
ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಟಿ20 ಏಷ್ಯಾಕಪ್ನಲ್ಲಿ (Asia Cup 2025) ಟೀಂ ಇಂಡಿಯಾ ತನ್ನ ಮೊದಲನೇ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಕ್ಕೆ ನಾಯಕ ಸೂರ್ಯಕುಮಾರ್ ಯಾವ 11 ಆಟಗಾರರನ್ನು ಕಟ್ಟಿಕೊಂಡು ಮೈದಾನಕ್ಕಿಳಿಯುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಏಕೆಂದರೆ ಕೆಲವೊಂದು ಸ್ಥಾನಗಳಿಗೆ ಹಲವರ ಪೈಪೋಟಿ ಇದೆ. ಹೀಗಾಗಿ ಪ್ಲೇಯಿಂಗ್ 11 ಸಿದ್ಧಪಡಿಸುವುದು ನಾಯಕ ಹಾಗೂ ಮುಖ್ಯ ಕೋಚ್ಗೆ ಸವಾಲಿನ ಕೆಲಸವಾಗಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನ ತಂಡದ ಮಾಜಿ ಸ್ಟಾರ್ ಆಲ್‌ರೌಂಡರ್ ಇರ್ಫಾನ್ ಪಠಾಣ್ 2025 ರ ಏಷ್ಯಾಕಪ್‌ಗೆ ಭಾರತ ತಂಡದ ಬಲಿಷ್ಠ ಪ್ಲೇಯಿಂಗ್ 11 ಹೆಸರಿಸಿದ್ದಾರೆ.
ಪಠಾಣ್ ಪಂಜಾಬ್ ಜೋಡಿ ಅಭಿಷೇಕ್ ಶರ್ಮಾ ಮತ್ತು ಉಪನಾಯಕ ಶುಭ್‌ಮನ್ ಗಿಲ್ ಅವರನ್ನು ಆರಂಭಿಕ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ. ಫಾರ್ಮ್‌ನಲ್ಲಿರುವ ತಿಲಕ್ ವರ್ಮಾ 3 ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ ಅಂದರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಆ ಬಳಿಕ, ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಅವರಂತಹ ಅನುಭವಿ ಆಲ್‌ರೌಂಡರ್‌ಗಳು ಬರಲಿದ್ದಾರೆ.
ಇನ್ನು ವಿಕೆಟ್ ಕೀಪರ್ ಪಾತ್ರಕ್ಕೆ ಸಂಬಂಧಿಸಿದಂತೆ ಪಠಣ್ ಅವರ ಆಯ್ಕೆ ಆಸಕ್ತಿದಾಯಕವಾಗಿದೆ. ಏಕೆಂದರೆ ಆಯ್ಕೆದಾರರು ಜಿತೇಶ್ ಶರ್ಮಾ ಅವರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿದ್ದರೆ, ಇರ್ಫಾನ್, ಸಂಜು ಸ್ಯಾಮ್ಸನ್ ಅವರಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಿದ್ದಾರೆ. ಉಳಿದಂತೆ ವೇಗದ ಬೌಲರ್ಗಳಾಗಿ ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ರನ್ನು ಆಯ್ಕೆ ಮಾಡಿರುವ ಪಠಾಣ್, ಸ್ಪಿನ್ನರ್‌ಗಳ ಖೋಟಾದಲ್ಲಿ ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿಗೆ ಸ್ಥಾನ ನೀಡಿದ್ದಾರೆ.
ಇರ್ಫಾನ್ ಪಠಾಣ್ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
ಭಾರತ ಅಧಿಕೃತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ