ಎದುರಾಳಿ ತಂಡ ಕಲೆಹಾಕಿದ ಒಟ್ಟಾರೆ ಮೊತ್ತವನ್ನು ಏಕೈಕ ಬ್ಯಾಟ್ಸ್ಮನ್ ಚೇಸ್ ಮಾಡಿದ್ರೆ ಹೇಗಿರಬಹುದು? ಇಂತಹದೊಂದು ಅಪರೂಪದ ರನ್ ಚೇಸಿಂಗ್ಗೆ ಇಂಗ್ಲೆಂಡ್ನ ದಿ ಹಂಡ್ರೆಡ್ ಲೀಗ್ ಸಾಕ್ಷಿಯಾಗಿದೆ. ಭಾನುವಾರ ನಡೆದ ಲೀಗ್ನ 14ನೇ ಪಂದ್ಯದಲ್ಲಿ ಓವಲ್ ಇನ್ವಿನ್ಸಿಬಲ್ಸ್ ಹಾಗೂ ಸದರ್ನ್ ಬ್ರೇವ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಓವಲ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ನಾಯಕ ಸ್ಯಾಮ್ ಬಿಲ್ಲಿಂಗ್ ಅವರ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ಸಂಘಟಿಸಿದ ಓವಲ್ ತಂಡವು ಎದುರಾಳಿಗಳನ್ನು ರನ್ಗಳಿಸದಂತೆ ನಿಯಂತ್ರಿಸಿದರು. ಇದಾಗ್ಯೂ ಬಲಗೈ ಬ್ಯಾಟ್ಸ್ಮನ್ ಮಾರ್ಕಸ್ ಸ್ಟೋಯಿನಿಸ್ 27 ಎಸೆತಗಳಲ್ಲಿ 37 ರನ್ ಬಾರಿಸುವ ಮೂಲಕ ಮಧ್ಯಮ ಕ್ರಮಾಂಕದಲ್ಲಿ ಸದರ್ನ್ ಬ್ರೇವ್ ತಂಡಕ್ಕೆ ಆಸರೆಯಾದರು. ಪರಿಣಾಮ 100 ಎಸೆತಗಳಲ್ಲಿ 6 ವಿಕೆಟ್ ನಷ್ಟಕ್ಕೆ ಸದರ್ನ್ ಬ್ರೇವ್ ತಂಡವು ಕೇವಲ 137 ರನ್ ಕಲೆಹಾಕಿತು.
138 ರನ್ಗಳ ಟಾರ್ಗೆಟ್ ಬೆನ್ನತ್ತಿದ ಓವಲ್ ಇನ್ವಿನ್ಸಿಬಲ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಜೇಸನ್ ರಾಯ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದಿದ್ದರು. ಅತ್ತ ಮೊದಲ ಓವರ್ನಲ್ಲೇ ಮೊದಲ ವಿಕೆಟ್ ಪಡೆದ ಖುಷಿಯಲ್ಲಿದ್ದ ಸದರ್ನ್ ಬ್ರೇವ್ ತಂಡಕ್ಕೆ ಮಾರಕವಾಗಿ ಪರಿಣಮಿಸಿದ್ದು ಮತ್ತೋರ್ವ ಆರಂಭಿಕ ವಿಲ್ ಜಾಕ್ಸ್.
2ನೇ ಓವರ್ನಿಂದ ಅಬ್ಬರಿಸಲಾರಂಭಿಸಿದ ವಿಲ್ ಜಾಕ್ಸ್ ಸದರ್ನ್ ಬೌಲರ್ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಅತ್ತ ವಿಕೆಟ್ಗಾಗಿ ಪರದಾಡಿದ್ದ ಸದರ್ನ್ ಬ್ರೇವ್ ತಂಡದ ಬೌಲರ್ಗಳು ರನ್ ಗತಿ ನಿಯಂತ್ರಿಸಲು ಹರಸಾಹಸಪಡಬೇಕಾಯಿತು. ಏಕೆಂದರೆ ಮೈದಾನದ ಮೂಲೆ ಮೂಲೆಗೂ ವಿಲ್ ಜಾಕ್ಸ್ ಚೆಂಡನ್ನು ಬಾರಿಸುತ್ತಿದ್ದರು.
ಅದರಂತೆ 8 ಸಿಕ್ಸ್ ಹಾಗೂ 10 ಫೋರ್ ಸಿಡಿಸಿದ ವಿಲ್ ಜಾಕ್ಸ್ ಭರ್ಜರಿ ಶತಕ ಸಿಡಿಸಿದರು. ಅಲ್ಲದೆ ಕೇವಲ 48 ಎಸೆತಗಳಲ್ಲಿ ಅಜೇಯ 108 ರನ್ ಬಾರಿಸಿದರು. ಈ ಮೂಲಕ 82 ಎಸೆತಗಳಲ್ಲಿ 142 ರನ್ ಕಲೆಹಾಕುವ ತಂಡವನ್ನು ಗುರಿಮುಟ್ಟಿಸಿ 7 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
ಇಲ್ಲಿ 138 ರನ್ಗಳ ಟಾರ್ಗೆಟ್ನಲ್ಲಿ ವಿಲ್ ಜಾಕ್ಸ್ ಒಬ್ಬರೇ 108 ರನ್ ಬಾರಿಸಿದ್ದು ವಿಶೇಷ. ಅಂದರೆ ಉಳಿದ ನಾಲ್ವರು ಬ್ಯಾಟ್ಸ್ಮನ್ ಸೇರಿ ಕಲೆಹಾಕಿದ್ದು ಕೇವಲ 34 ರನ್ಗಳು ಮಾತ್ರ. ಇನ್ನು ಈ ಬಿರುಗಾಳಿ ಶತಕದೊಂದಿಗೆ ಅಬ್ಬರಿಸಿದ ವಿಲ್ ಜಾಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.