
ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ವಿಧ್ವಂಸಕ ಆರಂಭಿಕ ಬ್ಯಾಟರ್ಗಳಲ್ಲಿ ಒಬ್ಬರಾದ ವೀರೇಂದ್ರ ಸೆಹ್ವಾಗ್ ಅವರ ಬ್ಯಾಟಿಂಗ್ ಶೈಲಿಯನ್ನು ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈಗ ಅವರದೇ ಹಾದಿಯಲ್ಲಿ ಸಾಗಿರುವ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ದೇಶೀಯ ಕ್ರಿಕೆಟ್ ಅಂಗಳದಲ್ಲಿ ಅಬ್ಬರದ ಶತಕ ಸಿಡಿಸುವ ಮೂಲಕ ತಂದೆಯ ನೆನಪನ್ನು ಮರುಕಳಿಸಿದ್ದಾರೆ.
ಆಂಧ್ರ ಪ್ರದೇಶದ ಡಾ. ಪಿ.ವಿ.ಜಿ. ರಾಜು ಎಸಿಎ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸ್ಟೇಡಿಯಂನಲ್ಲಿ ನಡೆದ ವಿನೂ ಮಂಕಡ್ ಅಂಡರ್-19 ಟೂರ್ನಿಯ 4ನೇ ಪಂದ್ಯದಲ್ಲಿ ದೆಹಲಿ ಹಾಗೂ ಚಂಡೀಗಢ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದೆಹಲಿ ಅಂಡರ್-19 ತಂಡದ ನಾಯಕರಾಗಿ ಕಣಕ್ಕಿಳಿದ ಆರ್ಯವೀರ್ ಸ್ಫೋಟಕ ಸೆಂಚುರಿ ಸಿಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡಕ್ಕೆ ಆರ್ಯವೀರ್ ಸ್ಫೋಟಕ ಆರಂಭ ಒದಗಿಸಿದ್ದರು. ಆರಂಭದಿಂದಲೇ ಚಂಡೀಗಢ್ ಬೌಲರ್ಗಳ ಮೇಲೆ ಸವಾರಿ ಮಾಡಿದ ಜೂನಿಯರ್ ಸೆಹ್ವಾಗ್ ಕೇವಲ 143 ಎಸೆತಗಳಲ್ಲಿ 173 ರನ್ಗಳ ಭರ್ಜರಿ ಇನಿಂಗ್ಸ್ ಆಡಿದರು.
ಈ ಆಕರ್ಷಕ ಇನಿಂಗ್ಸ್ನಲ್ಲಿ ಆರ್ಯವೀರ್ ಬ್ಯಾಟ್ನಿಂದ 19 ಫೋರ್ ಹಾಗೂ 8 ಸಿಕ್ಸರ್ಗಳು ಮೂಡಿಬಂದಿದ್ದವು. ತಂದೆ ವೀರೇಂದ್ರ ಸೆಹ್ವಾಗ್ ಅವರಂತೆಯೇ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಆರ್ಯವೀರ್ ನೆರವಿನಿಂದ ದೆಹಲಿ ತಂಡ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 289 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು.
ಆರ್ಯವೀರ್ ಸೆಹ್ವಾಗ್ ಅವರ ಈ ಅಮೋಘ ಶತಕದ ನಡುವೆಯೂ ದೆಹಲಿ ತಂಡಕ್ಕೆ ಜಯ ಒಲಿಯಲಿಲ್ಲ. ದೆಹಲಿ ನೀಡಿದ 290 ರನ್ಗಳ ಗುರಿಯನ್ನು ಬೆನ್ನಟ್ಟಿದ ಚಂಡೀಗಢ್ ಅಂಡರ್-19 ತಂಡವು ಇನ್ನೂ 8 ಓವರ್ಗಳು ಬಾಕಿ ಇರುವಂತೆಯೇ (41.5 ಓವರ್ಗಳಲ್ಲಿ) 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಚಂಡೀಗಢ್ ತಂಡದ ಪರ ರುಪೇಶ್ ಯಾದವ್ ಕೇವಲ 125 ಎಸೆತಗಳಲ್ಲಿ 167 ರನ್ ಸಿಡಿಸುವ ಮೂಲಕ ದೆಹಲಿ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿದರು.
ಇದನ್ನೂ ಓದಿ: ನ್ಯೂಝಿಲೆಂಡ್ ಸರಣಿಗೆ ಭಾರತದ 4 ತಂಡಗಳು ಪ್ರಕಟ
ದೆಹಲಿ ತಂಡ ಪಂದ್ಯವನ್ನು ಸೋತಿದ್ದರೂ, ಆರ್ಯವೀರ್ ಸೆಹ್ವಾಗ್ ಆಡಿದ ಜವಾಬ್ದಾರಿಯುತ ಹಾಗೂ ಸ್ಫೋಟಕ ಇನಿಂಗ್ಸ್ ಕ್ರಿಕೆಟ್ ವಲಯದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ತಂದೆಯ ತಾಂತ್ರಿಕತೆ ಮತ್ತು ಆಕ್ರಮಣಕಾರಿ ಶೈಲಿಯನ್ನು ಮೈಗೂಡಿಸಿಕೊಂಡಿರುವ ಆರ್ಯವೀರ್, ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಮಟ್ಟದ ತಾರೆಯಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳನ್ನು ತೋರ್ಪಡಿಸುತ್ತಿದ್ದಾರೆ.