆ ಏಕದಿನ ಶ್ರೇಯಾಂಕದಲ್ಲಿ 12 ನೇ ಸ್ಥಾನದಲ್ಲಿರುವ ಐರ್ಲೆಂಡ್ 8ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ಅನ್ನು ಅವರದ್ದೇ ನೆಲದಲ್ಲಿ ಸೋಲಿಸಿ ಇತಿಹಾಸ ಬರೆಯಿತು. ಏಕೆಂದರೆ ಐರ್ಲೆಂಡ್ ತಂಡವು ಇದುವರೆಗೆ ವಿದೇಶದಲ್ಲಿ ಏಕದಿನ ಸರಣಿ ಗೆದ್ದಿಲ್ಲ. ಇದೀಗ ಏಕದಿನ ಶ್ರೇಯಾಂಕದ ಟಾಪ್​ 10 ನಲ್ಲಿರುವ ತಂಡಕ್ಕೆ ಸೋಲುಣಿಸುವ ಮೂಲಕ 2022 ರಲ್ಲಿ ಐರ್ಲೆಂಡ್ ಶುಭಾರಂಭ ಮಾಡಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಯುವ ಬೌಲರ್..!

ಇದನ್ನೂ ಓದಿ:  ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Ireland clinch historic ODI series win against West Indies)