Ishan Kishan: ಭರ್ಜರಿ ಬ್ಯಾಟಿಂಗ್ ಮೂಲಕ ವಿಶೇಷ ದಾಖಲೆ ಬರೆದ ಇಶಾನ್ ಕಿಶನ್
Virat Kohli: ವಿರಾಟ್ ಕೊಹ್ಲಿ ಮಾರ್ಚ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಈ ಸಾಧನೆ ಮಾಡಿದ್ದರು. ಕೊಹ್ಲಿ 5 ಇನ್ನಿಂಗ್ಸ್ಗಳಲ್ಲಿ 116 ಸರಾಸರಿಯಲ್ಲಿ 231 ರನ್ ಗಳಿಸಿ ದಾಖಲೆ ಬರೆದಿದ್ದರು.
ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಯು ಸಮಬಲದೊಂದಿಗೆ ಅಂತ್ಯಗೊಂಡಿದೆ. ಬೆಂಗಳೂರಿನಲ್ಲಿ ನಡೆದ ಕೊನೆಯ ಪಂದ್ಯದ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದಾಗ್ಯೂ ಈ ಪಂದ್ಯದಲ್ಲಿ ಇಶಾನ್ ಕಿಶನ್ (Ishan Kishan) ಬ್ಯಾಟ್ ಬೀಸಿದ್ದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಇಶಾನ್ ಕಿಶನ್ 7 ಎಸೆತಗಳಲ್ಲಿ 15 ರನ್ ಕಲೆಹಾಕಿದ್ದರು. ಟೀಮ್ ಇಂಡಿಯಾ 3.3 ಓವರ್ಗಳಲ್ಲಿ 28 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಿ, ಆ ಬಳಿಕ ರದ್ದು ಮಾಡಲಾಗಿತ್ತು. ವಿಶೇಷ ಎಂದರೆ ಈ ಪಂದ್ಯದಲ್ಲಿ 15 ರನ್ ಬಾರಿಸುವ ಮೂಲಕ ಇಶಾನ್ ಕಿಶನ್ ಟೀಮ್ ಇಂಡಿಯಾ ಪರ ವಿಶೇಷ ಸಾಧನೆ ಮಾಡಿದ್ದಾರೆ.
ಸೌತ್ ಆಫ್ರಿಕಾ ವಿರುದ್ದದ ಸರಣಿಯ 5 ಪಂದ್ಯಗಳಲ್ಲಿ ಇಶಾನ್ ಕಿಶನ್ 41ರ ಸರಾಸರಿಯಲ್ಲಿ 206 ರನ್ ಗಳಿಸಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಬಾರಿಸಿದ್ದರು. ಈ ಮೂಲಕ ದ್ವಿಪಕ್ಷೀಯ ಟಿ20 ಸರಣಿಯೊಂದರಲ್ಲಿ 200 ಕ್ಕೂ ಅಧಿಕ ರನ್ ಕಲೆಹಾಕಿದ 4ನೇ ಭಾರತೀಯ ಬ್ಯಾಟ್ಸ್ಮನ್ ಎಂಬ ವಿಶೇಷ ದಾಖಲೆಯನ್ನು ಕಿಶನ್ ಬರೆದಿದ್ದಾರೆ.
ಇದಕ್ಕೂ ಮುನ್ನ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಕೇವಲ 3 ಭಾರತೀಯ ಬ್ಯಾಟ್ಸ್ಮನ್ಗಳು ಮಾತ್ರ 200 ರನ್ಗಳನ್ನು ಕಲೆಹಾಕಿದ್ದರು. ವಿರಾಟ್ ಕೊಹ್ಲಿ ಮಾರ್ಚ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಈ ಸಾಧನೆ ಮಾಡಿದ್ದರು. ಕೊಹ್ಲಿ 5 ಇನ್ನಿಂಗ್ಸ್ಗಳಲ್ಲಿ 116 ಸರಾಸರಿಯಲ್ಲಿ 231 ರನ್ ಗಳಿಸಿ ದಾಖಲೆ ಬರೆದಿದ್ದರು. ಈ ವೇಳೆ ಕೊಹ್ಲಿಯ ಬ್ಯಾಟ್ನಿಂದ 3 ಅರ್ಧಶತಕಗಳು ಮೂಡಿಬಂದಿತ್ತು.
ಹಾಗೆಯೇ 2020 ರ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಸರಣಿಯ 5 ಪಂದ್ಯಗಳಲ್ಲಿ ಕೆಎಲ್ ರಾಹುಲ್ 224 ರನ್ ಗಳಿಸಿದ್ದರು. ಈ ವೇಳೆ ರಾಹುಲ್ ಬ್ಯಾಟ್ನಿಂದ 2 ಅರ್ಧಶತಕಗಳು ಮೂಡಿಬಂದಿತ್ತು. ಹಾಗೆಯೇ ಶ್ರೇಯಸ್ ಅಯ್ಯರ್ ಫೆಬ್ರವರಿ 2022 ರಲ್ಲಿ ಶ್ರೀಲಂಕಾ ವಿರುದ್ಧ ಆಡಿದ 3 ಪಂದ್ಯಗಳಲ್ಲಿ 204 ರನ್ ಗಳಿಸಿ ಈ ವಿಶೇಷ ಸಾಧನೆ ಮಾಡಿದ್ದರು. ಇದೀಗ ಇಶಾನ್ ಕಿಶನ್ ಕೂಡ ಒಂದೇ ಸರಣಿಯ ಮೂಲಕ 200 ಕ್ಕೂ ಅಧಿಕ ರನ್ ಕಲೆಹಾಕಿ ಈ ವಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಇನ್ನು ಸೌತ್ ಆಫ್ರಿಕಾ ವಿರುದ್ದದ ದ್ವಿಪಕ್ಷೀಯ ಟಿ20 ಸರಣಿಯಲ್ಲಿ 200 ಕ್ಕೂ ಅಧಿಕ ರನ್ ಕಲೆಹಾಕಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನೂ ಕೂಡ ಇಶಾನ್ ಕಿಶನ್ ನಿರ್ಮಿಸಿದ್ದಾರೆ. ಒಟ್ಟಿನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಇಶಾನ್ ಕಿಶನ್ ಸದ್ಯ ಐರ್ಲೆಂಡ್ ವಿರುದ್ದದ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.