Jay Shah: ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ ಸಾಧ್ಯತೆ
ICC chairman 2024: ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷ ಸ್ಥಾನದಲ್ಲಿ ಈವರೆಗೆ ನಾಲ್ವರು ಭಾರತೀಯರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್. ಈ ಬಾರಿಯ ಚುನಾವಣೆಯಲ್ಲಿ ಜಯ್ ಶಾ ಸ್ಪರ್ಧಿಸಿ ಗೆದ್ದರೆ ಈ ಸ್ಥಾನಕ್ಕೇರಿದ ಐದನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಮುಂಬರುವ ಐಸಿಸಿ ಚುನಾವಣೆಯಲ್ಲಿ ಜಯ್ ಶಾ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಆದರೆ ಶಾ ಅವರಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯಲು ಯಾರು ಕೂಡ ಆಸಕ್ತಿ ಹೊಂದಿಲ್ಲ. ಹೀಗಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಸಿಸಿ ಚುಕ್ಕಾಣಿ ಹಿಡಿಯುವುದು ಖಚಿತ ಎನ್ನಲಾಗುತ್ತಿದೆ.
ಪ್ರಸ್ತುತ ಐಸಿಸಿ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ ಅವರ ಕಾರ್ಯಾವಧಿ ನವೆಂಬರ್ 30 ಕ್ಕೆ ಮುಗಿಯಲಿದೆ. ಅದಕ್ಕೂ ಮುನ್ನ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಬೇಕಿದ್ದು, ಇದಕ್ಕಾಗಿ ಆಗಸ್ಟ್ 27 ರೊಳಗೆ ನಾಮಪತ್ರ ಸಲ್ಲಿಸಬೇಕು. ಇತ್ತ ಜಯ್ ಶಾ ಹೆಸರು ಐಸಿಸಿ ಹುದ್ದೆಗೆ ಕೇಳಿಬಂದರೂ, ಪ್ರತಿಸ್ಪರ್ಧಿಯಾಗಿ ಯಾರೂ ಸಹ ಈವರೆಗೆ ನಾಮಪತ್ರ ಸಲ್ಲಿಸಿಲ್ಲ ಎಂಬುದು ವಿಶೇಷ.
ಹೀಗಾಗಿ ಜಯ್ ಶಾ ನಾಮಪತ್ರ ಸಲ್ಲಿಸಿದರೆ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಇದಕ್ಕೂ ಮುನ್ನ ಗ್ರೆಗ್ ಬಾರ್ಕ್ಲೇ ಅವರನ್ನು 2020 ರಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಇದಾದ ಬಳಿಕ 2022ರಲ್ಲಿ ಅವರು ಮರು ಚುನಾಯಿತರಾಗಿದ್ದರು. ಇದೀಗ ಅವರ ಕಾರ್ಯಾವಧಿ ಮುಗಿಯುತ್ತಿದ್ದು, ಹೀಗಾಗಿ ಈ ಬಾರಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ.
ಚುನಾವಣೆ ನಡೆದರೆ ಎಷ್ಟು ಮತ ಪಡೆಯಬೇಕು?
ಐಸಿಸಿ ಅಧ್ಯಕ್ಷರ ಆಯ್ಕೆಯು ಸಾಮಾನ್ಯವಾಗಿ 16 ಮತಗಳನ್ನು ಹೊಂದಿರುತ್ತದೆ. ವಿಜೇತರನ್ನು ನಿರ್ಧರಿಸಲು, ಒಂಬತ್ತು ಮತಗಳ ಬಹುಮತದ ಅಗತ್ಯವಿದೆ (51%). ಈ ಹಿಂದೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡವರಿಗೆ ಮೂರನೇ ಎರಡರಷ್ಟು ಬಹುಮತವಿತ್ತು. ಇದೀಗ ಇತರೆ ಕ್ರಿಕೆಟ್ ಮಂಡಳಿಗಳ ಬೆಂಬಲದೊಂದಿಗೆ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ಪ್ರಧಾನ ಹುದ್ದೆಗೇರುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: IPL 2025: ಧೋನಿ RCB ತಂಡದ ನಾಯಕರಾಗಿದ್ದರೆ 3 ಟ್ರೋಫಿ ಗೆದ್ದಿರುತ್ತಿತ್ತು..!
ಒಂದು ವೇಳೆ 35 ವರ್ಷದ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಿದರೆ, ಐಸಿಸಿ ಮುಖ್ಯಸ್ಥರಾದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ ಈ ಹುದ್ದೆಯನ್ನು ಅಲಂಕರಿಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ಐಸಿಸಿ ಅಧ್ಯಕ್ಷರಾದ ಭಾರತೀಯರು ಯಾರೆಲ್ಲಾ?
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಈವರೆಗೆ ನಾಲ್ವರು ಭಾರತೀಯರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್. ಈ ಬಾರಿಯ ಚುನಾವಣೆಯಲ್ಲಿ ಜಯ್ ಶಾ ಸ್ಪರ್ಧಿಸಿ ಗೆದ್ದರೆ ಈ ಸ್ಥಾನಕ್ಕೇರಿದ ಐದನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ.