
2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಕೊನೆಗೂ ತನ್ನ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿತ್ತು. ಇದೀಗ ಪಿಸ್ತೂಲ್ ಶೂಟಿಂಗ್‌ನಲ್ಲಿ ಎರಡನೇ ಚಿನ್ನದ ಪದಕ ಧಕ್ಕಿದೆ. ಕಮಲ್‌ಜೀತ್ ಮತ್ತು ಸುರುಚಿ ಇಂದರ್ ಸಿಂಗ್ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಏಷ್ಯನ್ ಕ್ರೀಡಾಕೂಟದಲ್ಲಿ ಪಿಸ್ತೂಲ್ ಶೂಟಿಂಗ್‌ನಲ್ಲಿ ಇದು ಭಾರತದ ಮೊದಲ ಪದಕವಾಗಿದೆ.
ಐಚಿ-ನಗೋಯಾ ಕ್ರೀಡಾಕೂಟದ ಆರನೇ ದಿನ ಎರಡು ಪದಕಗಳು ಖಚಿತವಾಗುವುದರೊಂದಿಗೆ ಪ್ರಾರಂಭವಾಯಿತು. ಮೊದಲು, ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ಜೋಡಿ ಸೆಮಿಫೈನಲ್‌ಗೆ ಮುನ್ನಡೆದು ಪದಕವನ್ನು ಖಚಿತಪಡಿಸಿಕೊಂಡರೆ ನಂತರ, ಸ್ಕ್ವಾಷ್ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೇರುವ ಮೂಲಕ ಭಾರತದ ಜೋಡಿ ಪದಕವನ್ನು ಖಚಿತಪಡಿಸಿಕೊಂಡಿದೆ.
23 ವರ್ಷದ ಕಮಲ್‌ಜೀತ್ ಮತ್ತು 20 ವರ್ಷದ ಸುರುಚಿ ವೈಯಕ್ತಿಕ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದರಾದೂ ತಮ್ಮ ತಮ್ಮ ಸ್ಪರ್ಧೆಗಳಲ್ಲಿ ಫೈನಲ್ ತಲುಪಲು ವಿಫಲರಾದರು. ಆದಾಗ್ಯೂ ತಂಡವಾಗಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಅರ್ಹತಾ ಸುತ್ತಿನಲ್ಲಿ 587 ಅಂಕಗಳನ್ನು ಕಲೆಹಾಕಿ ಫೈನಲ್ ತಲುಪಿದ್ದ ಈ ಜೋಡಿ, ಅಲ್ಲಿಯೂ ತಮ್ಮ ಫಾರ್ಮ್ ಅನ್ನು ಮುಂದುವರೆಸಿ, ಮೊದಲ ಸುತ್ತಿನ ನಂತರ ಮೊದಲ ಸ್ಥಾನದಲ್ಲಿದ್ದರು. ಇತ್ತ ದಕ್ಷಿಣ ಕೊರಿಯಾ ಕೂಡ ತೀವ್ರ ಪೈಪೋಟಿ ನೀಡಿತು. ಇದರ ಹೊರತಾಗಿಯೂ, ಈ ಜೋಡಿ ಧೃತಿಗೆಡದೆ 484.6 ಅಂಕಗಳೊಂದಿಗೆ ಚಿನ್ನದ ಪದಕವನ್ನು ಗೆದ್ದರು, ಇದು ಈ ಸ್ಪರ್ಧೆಯ ಹೊಸ ಏಷ್ಯನ್ ದಾಖಲೆಯಾಗಿದೆ. ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ಬೆಳ್ಳಿ ಪದಕ ಗೆದ್ದರೆ, ಇರಾನಿನ ಜೋಡಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.
ಏಷ್ಯನ್ ಗೇಮ್ಸ್ ಕ್ರಿಕೆಟ್‌ನಲ್ಲಿ ಭಾರತ-ಪಾಕಿಸ್ತಾನ್ ಪಂದ್ಯ ಯಾವಾಗ ನಡೆಯಲಿದೆ?
ಏತನ್ಮಧ್ಯೆ, ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್, ನೀರಜ್ ಕುಮಾರ್ ಮತ್ತು ರುದ್ರಾಕ್ಷ ಪಾಟೀಲ್ ರೈಫಲ್ 3 ಪೊಸಿಷನ್‌ನಲ್ಲಿ 1762 ಅಂಕಗಳನ್ನು ಗಳಿಸಿದರಾದರೂ ಚೀನಾವನ್ನು ಮೀರಿಸುವಲ್ಲಿ ವಿಫಲರಾದರು. ಇದರ ಹೊರತಾಗಿಯೂ, ಅವರು ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು, ಇದರಿಂದಾಗಿ ಭಾರತಕ್ಕೆ ರೈಫಲ್ ಶೂಟಿಂಗ್‌ನಲ್ಲಿ ಮತ್ತೊಂದು ಪದಕ ದೊರೆಯಿತು.
ಇದರ ಜೊತೆಗೆ ಐಶ್ವರ್ಯಾ ಮತ್ತು ನೀರಜ್ ವೈಯಕ್ತಿಕ ಸ್ಪರ್ಧೆಯ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಐಶ್ವರ್ಯಾ 589 ಅಂಕಗಳನ್ನು ಕಲೆಹಾಕಿದರೆ, ನೀರಜ್ 588 ಅಂಕಗಳನ್ನು ಸಂಪಾಧಿಸಿದ್ದಾರೆ. ಭಾರತವು ಈಗಾಗಲೇ ರೈಫಲ್ ಶೂಟಿಂಗ್‌ನಲ್ಲಿ ಹಲವಾರು ಪದಕಗಳನ್ನು ಗೆದ್ದಿದೆಯಾದರೂ ಚಿನ್ನದ ಪದಕದ ಬರ ಈಗಲೂ ಮುಂದುವರೆದಿದೆ. ಆದ್ದರಿಂದ, ಈಗ ರೈಫಲ್ ತ್ರೀ-ಪೋಸಿಷನ್ ಫೈನಲ್‌ನಲ್ಲಿ ಐಶ್ವರ್ಯಾ ಮತ್ತು ನೀರಜ್ ಮೇಲೆ ಭರವಸೆ ಇಡಲಾಗಿದೆ.
Published On - 2:56 pm, Fri, 25 September 26