Arjun tendulkar: ಒಂದೇ ಪಂದ್ಯದಲ್ಲಿ ಬರೋಬ್ಬರಿ 9 ವಿಕೆಟ್ ಉರುಳಿಸಿದ ಅರ್ಜುನ್ ತೆಂಡೂಲ್ಕರ್..! ವಿಡಿಯೋ

Arjun tendulkar: ಕರ್ನಾಟಕದಲ್ಲಿ ನಡೆಯುತ್ತಿರುವ ಡಾಕ್ಟರ್ ಕೆ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಮೆಂಟ್‌ನಲ್ಲಿ ಗೋವಾ ಪರ ಆಡುತ್ತಿರುವ ಅರ್ಜುನ್, ಕೆಎಸ್‌ಸಿಎ ಇಲೆವೆನ್‌ ತಂಡದ ವಿರುದ್ಧ 9 ವಿಕೆಟ್ ಉರುಳಿಸುವ ಮೂಲಕ ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡಿದ್ದಾರೆ.

Arjun tendulkar: ಒಂದೇ ಪಂದ್ಯದಲ್ಲಿ ಬರೋಬ್ಬರಿ 9 ವಿಕೆಟ್ ಉರುಳಿಸಿದ ಅರ್ಜುನ್ ತೆಂಡೂಲ್ಕರ್..! ವಿಡಿಯೋ
ಅರ್ಜುನ್ ತೆಂಡೂಲ್ಕರ್

Updated on: Sep 16, 2024 | 7:30 PM

ಅಪ್ಪನಂತೆ ಕ್ರಿಕೆಟ್​ ಲೋಕದಲ್ಲಿ ಹೆಸರು ಮಾಡಬೇಕೆಂದು ಹಗಲಿರುಳು ಶ್ರಮಿಸುತ್ತಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಇದುವರೆಗೆ ಆ ನಿಟ್ಟಿನಲ್ಲಿ ಹೆಚ್ಚು ಯಶಸ್ವಿಯಾಗಿಲ್ಲ. ಆದಾಗ್ಯೂ ಛಲ ಬಿಡದ ಅರ್ಜುನ್ ದೇಶೀ ಟೂರ್ನಿಗಳಲ್ಲಿ ತಮ್ಮ ಕೈಚಳಕದ ಮೂಲಕ ಬಿಸಿಸಿಐ ಗಮನವನ್ನು ತನ್ನತ್ತ ತಿರುಗುವಂತೆ ಮಾಡುತ್ತಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ಡಾಕ್ಟರ್ ಕೆ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಮೆಂಟ್‌ನಲ್ಲಿ ಗೋವಾ ಪರ ಆಡುತ್ತಿರುವ ಅರ್ಜುನ್, ಕೆಎಸ್‌ಸಿಎ ಇಲೆವೆನ್‌ ತಂಡದ ವಿರುದ್ಧ 9 ವಿಕೆಟ್ ಉರುಳಿಸುವ ಮೂಲಕ ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡಿದ್ದಾರೆ.

ಈ ರೆಡ್ ಬಾಲ್ ಟೂರ್ನಿಯಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ಅರ್ಜುನ್, ಗೋವಾ ತಂಡ ಇನ್ನಿಂಗ್ಸ್ ಮತ್ತು 189 ರನ್​ಗಳಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಅರ್ಜುನ್ ತೆಂಡೂಲ್ಕರ್ ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಬಳಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದ ಅರ್ಜುನ್ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

ಅರ್ಜುನ್ ದಾಳಿಗೆ ನಲುಗಿದ ಎದುರಾಳಿ

ಅರ್ಜುನ್ ತೆಂಡೂಲ್ಕರ್ ದಾಳಿಯ ಮುಂದೆ ಕೆಎಸ್‌ಸಿಎ ಇಲೆವೆನ್‌ ತಂಡದ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಬೇಕಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 41 ರನ್‌ಗಳಿಗೆ 5 ವಿಕೆಟ್ ಪಡೆದ ಅರ್ಜುನ್, ಎದುರಾಳಿ ತಂಡದ ಮೊದಲ ಐದು ಬ್ಯಾಟ್ಸ್‌ಮನ್‌ಗಳಲ್ಲಿ ನಾಲ್ವರನ್ನು ಏಕಾಂಗಿಯಾಗಿ ಔಟ್ ಮಾಡಿದರು. ಆ ನಂತರ ಆಕ್ಷನ್ ರಾವ್ ಅವರ ವಿಕೆಟ್ ಪಡೆಯುವ ಮೂಲಕ ಐದು ವಿಕೆಟ್ ಪೂರ್ಣಗೊಳಿಸಿದರು. ಅರ್ಜುನ್ ದಾಳಿಗೆ ನಲುಗಿದ ಕೆಎಸ್‌ಸಿಎ ಇಲೆವೆನ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 103 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಇದಕ್ಕುತ್ತರವಾಗಿ ಗೋವಾ ಕ್ರಿಕೆಟ್ ಸಂಸ್ಥೆ ಮೊದಲ ಇನಿಂಗ್ಸ್​ನಲ್ಲಿ 413 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ಅಭಿನವ್ ತೇಜರಾನ 109 ರನ್‌ಗಳ ಇನಿಂಗ್ಸ್‌ ಆಡಿದರೆ, ಮಂಥನ್ ಖುತ್ಕರ್ 69 ರನ್ ಗಳಿಸಿ 18 ರನ್ ಗಳಿಸಿದರು.

ಎರಡನೇ ಇನಿಂಗ್ಸ್​ನಲ್ಲೂ ಅರ್ಜುನ್ ಮ್ಯಾಜಿಕ್

ಇದಾದ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಬೌಲಿಂಗ್ ಮ್ಯಾಜಿಕ್ ಮುಂದುವರೆಸಿದ ಅರ್ಜುನ್ ತೆಂಡೂಲ್ಕರ್, ಕೆಎಸ್‌ಸಿಎ ಇಲೆವೆನ್ ತಂಡವನ್ನು ಕೇವಲ 121 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಜುನ್ 55 ರನ್‌ಗಳಿಗೆ 4 ವಿಕೆಟ್ ಪಡೆದರು. ಈ ಮೂಲಕ ಅರ್ಜುನ್ ತಮ್ಮ ಹೆಸರಿನಲ್ಲಿ ಒಟ್ಟು 9 ವಿಕೆಟ್ ಪಡೆದರು. ಅರ್ಜುನ್ ಅವರ ಈ ವಿಕೆಟ್​ಗಳ ಭೇಟಿಯ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ