ಎಂದಿಗೂ ಗಡಿಬಿಡಿ ಮಾಡಿಕೊಂಡಿಲ್ಲ: ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
India vs South Africa: ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 175 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 12.3 ಓವರ್‌ಗಳಲ್ಲಿ 74 ರನ್ ಗಳಿಸಿ ಆಲೌಟ್ ಆಗಿದೆ.

ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಹಾರ್ದಿಕ್ ಪಾಂಡ್ಯ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 14 ಓವರ್‌ಗಳಲ್ಲಿ ಕಲೆಹಾಕಿದ್ದು ಕೇವಲ 103 ರನ್ಗಳು ಮಾತ್ರ. ಆದರೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಾಂಡ್ಯ ಇಡೀ ಪಂದ್ಯ ಚಿತ್ರಣ ಬದಲಿಸಿಬಿಟ್ಟರು.
ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ ಕೇವಲ 28 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 59 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 175 ರನ್ಗಳಿಸಲು ಸಾಧ್ಯವಾಯಿತು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 12.3 ಓವರ್‌ಗಳಲ್ಲಿ ಕೇವಲ 74 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ ಬರೋಬ್ಬರಿ 101 ರನ್ಗಳ ಅಮೋಘ ಜಯ ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ ಅರ್ಧಶತಕ ಹಾಗೂ ಒಂದು ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.
ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, ನನಗೆ ನನ್ನ ಶಾಟ್ಗಳ ಮೇಲೆ ಸಂಪೂರ್ಣ ನಂಬಿಕೆಯಿತ್ತು. ಪಿಚ್ ಕೂಡ ಸ್ವಲ್ಪ ಮಿಶ್ರಿತವಾಗಿತ್ತು. ಇಂತಹ ಸಂದರ್ಭಗಳಲ್ಲಿ ಧೈರ್ಯಶಾಲಿಯಾಗಿ ಬ್ಯಾಟ್ ಮಾಡಬೇಕಾಗುತ್ತದೆ. ಅದನ್ನೇ ನಾನು ಮಾಡಿದೆ.
ನಾನು ಚೆಂಡನ್ನು ಗುರಿಯಾಗಿಸುವ ಬದಲು ಚೆಂಡನ್ನು ಟೈಮಿಂಗ್ನಲ್ಲಿ ಹೊಡೆಯಲು ಪ್ರಯತ್ನಿಸಿದೆ. ಇದು ಫಲ ನೀಡಿದೆ. ಈ ಪ್ರದರ್ಶನವು ನಿಜಕ್ಕೂ ತೃಪ್ತಿ ನೀಡಿದೆ. ಏಕೆಂದರೆ ಕಳೆದ ಆರು ಅಥವಾ ಏಳು ತಿಂಗಳುಗಳು ಫಿಟ್ನೆಸ್ ದೃಷ್ಟಿಕೋನದಿಂದ ನಿಜವಾಗಿಯೂ ಅದ್ಭುತವಾಗಿವೆ ಎಂದು ನಾನು ಭಾವಿಸುತ್ತೇನೆ. ಅದರ ಹಿಂದೆ ಕಠಿಣ ಪರಿಶ್ರಮವಿದೆ. ಕಳೆದ 50 ದಿನಗಳ ಕಾಲ ನಾನು ನನ್ನ ಪ್ರೀತಿಪಾತ್ರರಿಂದ ದೂರವಿದ್ದೆ. ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಸಮಯ ಕಳೆದಿದ್ದೆ. ಇದೀಗ ಅದಕ್ಕೆಲ್ಲಾ ಫಲಿತಾಂಶಗಳು ಸಿಗುವಾಗ ತುಂಬಾ ಖುಷಿಯಾಗುತ್ತದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.
ಒಬ್ಬ ಕ್ರಿಕೆಟಿಗನಾಗಿ, ನನ್ನ ಪಾತ್ರದ ಬಗ್ಗೆ ನಾನು ಎಂದಿಗೂ ಗಡಿಬಿಡಿಯಾಗಿಲ್ಲ. ನಾನು ಏನು ಬಯಸುತ್ತೀನೋ ಅದು ಮುಖ್ಯವಲ್ಲ. ಭಾರತ ಏನು ಬಯಸುತ್ತದೆಯೋ ಅದು ಮುಖ್ಯ. ನನಗೆ ಅವಕಾಶಗಳು ಸಿಕ್ಕಾಗಲೆಲ್ಲಾ, ನಾನು ನನ್ನ ಕೈಲಾದಷ್ಟು ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ಉತ್ತಮವಾಗುತ್ತದೆ, ಮತ್ತೆ ಕೆಲ ದಿನಗಳಲ್ಲಿ ನಾವಂದುಕೊಂಡಂತೆ ಆಗುವುದಿಲ್ಲ. ಆದರೆ ನನ್ನ ಮನಸ್ಥಿತಿ ಯಾವಾಗಲೂ ಒಂದೇ ರೀತಿ ಇರುತ್ತದೆ.
ಇದನ್ನೂ ಓದಿ: ಕೇವಲ ೧ ರನ್ನಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಟೀಮ್ ಇಂಡಿಯಾ
ನನ್ನ ವೃತ್ತಿಜೀವನದುದ್ದಕ್ಕೂ ನಾನು ಯಾವುದೇ ತಂಡಕ್ಕಾಗಿ ಆಡಿದ್ದರೂ, ನನ್ನ ತಂಡವನ್ನು, ದೇಶವನ್ನು ಮೊದಲು ಇಡಲು ಪ್ರಯತ್ನಿಸಿದ್ದೇನೆ. ಅದೇ ನನ್ನ ದೊಡ್ಡ ಧ್ಯೇಯ. ಇಂತಹ ಧ್ಯೇಯ ಹೊಂದಿರುವುದರಿಂದಲೇ ನನಗೆ ಉತ್ತಮ ಪ್ರದರ್ಶನ ನೀಡಲು ಸಹಾಯವಾಗುತ್ತಿದೆ ಎಂದು ನಾನು ನಂಬುತೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
Published On - 8:55 am, Wed, 10 December 25
