IND vs PAK: ನಾಲಿಗೆ ಹರಿಬಿಟ್ಟ ಪಾಕ್ ಕ್ರಿಕೆಟಿಗನಿಗೆ ಜಾಡಿಸಿದ ಹರ್ಭಜನ್ ಸಿಂಗ್

|

Updated on: Jun 12, 2024 | 10:15 AM

T20 World Cup 2024: ಟಿ20 ವಿಶ್ವಕಪ್​ನ 19ನೇ ಪಂದ್ಯದ ವೇಳೆ ಪಾಕಿಸ್ತಾನ್ ತಂಡದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶಗಳು ವ್ಯಕ್ತವಾಗಿತ್ತು. ಇದೀಗ ಅಕ್ಮಲ್ ಅವರ ನಿಂದನೆಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

IND vs PAK: ನಾಲಿಗೆ ಹರಿಬಿಟ್ಟ ಪಾಕ್ ಕ್ರಿಕೆಟಿಗನಿಗೆ ಜಾಡಿಸಿದ ಹರ್ಭಜನ್ ಸಿಂಗ್
Akmal-Arshdeep-Harbhajan
Follow us on

ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಣ ಪಂದ್ಯದ ವೇಳೆ ಪಾಕ್  ತಂಡದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್​ ನಾಲಿಗೆ ಹರಿಬಿಟ್ಟಿದ್ದರು. ಇಂಡೊ-ಪಾಕ್ ಪಂದ್ಯದ ವೇಳೆ ಟಿವಿ ಚರ್ಚೆಯಲ್ಲಿ ಕಾಣಿಸಿಕೊಂಡಿದ್ದ ಅಕ್ಮಲ್ ಟೀಮ್ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿರುವ ಹರ್ಭಜನ್ ಸಿಂಗ್ ಪಾಕ್ ಕ್ರಿಕೆಟಿಗನಿಗೆ ಸರಿಯಾಗಿ ಜಾಡಿಸಿದ್ದಾರೆ.

ಭಾರತದ ವಿರುದ್ಧದ ಈ ಪಂದ್ಯದ ಕೊನೆಯ ಓವರ್​ನಲ್ಲಿ ಪಾಕಿಸ್ತಾನ್ ತಂಡಕ್ಕೆ 18 ರನ್​ಗಳು ಬೇಕಿತ್ತು. ಈ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಎಡಗೈ ವೇಗಿ ಅರ್ಷದೀಪ್ ಸಿಂಗ್​ ಕೈಗೆ ಚೆಂಡು ನೀಡಿದ್ದರು.

ಇದೇ ವೇಳೆ ಟಿವಿ ಚರ್ಚೆಯಲ್ಲಿ ಕಾಣಿಸಿಕೊಂಡಿದ್ದ ಕಮ್ರಾನ್ ಅಕ್ಮಲ್, ನೋಡಿ, ಏನು ಬೇಕಾದರೂ ಆಗಬಹುದು. ಏಕೆಂದರೆ ಅರ್ಷ್‌ದೀಪ್ ಸಿಂಗ್ ಕೊನೆಯ ಓವರ್ ಬೌಲ್ ಮಾಡಲಿದ್ದಾರೆ. ಆತ ಲಯದಲ್ಲಿಲ್ಲ. ಅಲ್ಲದೆ ಈಗಾಗಲೇ ರಾತ್ರಿ 12 ಗಂಟೆಯಾಗಿದೆ. 12 ಗಂಟೆಯ ನಂತರ ಯಾವುದೇ ಸಿಖ್​ಗೂ ಓವರ್ ನೀಡಬಾರದು…’ ಎಂದು ಕಮ್ರಾನ್ ಅಕ್ಮಲ್ ಹೀಯಾಳಿಸಿದ್ದರು.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ನೀವು ನಿಮ್ಮ ಹೊಲಸು ಬಾಯಿ ತೆರೆಯುವ ಮೊದಲು ನೀವು ಸಿಖ್ಖರ ಇತಿಹಾಸವನ್ನು ತಿಳಿದುಕೊಳ್ಳಬೇಕು. ಆಕ್ರಮಣಕಾರರಿಂದ ಅಪಹರಣಕ್ಕೊಳಗಾದಾಗ ನಿಮ್ಮ ತಾಯಿ ಮತ್ತು ಸಹೋದರಿಯರನ್ನು ಸಿಖ್ಖರು ರಕ್ಷಿಸಿದ್ದಾರೆ. ಆಗಲೂ ಸಮಯ 12 ಗಂಟೆಯಾಗಿತ್ತು. ನಿಮಗೆ ನಾಚಿಕೆಯಾಗಬೇಕು. ..ಸ್ವಲ್ಪ ಕೃತಜ್ಞತೆಯನ್ನು ಹೊಂದಿರಿ ಎಂದು ಎಕ್ಸ್​ ಖಾತೆಯಲ್ಲಿ ಬರೆದಿದ್ದಾರೆ.

ಅಲ್ಲದೆ ಈ ಪೋಸ್ಟ್ ಅನ್ನು ಹರ್ಭಜನ್ ಸಿಂಗ್ ಕಮ್ರಾನ್ ಅಕ್ಮಲ್​ಗೆ ಟ್ಯಾಗ್ ಮಾಡಿದ್ದರು. ಇದೀಗ ಈ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಪಾಕ್ ಮಾಜಿ ಆಟಗಾರ ಕ್ಷಮೆಯಾಚಿಸಿದ್ದಾರೆ.

ಕಮ್ರಾನ್ ಅಕ್ಮಲ್ ಎಕ್ಸ್ ಪೋಸ್ಟ್:

“ನನ್ನ ಇತ್ತೀಚಿನ ಕಾಮೆಂಟ್‌ಗಳಿಗೆ ನಾನು ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಹರ್ಭಜನ್ ಸಿಂಗ್ ಮತ್ತು ಸಿಖ್ ಸಮುದಾಯಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ಮಾತುಗಳು ಅನುಚಿತ ಮತ್ತು ಅಗೌರವಯುತವಾಗಿವೆ. ಪ್ರಪಂಚದಾದ್ಯಂತದ ಸಿಖ್ಖರ ಬಗ್ಗೆ ನನಗೆ ಅತ್ಯಂತ ಗೌರವವಿದೆ ಮತ್ತು ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ದಯವಿಟ್ಟು ಕ್ಷಮಿಸಿ ಎಂದು ಕಮ್ರಾನ್ ಅಕ್ಮಲ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Mohammad Rizwan: ಅರ್ಧಶತಕ ಬಾರಿಸಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಝ್ವಾನ್

ಇದೀಗ ಹರ್ಭಜನ್ ಸಿಂಗ್ ಜಾಡಿಸಿದ ಬೆನ್ನಲ್ಲೇ ಕ್ಷಮಾಪಣೆ ಕೇಳಿರುವ ಕಮ್ರಾನ್ ಅಕ್ಮಲ್ ಅವರ ಪೋಸ್ಟ್ ವೈರಲ್ ಆಗಿದ್ದು, ಇದಾಗ್ಯೂ ಅನೇಕರು ಪಾಕ್ ಕ್ರಿಕೆಟಿಗನ ಜನಾಂಗೀಯ ನಿಂದನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.