Vijay Hazare Trophy 2025: ಹರಿಯಾಣವನ್ನು ಮಣಿಸಿ 5ನೇ ಬಾರಿಗೆ ಫೈನಲ್ಗೇರಿದ ಕರ್ನಾಟಕ..!
Vijay Hazare Trophy 2025: ವಿಜಯ್ ಹಜಾರೆ ಟ್ರೋಫಿಯ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಹರಿಯಾಣವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಐದನೇ ಬಾರಿಗೆ ಫೈನಲ್ ತಲುಪಿದೆ. ಹರಿಯಾಣ ನೀಡಿದ 237 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ಪರ ದೇವದತ್ ಪಡಿಕ್ಕಲ್ (86) ಮತ್ತು ಸ್ಮರಣ್ ರವಿಚಂದ್ರನ್ (76) ಗೆಲುವಿನ ಅರ್ಧಶತಕ ಸಿಡಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ವಿಜಯ್ ಹಜಾರೆಯ ಟ್ರೋಫಿಯಲ್ಲಿ ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ, ಹರಿಯಾಣ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ವಡೋದರಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹರಿಯಾಣ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 237 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ದೇವದತ್ ಪಡಿಕ್ಕಲ್ ಹಾಗೂ ಸ್ಮರಣ್ ರವಿಚಂದ್ರನ್ರ ಅರ್ಧಶತಕದ ನೆರವಿನಿಂದ 47.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಈ ಮೂಲಕ ಐದನೇ ಬಾರಿಗೆ ಈ ಟೂರ್ನಿಯಲ್ಲಿ ಫೈನಲ್ಗೇರಿದ ಸಾಧನೆ ಮಾಡಿದೆ.
ಹರಿಯಾಣಕ್ಕೆ ರಾಣಾ- ಅಂಕಿತ್ ಆಸರೆ
ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಹರಿಯಾಣ ತಂಡಕ್ಕೆ ಮೊದಲ ವಿಕೆಟ್ಗೆ 32 ರನ್ಗಳ ಸಾಧಾರಣ ಆರಂಭ ಸಿಕ್ಕಿತು. ಆರಂಭಿಕ ಅರ್ಶ್ ರಂಗ ಕೇವಲ 10 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಆ ನಂತರ ಜೊತೆಯಾದ ಹಿಮಾಂಶು ರಾಣಾ ಹಾಗೂ ಅಂಕಿತ್ ರಾಜೇಶ್ ಅರ್ಧಶತಕದ ಜೊತೆಯಾಟವನ್ನಾಡಿದರು. ಆದರೆ ಈ ಇಬ್ಬರು ಕೂಡ ಅರ್ಧಶತಕದ ಹೊಸ್ತಿಲಿನಲಿ ಎಡವಿ ಕ್ರಮವಾಗಿ 44 ಹಾಗೂ 48 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
237 ರನ್ಗಳ ಟಾರ್ಗೆಟ್
ಕೆಳಕ್ರಮಾಂಕದಲ್ಲಿ ದಿನೇಶ್ 20 ರನ್, ರಾಹುಲ್ ತೇವಾಟಿಯಾ 22 ರನ್, ಸಮಿತ್ ಕುಮಾರ್ 21 ರನ್ ಹಾಗೂ ಅನುಜ್ ಹೀರಾ 23 ರನ್ಗಳ ಕಾಣಿಕೆ ನೀಡಿ ತಂಡವನ್ನು 237 ರನ್ಗಳಿಗೆ ಕೊಂಡೊಯ್ದರು. ಇತ್ತ ಕರ್ನಾಟಕ ಪರ ಬೌಲಿಂಗ್ನಲ್ಲಿ ಮಿಂಚಿದ ಅಭಿಲಾಶ್ ಶೆಟ್ಟಿ ಪ್ರಮುಖ 4 ವಿಕೆಟ್ ಪಡೆದರೆ, ಶ್ರೇಯಾಸ್ ಗೋಪಾಲ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಹಾಗೂ ಹಾರ್ದಿಕ್ ರಾಜ್ 1 ವಿಕೆಟ್ ಉರುಳಿಸಿದರು.
ಕರ್ನಾಟಕಕ್ಕೆ ಆರಂಭಿಕ ಆಘಾತ
ಹರಿಯಾಣ ನೀಡಿದ 237 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಮಯಾಂಕ್ ಆಗರ್ವಾಲ್ ಈ ಪಂದ್ಯದಲ್ಲೂ ಗಮನಾರ್ಹ ಪ್ರದರ್ಶನ ನೀಡಲು ವಿಫಲರಾದರು. ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ಮಯಾಂಕ್ ಸೊನ್ನೆಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ ಆರಂಭದಲ್ಲೇ ಹಿನ್ನಡೆ ಅನುಭವಿಸಬೇಕಾಯಿತು. ಆ ನಂತರ ಬಂದ ಕೆವಿ ಅನೀಶ್ ಕೂಡ 22 ರನ್ಗಳಿಗೆ ಸುಸ್ತಾದರು. ಹೀಗಾಗಿ ತಂಡ 66 ರನ್ ಕಲೆಹಾಕುವಷ್ಟರಲ್ಲಿ ಪ್ರಮುಖ 2 ವಿಕೆಟ್ಗಳನ್ನು ಕಳೆದುಕೊಂಡಿತು.
ಪಡಿಕ್ಕಲ್- ಸ್ಮರಣ್ ಗೆಲುವಿನ ಅರ್ಧಶತಕ
ಆದರೆ ಆ ಬಳಿಕ ಜೊತೆಯಾದ ದೇವದತ್ ಪಡಿಕ್ಕಲ್ ಹಾಗೂ ಸ್ಮರಣ್ ರವಿಚಂದ್ರನ್ ತಲಾ ಅರ್ಧಶತಕ ಸಿಡಿಸಿದಲ್ಲದೆ ಶತಕದ ಜೊತೆಯಾಟವನ್ನಾಡಿದರು. ಈ ಹಂತದಲ್ಲಿ ಪಡಿಕ್ಕಲ್ 113 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 86 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಪಡಿಕ್ಕಲ್ ನಂತರ ಬಂದ ಶ್ರೀಜಿತ್ ಕೂಡ 3 ರನ್ಗಳಿಗೆ ಸುಸ್ತಾದರು. ಆದಾಗ್ಯೂ ಒಂದು ತುದಿಯಲ್ಲಿ ಗೆಲುವಿನ ಇನ್ನಿಂಗ್ಸ್ ಆಡಿದ ಸ್ಮರಣ್ 94 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿ 76 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಶ್ರೇಯಸ್ ಗೋಪಾಲ್ ಅಜೇಯ 23 ರನ್ ಹಾಗೂ ಅಭಿನವ್ ಅಜೇಯ 3 ರನ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ