IND W vs IRE W: ಭಾರತಕ್ಕೆ 304 ರನ್‌ಗಳ ದಾಖಲೆಯ ಜಯ; ಸರಣಿ ಕ್ಲೀನ್ ಸ್ವೀಪ್
IND W vs IRE W: ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಮಹಿಳಾ ತಂಡ 304 ರನ್‌ಗಳ ಗೆಲುವು ದಾಖಲಿಸಿದೆ. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಅತಿ ದೊಡ್ಡ ಗೆಲುವಾಗಿದೆ. ಅದೇ ಸಮಯದಲ್ಲಿ ಭಾರತ ತಂಡವು ಈ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿದೆ.
ರಾಜ್‌ಕೋಟ್‌ನಲ್ಲಿ ನಡೆದ ಭಾರತ ಹಾಗೂ ಐರ್ಲೆಂಡ್ ಮಹಿಳಾ ತಂಡಗಳ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಆತಿಥೇಯ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಕೇವಲ 131 ರನ್ಗಳಿಗೆ ಆಲೌಟ್ ಮಾಡಿದ ಸ್ಮೃತಿ ಮಂಧಾನ ಪಡೆ ಬರೋಬ್ಬರಿ 304 ರನ್‌ಗಳ ದಾಖಲೆಯ ಜಯ ದಾಖಲಿಸಿದೆ. ಈ ಪಂದ್ಯದ ಗೆಲುವಿನೊಂದಿಗೆ ಐರ್ಲೆಂಡ್ ವಿರುದ್ಧದ ತನ್ನ ಪಾರುಪತ್ಯವನ್ನು ಟೀಂ ಇಂಡಿಯಾ ಮುಂದುವರೆಸಿದಂತ್ತಾಗಿದೆ. ಈ ಮೊದಲು ನಡೆದಿದ್ದ ಎರಡು ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿದ್ದ ಭಾರತ ಮಹಿಳಾ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಭಾರಿ ಜಯ ದಾಖಲಿಸುವುದರೊಂದಿಗೆ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಬೀಗಿದೆ.
435 ರನ್‌ಗಳ ಬೃಹತ್ ಟಾರ್ಗೆಟ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ದಾಖಲೆಯ 435 ರನ್ ಕಲೆಹಾಕಿತು. ತಂಡದ ಪರ ಆರಂಭಿಕರಾದ ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂಧಾನ ಶತಕ ಸಿಡಿಸಿದರೆ, ವಿಕೆಟ್ ಕೀಪರ್ ರಿಚಾ ಘೋಷ್ ಕೂಡ ಅರ್ಧಶತಕ ದಾಖಲಿಸಿದರು. ಈ ಮೂಲಕ ಭಾರತ ಮಹಿಳಾ ಏಕದಿನದಲ್ಲಿ 400 ಸ್ಕೋರ್ ದಾಟಿದ ಏಷ್ಯಾದ ಮೊದಲ ತಂಡ ಎಂಬ ಇತಿಹಾಸವನ್ನು ಸೃಷ್ಟಿಸಿತು. ಇದಲ್ಲದೆ ಕಳೆದ ಪಂದ್ಯದಲ್ಲೂ ಟೀಂ ಇಂಡಿಯಾ 350ಕ್ಕೂ ಹೆಚ್ಚು ರನ್ ಗಳಿಸಿತ್ತು.
131 ರನ್ಗಳಿಗೆ ಆಲೌಟ್
ಈ ದೊಡ್ಡ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ತಂಡದ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಇಡೀ ತಂಡ ಕೇವಲ 31.4 ಓವರ್‌ಗಳನ್ನು ಮಾತ್ರ ಆಡಲಷ್ಟೇ ಶಕ್ತವಾಗಿ 131 ರನ್ಗಳಿಗೆ ಆಲೌಟ್ ಆಯಿತು. ಭಾರತದ ಭಿಗಿ ಬೌಲಿಂಗ್ಗೆ ನಲುಗಿದ ಐರೀಶ್ ತಂಡದ ಪರ ಯಾವುದೇ ಬ್ಯಾಟರ್ಗೆ 50 ರನ್ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಇತ್ತ ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ ಗರಿಷ್ಠ 3 ವಿಕೆಟ್ ಪಡೆದರೆ, ತನುಜಾ ಕನ್ವರ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಉಳಿದಂತೆ ಟಿಟಾಸ್ ಸಾಧು, ಸಯಾಲಿ ಸತ್ಘರೆ, ಮಿನ್ನು ಮಣಿ ತಲಾ 1 ವಿಕೆಟ್ ಪಡೆದರು.
ದಾಖಲೆಯ ಜೊತೆಯಾಟ
ಈ ಪಂದ್ಯದಲ್ಲಿ ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂಧಾನ ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಆಗಿದ್ದರು. ಮೊದಲ ವಿಕೆಟ್‌ಗೆ ಈ ಇಬ್ಬರ ನಡುವೆ 233 ರನ್‌ಗಳ ಜೊತೆಯಾಟವಿತ್ತು. ಈ ವೇಳೆ ಪ್ರತೀಕಾ ರಾವಲ್ 129 ಎಸೆತಗಳಲ್ಲಿ 20 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಂತೆ 154 ರನ್ ಗಳಿಸಿದರೆ, ನಾಯಕಿ ಸ್ಮೃತಿ ಮಂಧಾನ 80 ಎಸೆತಗಳಲ್ಲಿ 135 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಏಕದಿನದಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಈ ಇನ್ನಿಂಗ್ಸ್‌ನಲ್ಲಿ ಅವರು 12 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:27 pm, Wed, 15 January 25