Jasprit Bumrah: ರೋಹಿತ್ ಪಡೆಗೆ ಬಿಗ್ ಶಾಕ್; ಟಿ20 ವಿಶ್ವಕಪ್​ನಿಂದ ಜಸ್ಪ್ರೀತ್ ಬುಮ್ರಾ ಔಟ್..!

T20 World Cup: ತಂಡದ ಸ್ಟಾರ್ ಬೌಲರ್ ಹಾಗೂ ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಜಸ್ಪ್ರೀತ್ ಬುಮ್ರಾ ಬೆನ್ನುಮೂಳೆಯ ಇಂಜುರಿಯಿಂದಾಗಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Jasprit Bumrah: ರೋಹಿತ್ ಪಡೆಗೆ ಬಿಗ್ ಶಾಕ್; ಟಿ20 ವಿಶ್ವಕಪ್​ನಿಂದ ಜಸ್ಪ್ರೀತ್ ಬುಮ್ರಾ ಔಟ್..!
Jasprit Bumrah
TV9kannada Web Team

| Edited By: pruthvi Shankar

Sep 29, 2022 | 4:25 PM

ಟಿ20 ವಿಶ್ವಕಪ್​ಗೆ (T20 World Cup) ಭರ್ಜರಿ ತಯಾರಿಯಲ್ಲಿದ್ದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಈಗಾಗಲೇ ನಡೆದಿರುವ ಹಾಗೂ ನಡೆಯುತ್ತಿರುವ ಟಿ20 ಸರಣಿಯಲ್ಲಿ ಡೆತ್ ಬೌಲಿಂಗ್​ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾಕ್ಕೆ ಈ ಸುದ್ದಿ ಇನ್ನಷ್ಟು ಆತಂಕ ಸೃಷ್ಟಿಸಿದೆ. ತಂಡದ ಸ್ಟಾರ್ ಬೌಲರ್ ಹಾಗೂ ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಜಸ್ಪ್ರೀತ್ ಬುಮ್ರಾ (Jasprit Bumrah) ಬೆನ್ನುಮೂಳೆಯ ಇಂಜುರಿಯಿಂದಾಗಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆದರೆ ಈ ಬಗ್ಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯಿಂದ (BCCI) ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಇದಕ್ಕೆ ಪೂರಕವೆಂಬಂತೆ ನಿನ್ನೆ ತಿರುವನಂತಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಿಂದಲೂ ಬುಮ್ರಾ ಹಿಂದೆ ಸರಿದಿದ್ದರು. ಹೀಗಾಗಿ ಮೂಲಗಳು ತಿಳಿಸಿರುವ ಹಾಗೆ ಬುಮ್ರಾ ಟಿ20 ವಿಶ್ವಕಪ್​ಗೆ ಗೈರಾಗುವ ಎಲ್ಲಾ ಸಾಧ್ಯತೆಗಳಿವೆ.

ಈಗಾಗಲೇ ರವೀಂದ್ರ ಜಡೇಜಾ ಟಿ20 ವಿಶ್ವಕಪ್​ನಿಂದ ಹೊರಗುಳಿದಿದ್ದು, ಈಗ ಬುಮ್ರಾ ಅನುಪಸ್ಥಿತಿಯು ಭಾರತ ತಂಡಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ಬೆನ್ನುನೋವಿನಿಂದ ಬುಮ್ರಾ ಈ ಹಿಂದೆ 2022 ರ ಏಷ್ಯಾಕಪ್‌ನಿಂದ ಹೊರಗುಳಿಯಬೇಕಾಯಿತು. ಆ ಬಳಿಕ ಚೇತರಿಸಿಕೊಂಡಿದ್ದ ಬುಮ್ರಾ, ಆಫ್ರಿಕಾ ಸರಣಿಗೂ ಮುನ್ನ ನಡೆದ ಆಸ್ಟ್ರೇಲಿಯಾ ವಿರುದ್ಧದ T20I ಸರಣಿಯ 2 ನೇ ಮತ್ತು 3 ನೇ ಪಂದ್ಯದಲ್ಲಿ ಆಡಿದ್ದರು. ಆದರೆ ಆ ಸರಣಿಯಲ್ಲಿ ಬುಮ್ರಾ ಅಷ್ಟಾಗಿ ಮಿಂಚಲು ಸಾಧ್ಯವಾಗಿರಲಿಲ್ಲ.

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಬೌಲಿಂಗ್ ವಿಭಾಗದ ಜವಬ್ದಾರಿ ಹೊತ್ತಿದ್ದ ಬುಮ್ರಾ ಜೊತೆಗೆ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಹರ್ಷಲ್ ಪಟೇಲ್​ಗೂ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಟಿ20 ವಿಶ್ವಕಪ್​ನಿಂದ ಬುಮ್ರಾ ಹೊರಗುಳಿದರೆ, ಬಿಸಿಸಿಐ ಅವರ ಸ್ಥಾನಕ್ಕೆ ಮೊಹಮ್ಮದ್ ಶಮಿ ಅಥವಾ ದೀಪಕ್ ಚಹಾರ್‌, ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ. ಈ ಇಬ್ಬರೂ ಆಟಗಾರರು ಈಗಾಗಲೇ ಟೀಂ ಇಂಡಿಯಾದ ಟಿ20 ವಿಶ್ವಕಪ್​ ತಂಡದಲ್ಲಿ ಸ್ಟ್ಯಾಂಡ್‌ಬೈ ಆಟಗಾರರಾಗಿ ಆಯ್ಕೆಯಾಗಿದ್ದಾರೆ.

ಇದಕ್ಕೂ ಮುನ್ನ, ಮೊಣಕಾಲಿನ ಗಾಯದಿಂದ ಆಲ್‌ರೌಂಡರ್ ರವೀಂದ್ರ ಜಡೇಜಾ ಟಿ 20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಆದಾಗ್ಯೂ, ಅವರ ಅನುಪಸ್ಥಿತಿಯಲ್ಲಿ ಅಕ್ಸರ್ ಪಟೇಲ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವುದರೊಂದಿಗೆ ಜಡೇಜಾ ಅನುಪಸ್ಥಿತಿಯನ್ನು ಮರೆಮಾಚುವಲ್ಲಿ ಯಶಸ್ವಿಯಾಗಿದ್ದರು. ಆದರೆ ಟೀಂ ಇಂಡಿಯಾದಲ್ಲಿ ಬುಮ್ರಾ ಸ್ಥಾನವನ್ನು ತುಂಬುವ ಇನ್ನೊಬ್ಬ ಆಟಗಾರನಿಲ್ಲದೆ ಇರುವುದು ರೋಹಿತ್​ ಪಡೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಗುಳಿದರಿಂದ ಬಿಸಿಸಿಐ ಚಿಂತೆಗೀಡಾಗಿದೆ. ಏಕೆಂದರೆ 2022 ರ ಐಪಿಎಲ್ ಬಳಿಕ ಟೀಂ ಇಂಡಿಯಾ ಇದುವರೆಗೆ 24 ಟಿ20 ಪಂದ್ಯಗಳನ್ನಾಡಿದೆ. ಆದರೆ ಇಷ್ಟು ಪಂದ್ಯಗಳಲ್ಲಿ ಬುಮ್ರಾ ಕೇವಲ ಮೂರು T20 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದಾರೆ. ಒಟ್ಟಾರೆಯಾಗಿ, ಅವರು ಐಪಿಎಲ್ ನಂತರ ಟೀಂ ಇಂಡಿಯಾ ಪರ ಆರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದು, ಇದರಲ್ಲಿ ಒಂದು ಟೆಸ್ಟ್ ಮತ್ತು ಎರಡು ಏಕದಿನ ಪಂದ್ಯಗಳು ಸೇರಿವೆ.

ಆಧುನಿಕ ಕ್ರಿಕೆಟ್‌ನಲ್ಲಿ ಪ್ರಮುಖ ವೇಗಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಬುಮ್ರಾ ಇದುವರೆಗೆ ಭಾರತದ ಪರ 60 T20 ಪಂದ್ಯಗಳನ್ನಾಡಿದ್ದು, ಅದರಲ್ಲಿ 70 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹೀಗಾಗಿ ಈ ಸ್ವರೂಪದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್​ಗಳಲ್ಲಿ ಬುಮ್ರಾ ಎರಡನೇ ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada