ಟೀಂ ಇಂಡಿಯಾಕ್ಕೆ ಶಾಕಿಂಗ್ ಸುದ್ದಿ; ಬೆಡ್ ರೆಸ್ಟ್‌ನಲ್ಲಿ ಬುಮ್ರಾ..! ಕ್ರಿಕೆಟ್​ನಿಂದ ಎಷ್ಟು ದಿನ ದೂರ?

|

Updated on: Jan 15, 2025 | 7:30 PM

Jasprit Bumrah's Back Injury: ಆಸ್ಟ್ರೇಲಿಯಾ ಪ್ರವಾಸದಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ ಅವರ ಗಾಯ ಗಂಭೀರವಾಗಿದೆ ಎಂದು ವರದಿಯಾಗಿದೆ. ಬುಮ್ರಾ ಅವರಿಗೆ ಸಂಪೂರ್ಣ ವಿಶ್ರಾಂತಿ ಅಗತ್ಯವಿದ್ದು, ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ. ಚಾಂಪಿಯನ್ಸ್ ಟ್ರೋಫಿ ಮತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಅವರು ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಚಿಕಿತ್ಸೆಯ ನಂತರವಷ್ಟೇ ಅವರ ಮರಳುವಿಕೆಯ ಬಗ್ಗೆ ತಿಳಿಯಲಿದೆ.

ಟೀಂ ಇಂಡಿಯಾಕ್ಕೆ ಶಾಕಿಂಗ್ ಸುದ್ದಿ; ಬೆಡ್ ರೆಸ್ಟ್‌ನಲ್ಲಿ ಬುಮ್ರಾ..! ಕ್ರಿಕೆಟ್​ನಿಂದ ಎಷ್ಟು ದಿನ ದೂರ?
ಜಸ್ಪ್ರೀತ್ ಬುಮ್ರಾ
Follow us on

ಆಸ್ಟ್ರೇಲಿಯಾ ಪ್ರವಾಸದಲ್ಲಿ ಬೆನ್ನು ನೋವಿಗೆ ತುತ್ತಾಗಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬಗ್ಗೆ ಆಘಾತಕ್ಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಆರಂಭದಲ್ಲಿ ಬುಮ್ರಾ ಕೆಲವು ದಿನಗಳವರೆಗೆ ವಿಶ್ರಾಂತಿ ಪಡೆದು ಆ ಬಳಿಕ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆ ಬಳಿಕ ಬುಮ್ರಾ ಚೇತರಿಸಿಕೊಳ್ಳಲು ಕೆಲವು ದಿನಗಳ ಸಮಯಾವಕಾಶ ಬೇಕಾಗಿರುವುದರಿಂದ ಅವರು ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಜಸ್ಪ್ರೀತ್ ಬುಮ್ರಾರ ಬೆನ್ನಿನಲ್ಲಿ ಊತ ಕಂಡುಬಂದಿದ್ದು ವೈದ್ಯರು ಸಂಪೂರ್ಣವಾಗಿ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಟೀಂ ಇಂಡಿಯಾಕ್ಕೆ ಆಘಾತ

ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ಜಸ್ಪ್ರೀತ್ ಬುಮ್ರಾ ಇಂಜುರಿ ಗಂಭೀರವಾಗಿದ್ದು, ಮುಂದಿನ ವಾರ ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಬುಮ್ರಾ ಯಾವ ದಿನ ಹೋಗಲಿದ್ದಾರೆ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. ಹೀಗಾಗಿ ಅಲ್ಲಿಯವರೆಗೆ ಮನೆಯಲ್ಲಿ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಬುಮ್ರಾಗೆ ಸಲಹೆ ನೀಡಿದ್ದಾರೆ. ಬುಮ್ರಾರ ಬೆನ್ನಿನ ಕೆಳಭಾಗದಲ್ಲಿ ಕಂಡುಬಂದಿರುವ ಊತ ಇನ್ನು ಕಡಿಮೆಯಾಗಿಲ್ಲ. ಅದು ಕಡಿಮೆಯಾದ ಬಳಿಕ ಅವರಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ವರದಿ ಮಾಡಿದೆ.

ಚಾಂಪಿಯನ್ಸ್ ಟ್ರೋಫಿ ಆಡುವುದು ಅಸಾಧ್ಯ!

ಈ ಸುದ್ದಿ ಹೊರಬಿದ್ದ ಬಳಿಕ ಇದೀಗ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅಸಾಧ್ಯ ಎನ್ನಲಾಗುತ್ತಿದೆ. ಅಲ್ಲದೆ ಅವರನ್ನು ವಾಪಸ್ ಕರೆತರುವ ಆತುರ ಬಿಸಿಸಿಐಗೂ ಇಲ್ಲ. ಬುಮ್ರಾ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂದರೆ ಅವರು ಯಾವಾಗ ಆಟಕ್ಕೆ ಮರಳುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ. ಅದೇನೇ ಇರಲಿ, ಅವರ ಚಿಕಿತ್ಸೆಯ ವಿಧಾನಗಳು ತಿಳಿದಾಗ ಮಾತ್ರ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಬುಮ್ರಾಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೆ, ಅವರು ಮತ್ತೊಮ್ಮೆ ಕ್ರಿಕೆಟ್​ಗೆ ಮರಳಲು ಬಹಳ ಸಮಯ ತೆಗೆದುಕೊಳ್ಳಬಹುದು.

ವಾಸ್ತವವಾಗಿ ಬುಮ್ರಾ ಬಹಳ ದಿನಗಳಿಂದ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ಗಾಯದಿಂದಾಗಿ ಬುಮ್ರಾ ಈ ಹಿಂದೆ ಭಾರತ ತಂಡದಿಂದ ಹೊರಗುಳಿಯಬೇಕಾಯಿತು. ಹೀಗಾಗಿಯೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆ ಬಳಿಕ ಚೇತರಿಸಿಕೊಂಡು ತಂಡ ಸೇರಿಕೊಂಡಿದ್ದ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದರು. ಆದರೆ, ಸರಣಿಯ ಕೊನೆಯ ಟೆಸ್ಟ್​ನಲ್ಲಿ ಬೆನ್ನು ನೋವಿಗೆ ಸಿಲುಕಿ ಮೈದಾನದಿಂದ ಹೊರನಡೆದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ