CPL 2022: 5 ಓವರ್ಗಳಲ್ಲಿ 105 ರನ್: ಬ್ರೂಕ್ಸ್ ಸ್ಪೋಟಕ ಶತಕ
CPL 2022 Finals: ಶನಿವಾರ ನಡೆಯಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ 2022 ರ ಫೈನಲ್ ಪಂದ್ಯದಲ್ಲಿ ಜಮೈಕಾ ತಲ್ಲವಾಸ್ ಹಾಗೂ ಬಾರ್ಬಡೋಸ್ ರಾಯಲ್ಸ್ ಮುಖಾಮುಖಿಯಾಗಲಿದೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ನ (CPL 2022) 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಜಮೈಕಾ ತಲ್ಲವಾಸ್ ತಂಡವು ಫೈನಲ್ ಪ್ರವೇಶಿಸಿದೆ. ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಜಮೈಕಾ ತಲ್ಲವಾಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗಯಾನಾ ತಂಡದ ನಾಯಕ ಶಿಮ್ರಾನ್ ಹೆಟ್ಮೆಯರ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ಸಂಘಟಿಸಿದ ಅಮೆಜಾನ್ ವಾರಿಯರ್ಸ್ ಬೌಲರ್ಗಳು ಕೇವಲ 16 ರನ್ಗಳಿಗೆ 2 ವಿಕೆಟ್ ಉರುಳಿಸಿ ಆರಂಭಿಕ ಆಘಾತ ನೀಡಿದರು. ಈ ಹಂತದಲ್ಲಿ ಕಣಕ್ಕಿಳಿದ ಶಮರ್ ಬ್ರೂಕ್ಸ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೂಕ್ಸ್ ಎದುರಾಳಿ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ಪ್ರೊವಿಡೆನ್ಸ್ ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್ಗಳ ಸುರಿಮಳೆಯಾಯಿತು. ಬ್ರೂಕ್ಸ್ ಅಬ್ಬರವನ್ನು ತಡೆಯಲು ಸಾಧ್ಯವಾಗದ ಗಯಾನಾ ಅಮೆಜಾನ್ ವಾರಿಯರ್ಸ್ ಬೌಲರ್ಗಳು ಲಯ ತಪ್ಪಿದರು.
ಇದರ ಸಂಪೂರ್ಣ ಲಾಭ ಪಡೆದ ಬ್ರೂಕ್ಸ್ ಹಾಗೂ ಇಮಾದ್ ವಾಸಿಂ ಅಂತಿಮ ಓವರ್ಗಳ ವೇಳೆ ಅಕ್ಷರಶಃ ಅಬ್ಬರಿಸಿದರು. 15.1 ಓವರ್ ವೇಳೆ 123 ರನ್ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಜಮೈಕಾ ತಲ್ಲವಾಸ್ ಪಂದ್ಯ ಮುಗಿಸಿದಾಗ ತಂಡದ ಮೊತ್ತ 226 ಕ್ಕೆ ಬಂದು ನಿಂತಿತು. ಅಂದರೆ ಕೊನೆಯ 5 ಓವರ್ಗಳಲ್ಲಿ ಬರೋಬ್ಬರಿ 105 ರನ್ಗಳನ್ನು ಚಚ್ಚಿದರು.
ಕೇವಲ 52 ಎಸೆತಗಳನ್ನು ಎದುರಿಸಿದ ಬ್ರೂಕ್ಸ್ 8 ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಅಜೇಯ 109 ರನ್ ಬಾರಿಸಿದರೆ, ಇಮಾದ್ ವಾಸಿಂ ಕೇವಲ 15 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 41 ರನ್ ಸಿಡಿಸಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಜಮೈಕಾ ತಲ್ಲವಾಸ್ ತಂಡವು 4 ವಿಕೆಟ್ ನಷ್ಟಕ್ಕೆ 226 ರನ್ ಕಲೆಹಾಕಿತು.
Shamarh Brooks that is sensational!! Brooks hit an unbeaten 109 of 52 balls tonight, achieving the highest score in CPL22 and receiving the @Dream11 MVP award!#CPL22 #GAWvJT #CricketPlayedLouder #Dream11 #BiggestPartyInSport pic.twitter.com/LDgMtYaDKE
— CPL T20 (@CPL) September 29, 2022
227 ರನ್ಗಳ ಬೃಹತ್ ಟಾರ್ಗೆಟ್ ಪಡೆದ ಗಯಾನಾ ಅಮೆಜಾನ್ ವಾರಿಯರ್ಸ್ ಕೀಮೊ ಪೌಲ್ (56) ಅರ್ಧಶತಕ ಬಾರಿಸಿದರೆ, ಶಾಯ್ ಹೋಪ್ 13 ಎಸೆತಗಳಲ್ಲಿ 31 ರನ್ ಕಲೆಹಾಕಿದರು. ಇದಾಗ್ಯೂ ಉಳಿದ ಬ್ಯಾಟ್ಸ್ಮನ್ಗಳಿಂದ ಬೃಹತ್ ಮೊತ್ತದ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 189 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತು. ಇದರೊಂದಿಗೆ ಜಮೈಕಾ ತಲ್ಲವಾಸ್ ತಂಡವು 37 ರನ್ಗಳಿಂದ ಭರ್ಜರಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.
ಶನಿವಾರ ನಡೆಯಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ 2022 ರ ಫೈನಲ್ ಪಂದ್ಯದಲ್ಲಿ ಜಮೈಕಾ ತಲ್ಲವಾಸ್ ಹಾಗೂ ಬಾರ್ಬಡೋಸ್ ರಾಯಲ್ಸ್ ಮುಖಾಮುಖಿಯಾಗಲಿದೆ.