ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟ ಜಯ್ ಶಾ
ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷ ಹುದ್ದೆಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಏಕೆಂದರೆ ಹಾಲಿ ಅಧ್ಯಕ್ಷರ ಕಾರ್ಯಾವಧಿಯು ನವೆಂಬರ್ 30 ಕ್ಕೆ ಮುಗಿಯಲಿದೆ. ಇನ್ನು ಡಿಸೆಂಬರ್ 1 ರಿಂದ ನೂತನ ಅಧ್ಯಕ್ಷರು ಕಾರ್ಯಾರಂಭ ಮಾಡಲಿದ್ದಾರೆ. ಇದಕ್ಕೂ ಮುನ್ನ ಐಸಿಸಿ ಮುಖ್ಯಸ್ಥರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮುಂಬರುವ ಚುನಾವಣೆಯಲ್ಲಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಯಿದೆ. ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಕಾರ್ಯಾವಧಿ ನವೆಂಬರ್ 30 ಕ್ಕೆ ಮುಗಿಯಲಿದೆ. ಅಲ್ಲದೆ ಅಧಿಕಾರರಲ್ಲಿ ಮುಂದುವರೆಯಲು ಇಚ್ಛಿಸುತ್ತಿಲ್ಲ ಎಂದು ಬಾರ್ಕ್ಲೇ ಅವರು ಐಸಿಸಿ ಸಭೆಯಲ್ಲಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಐಸಿಸಿ ಅಧ್ಯಕ್ಷರಾಗಲು ಜಯ್ ಶಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎಂದು ವರದಿಯಾಗಿದೆ.
ಗ್ರೆಗ್ ಬಾರ್ಕ್ಲೇ ಅವರನ್ನು ನವೆಂಬರ್ 2020 ರಲ್ಲಿ ಅವಿರೋಧವಾಗಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 2022ರಲ್ಲಿ ಅವರು ಮರು ಚುನಾಯಿತರಾಗಿದ್ದರು. ಇದೀಗ ಮೂರನೇ ಬಾರಿಗೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮಂಡಳಿಗೆ ದೃಢಪಡಿಸಿದ್ದಾರೆ. ಅದರಂತೆ ಈ ಬಾರಿಯ ಐಸಿಸಿ ಚುನಾವಣೆಯ ಮೂಲಕ ಹೊಸ ಅಧ್ಯಕ್ಷರ ನೇಮಕವಾಗಲಿದೆ. ಇನ್ನು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 27. ಇದರೊಳಗೆ ಜಯ್ ಶಾ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.
ಅಧ್ಯಕ್ಷರ ಆಯ್ಕೆಯು ಸಾಮಾನ್ಯವಾಗಿ 16 ಮತಗಳನ್ನು ಹೊಂದಿರುತ್ತದೆ. ವಿಜೇತರನ್ನು ನಿರ್ಧರಿಸಲು, ಒಂಬತ್ತು ಮತಗಳ ಬಹುಮತದ ಅಗತ್ಯವಿದೆ (51%). ಈ ಹಿಂದೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡವರಿಗೆ ಮೂರನೇ ಎರಡರಷ್ಟು ಬಹುಮತವಿತ್ತು. ಇದೀಗ ಇತರೆ ಕ್ರಿಕೆಟ್ ಮಂಡಳಿಗಳ ಬೆಂಬಲದೊಂದಿಗೆ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ಪ್ರಧಾನ ಹುದ್ದೆಗೇರಲಿದ್ದಾರಾ ಕಾದು ನೋಡಬೇಕಿದೆ.
ಒಂದು ವೇಳೆ ಜಯ್ ಶಾ ಅಧ್ಯಕ್ಷ ಸ್ಥಾನಕ್ಕೇರಿದರೆ, ಐಸಿಸಿಯ ಮುಖ್ಯಸ್ಥರಾದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ. 35 ವರ್ಷದ ಜಯ್ ಶಾ ಸದ್ಯ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ವಿಶ್ವ ಕ್ರಿಕೆಟ್ನ ಪ್ರಮುಖ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: IPL 2025: ಧೋನಿ RCB ತಂಡದ ನಾಯಕರಾಗಿದ್ದರೆ 3 ಟ್ರೋಫಿ ಗೆದ್ದಿರುತ್ತಿತ್ತು: ವಾಸಿಂ ಅಕ್ರಮ್
ಅಂದಹಾಗೆ ಭಾರತದಿಂದ ಈವರೆಗೆ ಕೇವಲ ನಾಲ್ವರು ಮಾತ್ರ ಐಸಿಸಿಯ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ. ಅವರೆಂದರೆ, ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್. ಈ ಬಾರಿಯ ಚುನಾವಣೆಯಲ್ಲಿ ಜಯ್ ಶಾ ಸ್ಪರ್ಧಿಸಿ ಗೆದ್ದರೆ ಈ ಸ್ಥಾನಕ್ಕೇರಿದ ಐದನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ.