ಇಶಾನ್ ಕಿಶನ್ಗೆ ಪಂದ್ಯವಾಡದಂತೆ ಬಿಸಿಸಿಐ ಸೂಚನೆ
Ishan Kishan: ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಹಾಗೂ ಮುಂಬರುವ ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಇಶಾನ್ ಕಿಶನ್ ಸ್ಥಾನ ಪಡೆದಿದ್ದರು. ಆದರೆ ಇದೀಗ ದೇಶೀಯ ಅಂಗಳದಲ್ಲಿ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯಲ್ಲಿ ಎಲ್ಲಾ ಪಂದ್ಯಗಳನ್ನಾಡದಂತೆ ಇಶಾನ್ ಕಿಶನ್ಗೆ ಬಿಸಿಸಿಐ ಸೂಚಿಸಿದೆ.

ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿದ್ದ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಹೊರಗುಳಿಯುವಿಕೆಗೆ ಮುಖ್ಯ ಕಾರಣ ಬಿಸಿಸಿಐ ಕಡೆಯಿಂದ ಬಂದ ಸೂಚನೆ.
ಹೌದು, ಇಶಾನ್ ಕಿಶನ್ಗೆ ಎಲ್ಲಾ ಪಂದ್ಯಗಳನ್ನು ಆಡದಂತೆ ಬಿಸಿಸಿಐ ಆಯ್ಕೆ ಸಮಿತಿ ಸೂಚಿಸಿದ್ದಾರೆ. ಹೀಗಾಗಿಯೇ ರಾಜಸ್ಥಾನ್ ಹಾಗೂ ಪುದುಚೇರಿ ವಿರುದ್ಧದ ಪಂದ್ಯಗಳಿಂದ ಇಶಾನ್ ಕಿಶನ್ ಹೊರಗುಳಿದಿದ್ದಾರೆ. ಅಲ್ಲದೆ ನಾಳೆ (ಡಿ.31) ನಡೆಯಲಿರುವ ತಮಿಳುನಾಡು ವಿರುದ್ಧದ ಪಂದ್ಯಕ್ಕೂ ಅವರು ಅಲಭ್ಯರಾಗಲಿದ್ದಾರೆ.
ಇಶಾನ್ ಕಿಶನ್ ಹೊರಗುಳಿಯುತ್ತಿರುವುದೇಕೆ?
ಇಶಾನ್ ಕಿಶನ್ ಮುಂಬರುವ ಟಿ20 ವಿಶ್ವಕಪ್ಗೆ ಆಯ್ಕೆಯಾಗಿದ್ದಾರೆ. 15 ಸದಸ್ಯರುಗಳ ತಂಡದಲ್ಲಿ ಹೆಚ್ಚುವರಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆಯಾಗಿರುವ ಕಿಶನ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇತ್ತ ವಿಜಯ ಹಝಾರೆ ಟೂರ್ನಿಯಲ್ಲೂ ಆ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.
ಇದಾಗ್ಯೂ ಅವರನ್ನು ಎಲ್ಲಾ ಪಂದ್ಯಗಳಲ್ಲಿ ಕಣಕ್ಕಿಳಿಯದಂತೆ ಸೂಚಿಸಲು ಮುಖ್ಯ ಕಾರಣ ಗಾಯದ ಸಮಸ್ಯೆಯಿಂದ ಹೊರಗಿಡುವುದು. ಇಶಾನ್ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಿಂದ ಸತತ ಪಂದ್ಯವಾಡುತ್ತಿದ್ದಾರೆ.
ಹೀಗೆ ಸತತ ಪಂದ್ಯಗಳನ್ನಾಡುತ್ತಿರುವುದರಿಂದ ಫಿಟ್ನೆಸ್ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಈ ಮುನ್ನಚ್ಚರಿಕೆಯ ಸಲುವಾಗಿ ಎಲ್ಲಾ ಪಂದ್ಯಗಳನ್ನಾಡದಂತೆ ಸೂಚಿಸಲಾಗಿದೆ.
ಹೀಗಾಗಿಯೇ ಕರ್ನಾಟಕ ವಿರುದ್ಧದ ಪಂದ್ಯದ ಬಳಿಕ ಇಶಾನ್ ಕಿಶನ್ ಮನೆಗೆ ತೆರಳಿದ್ದಾರೆ. ಅಲ್ಲದೆ ಜನವರಿ 3 ರಂದು ನಡೆಯಲಿರುವ ಕೇರಳ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ಜಾರ್ಖಂಡ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಏಕದಿನ ತಂಡಕ್ಕೂ ಇಶಾನ್?
ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆಯಾಗುವ ಸಾಧ್ಯತೆಯಿದೆ. ಆಯ್ಕೆ ಸಮಿತಿಯು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಬದಲಿಗೆ ಇಶಾನ್ ಕಿಶನ್ ಅವರನ್ನು ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಆಯ್ಕೆ ಮಾಡಲು ಆಸಕ್ತಿ ಹೊಂದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: 310ರ ಸ್ಟ್ರೈಕ್ ರೇಟ್ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ, ಆದರೆ…
ಹೀಗಾಗಿ ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನು ಟಿ20 ತಂಡದಲ್ಲಿ ಈಗಾಗಲೇ ಸ್ಥಾನ ಪಡೆದಿರುವ ಕಾರಣ ಅವರು ಕಿವೀಸ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
