Jos Buttler: ಬಟ್ಲರ್ ಸ್ಫೋಟಕ ಆಟಕ್ಕೆ ನಲುಗಿದ ಆಸ್ಟ್ರೇಲಿಯಾ: ಇಂಗ್ಲೆಂಡ್ ಸೆಮಿ ಫೈನಲ್ ಹಾದಿ ಖಚಿತ
England vs Australia, T20 World Cup: 126 ರನ್‌ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರರಾಗಿ ಜೇಸನ್ ರಾಯ್ ಮತ್ತು ಜೋಸ್ ಬಟ್ಲರ್ ಕಣಕ್ಕಿಳಿದರು. ಈ ಜೋಡಿ ಆರಂಭದಿಂದಲೇ ಅಬ್ಬರಿಸಿತು. ಕೇವಲ 6.2 ಓವರ್‌ಗಳಿಗೆ ಈ ಜೋಡಿ ಮೊದಲನೇ ವಿಕೆಟ್‌ಗೆ 66 ರನ್ ಕಲೆ ಹಾಕಿತು.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ನ (T20 World Cup) 26ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾವನ್ನು (England vs Australia) ಸೋಲಿಸಿ ಪರಾಕ್ರಮ ಮೆರೆದಿದೆ. ಇಂಗ್ಲೆಂಡ್ ಬೌಲರ್‌ಗಳ ಸಂಘಟಿತ ಪ್ರದರ್ಶನ ಮತ್ತು ಜಾಸ್ ಬಟ್ಲರ್ (Jos Buttler) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಂಗ್ಲರು 8 ವಿಕೆಟ್ಗಳ ಅಮೋಘ ಗೆಲುವು ಕಂಡಿದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಸೆಮಿ ಫೈನಲ್ ಹಾದಿಯನ್ನು ಖಚಿತ ಪಡಿಸಿಕೊಂಡಿದೆ. ಆಸ್ಟ್ರೇಲಿಯಾ ನೀಡಿದ್ದ 126 ರನ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ (England Cricket Team) ತಂಡಕ್ಕೆ ಎಳ್ಳಷ್ಟು ಕಠಿಣವಾಗಲೇ ಇಲ್ಲ. 11.4 ಓವರ್‌ಗಳಿಗೆ ಕೇವಲ ಎರಡು ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್ ಸುಲಭವಾಗಿ ಗೆಲುವಿನ ದಡ ಸೇರಿತು.
ಟಾಸ್ ಜಯಿಸಿದ ಟಾಸ್ ಜಯಿಸಿದ ಆಂಗ್ಲರ ನಾಯಕ ಇಯಾನ್ ಮಾರ್ಗನ್ ಆಸೀಸ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ, 20 ಓವರ್‌ಗಳಲ್ಲಿ 125 ರನ್‌ಗಳಿಗೆ ಸರ್ವಪತನ ಕಂಡಿತು. ಪಂದ್ಯ ಆರಂಭದಿಂದಲೂ ಒಂದು ತುದಿಯಲ್ಲಿ ವಿಕೆಟ್‌ಗಳು ಉರುಳುತ್ತಿದ್ದರೆ ಅತ್ತ ನಾಯಕ ಆರೋನ್ ಫಿಂಚ್ 49 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 44 ರನ್ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿ ಮಾನ ಕಾಪಾಡಿದರು. ಆದರೆ, ಡೇವಿಡ್ ವಾರ್ನರ್ (1), ಸ್ಟೀವನ್ ಸ್ಮಿತ್(1), ಗ್ಲೆನ್ ಮ್ಯಾಕ್ಸ್‌ವೆಲ್(6), ಮಾರ್ಕಸ್ ಸ್ಟೋಯ್ನಿಸ್(0) ವೈಫಲ್ಯ ಅನುಭವಿಸಿದರು.
ಆರೋನ್ ಫಿಂಚ್ ಜೊತೆಗೆ ಕಳೆ ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ವೇಡ್ (18), ಅಸ್ಟನ್ ಅಗರ್(20), ಪ್ಯಾಟ್ ಕಮಿನ್ಸ್(12), ಮಿಚೆಲ್ ಸ್ಟಾರ್ಕ್(13) ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು. ಇಂಗ್ಲೆಂಡ್ ಪರ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಕ್ರಿಸ್ ಜೋರ್ಡನ್ 4 ಓವರ್‌ಗಳಿಗೆ ಕೇವಲ 17 ರನ್ ನೀಡಿ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಬಾಜಿಕೊಂಡರು.
126 ರನ್‌ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರರಾಗಿ ಜೇಸನ್ ರಾಯ್ ಮತ್ತು ಜೋಸ್ ಬಟ್ಲರ್ ಕಣಕ್ಕಿಳಿದರು. ಈ ಜೋಡಿ ಆರಂಭದಿಂದಲೇ ಅಬ್ಬರಿಸಿತು. ಕೇವಲ 6.2 ಓವರ್‌ಗಳಿಗೆ ಈ ಜೋಡಿ ಮೊದಲನೇ ವಿಕೆಟ್‌ಗೆ 66 ರನ್ ಕಲೆ ಹಾಕಿತು. ಜೇಸನ್ ರಾಯ್ 22 ರನ್‌ಗಳಿಗೆ ಔಟ್ ಆದರೆ, ಜೋಸ್ ಬಟ್ಲರ್ 32 ಎಸೆತಗಳಲ್ಲಿ ಅಜೇಯ 71 ರನ್ ಗಳಿಸುವುದರ ಮೂಲಕ ಅಬ್ಬರಿಸಿದರು. ಜೋಸ್ ಬಟ್ಲರ್ 5 ಬೌಂಡರಿ ಮತ್ತು 5 ಸಿಕ್ಸರ್ ಚಚ್ಚಿದರು. ಇನ್ನುಳಿದಂತೆ ಡೇವಿಡ್ ಮಲನ್ 8 ಮತ್ತು ಜಾನಿ ಬೇರ್‌ಸ್ಟೋ ಅಜೇಯ 16 ರನ್ ಗಳಿಸಿದರು.
ಇಂಗ್ಲೆಂಡ್ ಕೇವಲ 11.4 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 126 ಬಾರಿಸಿ ಭರ್ಜರಿ ಗೆಲುವು ಸಾಧಿಸಿತು. ಆಸೀಸ್ಸ ಸ್ಟಾರ್ ಬೌಲರ್ಗಳು ಸಾಕಷ್ಟು ದುಬಾರಿಯಾದರು. ಮಿಚೆಲ್ ಸ್ಟಾರ್ಕ್ 3 ಓವರ್ಗೆ 37 ರನ್ ನೀಡಿದರೆ ಕಳೆದ ಪಂದ್ಯದಲ್ಲಿ ಮಿಂಚಿದ್ದ ಆ್ಯಡಂ ಜಂಪಾ ಕೂಡ 3 ಓವರ್ಗೆ 37 ರನ್ ಹರಿಬಿಟ್ಟರು.
T20 World Cup 2021: ಈ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿಯಲು ಸಲಹೆ ನೀಡಿದ ಗವಾಸ್ಕರ್
(Jos Buttler hammered a brutal 32-ball 71 not out to England crushed Australia by 8 wickets in T20 World Cup)