ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಯುವ ಬೌಲರ್..!

Muzamil Sherzad: ವಿಶ್ವಕಪ್‌ನಲ್ಲಿ ಐರ್ಲೆಂಡ್‌ಗಾಗಿ ಕ್ರಿಕೆಟ್ ಆಡುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ನನ್ನ ತಾಯಿ ಮತ್ತು ಒಡಹುಟ್ಟಿದವರು ನಾನು ಆಟವಾಡುವುದನ್ನು ನೋಡಬಹುದು.

ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಯುವ ಬೌಲರ್..!
muzamil sherzad
Follow us
| Updated By: ಝಾಹಿರ್ ಯೂಸುಫ್

Updated on: Jan 15, 2022 | 3:37 PM

ಪ್ರತಿಯೊಬ್ಬ ಸಾಧಕನ ಹಿಂದೆ ಕಷ್ಟ ಕಾರ್ಪಣ್ಯಗಳ ಸರಮಾಲೆಯೇ ಇರುತ್ತೆ. ಇಂತಹ ಸಾಧನೆಗಳೇ ಯುವ ಪೀಳಿಗೆಗೆ ಮುಂದಿನ ಹೆಜ್ಜೆ ಇಡಲು ಪ್ರೇರಣೆ. ಹೀಗೆ ಸಾಧನೆಯತ್ತ ಹೊಸ ಹೆಜ್ಜೆಯನ್ನಿಟ್ಟಿರುವ ಯುವ ಕ್ರಿಕೆಟಿಗನ ಹೆಸರು ಮುಝಮಿಲ್ ಶೆರ್ಜಾದ್. ಆದರೆ ಈ ಹೆಜ್ಜೆಯ ಹಿಂದೆ 8 ಸಾವಿರ ಕಿಲೋ ಮೀಟರ್​ಗಳ ಹೆಜ್ಜೆಯ ಕಥೆಯೊಂದು ಅಡಗಿದೆ. ಹೌದು, ಮುಝಮಿಲ್ ಶೆರ್ಜಾದ್ ಐರ್ಲೆಂಡ್ ಅಂಡರ್ 19 ತಂಡದ ಆಟಗಾರ. ಆದರೆ ಶೆರ್ಜಾದ್ ಮೂಲತಃ ಅಫ್ಘಾನಿಸ್ತಾನ್ ನಿವಾಸಿ. ಐದು ವರ್ಷಗಳ ಹಿಂದೆಯಷ್ಟೇ ಮುಝಮಿಲ್ ಶೆರ್ಜಾದ್ ಐರಿಷ್​ ದೇಶಕ್ಕೆ ಕಾಲಿಟ್ಟಿದ್ದರು. ಇದೀಗ ಐರ್ಲೆಂಡ್ ತಂಡದ ಆಟಗಾರನಾಗಿ ಹೊಸ ಇನಿಂಗ್ಸ್​ ಆರಂಭಿಸಿರುವುದು ವಿಶೇಷ.

ಅತ್ತ ಬಡತನ, ಕೌಟುಂಬಿಕ ವಿವಾದ ಹಾಗೂ ತಾಲಿಬಾನಿಗಳ ಅಟ್ಟಹಾಸದಿಂದ ಅಫ್ಘಾನಿಸ್ತಾನದಲ್ಲಿ ಶೆರ್ಜಾದ್ ಕುಟುಂಬವು ನಲುಗಿ ಹೋಗಿತ್ತು. ಹೀಗಾಗಿಯೇ ಅವರ ತಾಯಿ ಮಗನನ್ನು ಹೇಗಾದರೂ ಮಾಡಿ ವಿದೇಶಕ್ಕೆ ಕಳಿಸಿ ಹೊಸ ಜೀವನ ರೂಪಿಸಬೇಕೆಂದು ಬಯಸಿದ್ದರು. ಅದಾಗಲೇ ಶೆರ್ಜಾದ್ ಚಿಕ್ಕಪ್ಪ ಐರ್ಲೆಂಡ್​ನಲ್ಲಿ ಫಾಸ್ಟ್ ಫುಡ್ ಔಟ್‌ಲೆಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮೊದಲೇ ತಂದೆಯನ್ನು ಕಳೆದುಕೊಂಡು ಕಡುಬಡತನದಲ್ಲಿದ್ದ ಶೆರ್ಜಾದ್ ಅನ್ನು ವೀಸಾ ಮೂಲಕ ಅಲ್ಲಿಗೆ ತಲುಪುದು ಕಷ್ಟಸಾಧ್ಯ ಎಂಬುದು ತಾಯಿಗೆ ಚೆನ್ನಾಗಿ ಗೊತ್ತಿತ್ತು.

ಹೀಗಾಗಿ ಮಗನನ್ನು ಐರ್ಲೆಂಡ್‌ಗೆ ಕರೆದೊಯ್ಯಲು ಬ್ರೋಕರ್‌ ಒಬ್ಬರಿಗೆ ತಾಯಿ ಹಣ ನೀಡಿದರು. ಅದರಂತೆ ಅಫ್ಘಾನಿಸ್ತಾನದ ಜಲಾಲಾಬಾದ್‌ನಿಂದ ಪ್ರಯಾಣ ಆರಂಭವಾಯಿತು. ಹೊರಡುವಾಗ 14 ವರ್ಷದ ಹುಡುಗನ ಬಳಿ ಇದ್ದದ್ದು ತಾಯಿ ಕಟ್ಟಿಕೊಟ್ಟ ಬುತ್ತಿ ಮತ್ತು ಸುಮಾರು 3400 ರೂ.

ದೊಡ್ಡ ಕನಸಿನೊಂದಿಗೆ ಪುಟ್ಟ ಹೆಜ್ಜೆಗಳ ಪ್ರಯಾಣ ಆರಂಭವಾಯಿತು. 8-9 ತಿಂಗಳುಗಳಲ್ಲಿ ಶೆರ್ಜಾದ್ ಇತರ ವಲಸಿಗರೊಂದಿಗೆ ಪಾಕಿಸ್ತಾನ, ಇರಾನ್, ಟರ್ಕಿ, ಬಲ್ಗೇರಿಯಾ, ಸೆರ್ಬಿಯಾ, ಕ್ರೊಯೇಷಿಯಾ, ಇಟಲಿ ಮತ್ತು ಫ್ರಾನ್ಸ್‌ನ ಗಡಿಗಳನ್ನು ದಾಟಿದರು. ಅದು ಕೂಡ ಕಾಲ್ನಡಿಗೆಯ ಮೂಲಕ ಎಂಬುದು ವಿಶೇಷ. ನಡಿಗೆ, ಓಟ, ಕಾಡುಗಳಲ್ಲಿ ಅಡಗಿಕೊಳ್ಳುವುದು, ಉದ್ಯಾನವನಗಳಲ್ಲಿ ಮಲಗುವುದು ಮತ್ತು ಹಿಚ್-ಹೈಕಿಂಗ್…ಹೀಗೆ 8,300 ಕಿ.ಮೀ. ಪ್ರಯಾಣಿಸಿ ಕೊನೆಗೂ 14 ವರ್ಷದ ಮುಝಮಿಲ್ ಶೆರ್ಜಾದ್ ಐರ್ಲೆಂಡ್ ತಲುಪಿದ್ದರು.

ಈ ದೀರ್ಘ ಪ್ರಯಾಣದ ಬಗ್ಗೆ ಮಾತನಾಡಿರುವ ಶೆರ್ಜಾದ್, ಅದೊಂದು ಅಪಾಯಕಾರಿ ಜರ್ನಿಯಾಗಿತ್ತು. ನಮ್ಮ ಪ್ರಯಾಣದಲ್ಲಿ ಏನು ಬೇಕಾದರೂ ನಡೆಯಬಹುದಿತ್ತು. ಏಕೆಂದರೆ ನಾವು ಯಾವುದೇ ವೀಸಾ ಇಲ್ಲದೆ ಕಾಡುಮೇಡುಗಳನ್ನು ದಾಟಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುತ್ತಿದ್ದೆವು. ಹೀಗೆ ಕೆಲವು ಕಡೆ ಟ್ರಕ್​ಗಳಲ್ಲಿ ನಮ್ಮನ್ನು ತುಂಬಲಾಗುತ್ತಿತ್ತು. ಇನ್ನು ಫ್ರಾನ್ಸ್‌ನ ಚೆರ್‌ಬರ್ಗ್‌ನಲ್ಲಿ ವಿಹಾರ ನೌಕೆಯನ್ನು ಹತ್ತಿಸಲಾಗಿತ್ತು. ಆ ಸಮಯದಲ್ಲಿ ತುಂಬಾ ಚಳಿ ಬೇರೆಯಿತ್ತು. ಕತ್ತಲೆಯಲ್ಲಿ ನಮ್ಮ ಪ್ರಯಾಣ. ಅದೃಷ್ಟವಶಾತ್ ಕೊನೆಗೆ ನಾವು ಐರ್ಲೆಂಡ್ ತಲುಪಿದ್ದೇವೆ ಎಂಬುದು ಗೊತ್ತಾಯಿತು. ಆದರೆ ನನಗೆ ಚಿಕ್ಕಪ್ಪ ವಿಳಾಸ ಗೊತ್ತಿರಲಿಲ್ಲ.

8 ಸಾವಿರ ಕಿ.ಮೀ ದಾಟಿ ಬಂದು ಗುರಿ ತಲುಪಿದೇ ಅನ್ನುವಷ್ಟರಲ್ಲಿ ಚಿಕ್ಕಪ್ಪನ ವಿಳಾಸ ಕಳೆದುಕೊಂಡಿದ್ದೆ. ಮುಂದೇನು ಎಂಬುದು ತಿಳಿಯದಂಗಾಯಿತು. ಹೀಗಾಗಿ ಡಬ್ಲಿನ್‌ನಲ್ಲಿನ ಮೊದಲ ರಾತ್ರಿಯನ್ನು ಉದ್ಯಾನವನದಲ್ಲಿ ಕಳೆದೆ. ಶೆರ್ಜಾದ್‌ಗೆ ಇಂಗ್ಲಿಷ್ ಬರದ ಕಾರಣ ಮತ್ತೊಮ್ಮೆ ಅದೃಷ್ಟ ಕೈ ಹಿಡಿಯಿತು. ಪಾರ್ಕ್​ನಲ್ಲಿ ಮಲಗಿದ್ದ ಹುಡುಗನನ್ನು ಗಮನಿಸಿದ ಏಷ್ಯಾದ ವ್ಯಕ್ತಿಯೊಬ್ಬರು ಡಬ್ಲಿನ್‌ನಲ್ಲಿರುವ ನಿರಾಶ್ರಿತರ ಕೇಂದ್ರದ ವಿಳಾಸ ನೀಡಿದರು. ಅತ್ತ ಚಿಕ್ಕಪ್ಪ ಸಿಗುವವರೆಗೂ ನಿರಾಶ್ರಿತರ ಕೇಂದ್ರದಲ್ಲಿ ಕಳೆಯಲು ನಿರ್ಧರಿಸಿದೆ.

ಅದರೊಂದು ದಿನ ಕ್ರಿಕೆಟ್​ ಐರ್ಲೆಂಡ್ ಕ್ರಿಕೆಟ್​ ಬೋರ್ಡ್​​ ವೇಗದ ಬೌಲಿಂಗ್ ಪ್ರತಿಭಾನ್ವೇಷಣೆ ಕುರಿತು ಪತ್ರಿಕೆಯಲ್ಲಿ ಜಾಹೀರಾತನ್ನು ನೀಡಿದ್ದರು. ಮೊದಲೇ ಕ್ರಿಕೆಟ್ ಹುಚ್ಚು ಹತ್ತಿಸಿಕೊಂಡಿದ್ದ ನಾನು ಕೂಡ ಒಂದು ಕೈ ನೋಡೇ ಬಿಡೋಣ ಅಂದುಕೊಂಡೆ. ಹೀಗೆ ಪ್ರತಿಭಾನ್ವೇಷಣೆಯಲ್ಲಿ ಕಾಣಿಸಿಕೊಂಡು ತನ್ನ ಬೌಲಿಂಗ್ ಪ್ರತಿಭೆಯನ್ನು ತೆರೆದಿಟ್ಟೆ. ಕ್ರಿಕೆಟ್ ಐರ್ಲೆಂಡ್‌ನ ಟ್ಯಾಲೆಂಟ್ ಪಾಥ್‌ವೇ ಮ್ಯಾನೇಜರ್ ಆಲ್ಬರ್ಟ್ ವ್ಯಾನ್ ಡೆರ್ ಮೆರ್ವೆ ಅವರು ನನ್ನ ಸಹಜ ಪ್ರತಿಭೆಯಿಂದ ಪ್ರಭಾವಿತರಾದರು. ಆ ಬಳಿಕ ನನ್ನ ಅದೃಷ್ಟ ಖುಲಾಯಿಸಿತು ಎನ್ನುತ್ತಾರೆ ಮುಝಮಿಲ್ ಶೆರ್ಜಾದ್. ಏಕೆಂದರೆ…

ಐರ್ಲೆಂಡ್ ಟ್ಯಾಲೆಂಟ್ ಪಾಥ್‌ವೇ ಮ್ಯಾನೇಜರ್ ಆಲ್ಬರ್ಟ್ ವ್ಯಾನ್ ಡೆರ್ ಮೆರ್ವೆ ಕೆಲವು ವೀಡಿಯೊಗಳನ್ನು ತೆಗೆದುಕೊಂಡು ಅದನ್ನು ಅಕಾಡೆಮಿಯ ಮ್ಯಾನೇಜರ್‌ಗೆ ತೋರಿಸಿದ್ದರು. ಮುಝಮಿಲ್ ಅವರನ್ನು ಕೆಲವು ಸೆಷನ್‌ಗಳಿಗೆ ಆಹ್ವಾನಿಸಲಾಯಿತು. ಎರಡು ವರ್ಷಗಳ ಹಿಂದೆ ಯುವ ಆಟಗಾರನ ಪ್ರತಿಭೆಯನ್ನು ಗಮನಿಸಿ ತಂಡಕ್ಕೆ ಆಯ್ಕೆ ಮಾಡಲಾಯಿತು. ಆದರೆ ಈ ಹಂತದಲ್ಲಿ, ನಮಗೆ ಆತನ ಹಿನ್ನಲೆಯ ಬಗ್ಗೆ ನಿಜಕ್ಕೂ ತಿಳಿದಿರಲಿಲ್ಲ. ತಂಡಕ್ಕೆ ಆಯ್ಕೆ ಮಾಡಿದ ಬಳಿಕ ಮುಝಮಿಲ್ ಶೆರ್ಜಾದ್​ನ ದೂರ ಹೆಜ್ಜೆಗಳ ಕಥೆ ತಿಳಿಯಿತು ಎನ್ನುತ್ತಾರೆ ಐರ್ಲೆಂಡ್ U-19 ತಂಡದೊಂದಿಗೆ ಗಯಾನಾದಲ್ಲಿರುವ ವ್ಯಾನ್ ಡೆರ್ ಮೆರ್ವೆ.

ಇನ್ನು ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಚಿಕ್ಕಪ್ಪನನ್ನು ಕೂಡ ಪತ್ತೆ ಹಚ್ಚುವಳ್ಳಿ ಶೆರ್ಜಾದ್ ಯಶಸ್ವಿಯಾದರು. ಅಷ್ಟೇ ಅಲ್ಲದೆ ಕ್ರಿಕೆಟ್ ಕಿಟ್‌ಗಳನ್ನು ಖರೀದಿಸಲು ಚಿಕ್ಕಪ್ಪನೊಂದಿಗೆ ಫಾಸ್ಟ್ ಫುಡ್ ಔಟ್‌ಲೆಟ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಹೀಗೆ ಒಂದೊಂದೇ ಹೆಜ್ಜೆಯಿಡುತ್ತಾ ಇದೀಗ ಮುಝಮಿಲ್ ಶೆರ್ಜಾದ್ ಐರ್ಲೆಂಡ್ ಅಂಡರ್ 19 ತಂಡದ ಬೌಲರ್​ ಆಗಿ ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ ಪರಿಸ್ಥಿತಿಗೆ ಅನುಗುಣವಾಗಿ ಬೌಲರ್ ಆಗಿ ಮಾರ್ಪಟ್ಟಿರುವ ಮುಝಮಿಲ್ ಶೆರ್ಜಾದ್ ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನ್ ವೀರೇಂದ್ರ ಸೆಹ್ವಾಗ್ ಅವರ ಕಟ್ಟಾ ಅಭಿಮಾನಿ ಎಂಬುದೇ ವಿಶೇಷ. ಅಂದರೆ ಬಾಲ್ಯದಲ್ಲಿ ಅಫ್ಘಾನಿಸ್ತಾನದಲ್ಲಿ ಗಲ್ಲಿ ಕ್ರಿಕೆಟ್ ಆಡುವಾಗ ಶೆರ್ಜಾದ್ ಸೆಹ್ವಾಗ್ ರೀತಿಯಲ್ಲಿ ಬ್ಯಾಟ್ ಬೀಸುತ್ತಾ ಅಬ್ಬರಿಸುತ್ತಿದ್ರಂತೆ. ಆದರೆ ಇದೀಗ ವೃತ್ತಿ ಜೀವನದಲ್ಲಿ ಬೌಲರ್ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

ಇದಾಗ್ಯೂ ಶೆರ್ಜಾದ್ ಅವರ ಬಯಕೆಯೊಂದು ಇನ್ನೂ ಕೂಡ ಈಡೇರಿಲ್ಲ. ಏಕೆಂದರೆ ಐರ್ಲೆಂಡ್​ಗೆ ತಲುಪಿದ ಬಳಿಕ ಶೆರ್ಜಾದ್ ಮತ್ತೆ ಅಫ್ಘಾನಿಸ್ತಾನ್​ಗೆ ತೆರಳಲು ಸಾಧ್ಯವಾಗಿಲ್ಲ. ಈಗಾಗಲೇ ಐರ್ಲೆಂಡ್ ಪೌರತ್ವ ಪಡೆದಿರುವ ಶೆರ್ಜಾದ್​ಗೆ ಅಫ್ಘಾನ್​ನಲ್ಲಿರುವ ತನ್ನ ಕುಟುಂಬ, ತಾಯಿ, ಇಬ್ಬರು ಸಹೋದರರು ಮತ್ತು ಸಹೋದರಿಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ.

ನಾನು ವಿಶ್ವಕಪ್‌ನಲ್ಲಿ ಐರ್ಲೆಂಡ್‌ಗಾಗಿ ಕ್ರಿಕೆಟ್ ಆಡುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ನನ್ನ ತಾಯಿ ಮತ್ತು ಒಡಹುಟ್ಟಿದವರು ನಾನು ಆಟವಾಡುವುದನ್ನು ನೋಡಬಹುದು. ಆದರೆ ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಾನು ಅವರನ್ನು ಐರ್ಲೆಂಡ್‌ಗೆ ಕರೆದುಕೊಂಡು ಬರಲು ಪ್ರಯತ್ನಿಸುತ್ತಿದ್ದೇನೆ. ಅವರ ವೀಸಾಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ಭವಿಷ್ಯದಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ…ಹೀಗೆ ಹೇಳುತ್ತಾ ಮುಝಮಿಲ್ ಶೆರ್ಜಾದ್ ಬೌಲಿಂಗ್​ ಮಾಡಲು ಶೂ ರೆಡಿ ಮಾಡುತ್ತಿದ್ದರೆ…8 ಸಾವಿರ ಕಿ.ಮೀ ನಡೆದ ಪಾದವು ಪ್ರತಿಯೊಂದು ಹೆಜ್ಜೆಯ ಕಥೆಯನ್ನು ಸಾರಿ ಸಾರಿ ಹೇಳುವಂತಿತ್ತು.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(From Afghan street to Irish U-19 team, an 8,000 km-long story)

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ