ಟೀಮ್ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಫಾರ್ಮ್ ಇದೀಗ ಚರ್ಚಾ ವಿಷಯವಾಗಿದೆ. ಅದರಲ್ಲೂ ಮುಂಬರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಇದೀಗ ಕೊಹ್ಲಿಯ ಸ್ಥಾನದ ಬಗ್ಗೆ ಚರ್ಚೆಗಳು ಜೋರಾಗಿದೆ. ಈ ಎಲ್ಲಾ ಚರ್ಚೆಗಳ ನಡುವೆ ಇದೀಗ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ (Kapil Dev) ನೀಡಿರುವ ಹೇಳಿಕೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಪ್ರತಿಭಾವಂತ ಸ್ಪಿನ್ ಬೌಲರ್ ಅಶ್ವಿನ್ ಅವರನ್ನು ಟೆಸ್ಟ್ ತಂಡದ ಪ್ಲೇಯಿಂಗ್ 11 ನಿಂದ ಕೈಬಿಡಲು ಸಾಧ್ಯವಾದರೆ, ಫಾರ್ಮ್ನಲ್ಲಿ ಇಲ್ಲದ ವಿರಾಟ್ ಕೊಹ್ಲಿಯನ್ನು ಏಕೆ ಹೊರಗಿಡಬಾರದು ಎಂದು ಕಪಿಲ್ ದೇವ್ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯು ಇದೀಗ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಯ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಏಕೆಂದರೆ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದ್ದ ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಪ್ರಮುಖ ಸ್ಪಿನ್ನರ್ ಅಶ್ವಿನ್ಗೆ ಅವಕಾಶ ನೀಡಿರಲಿಲ್ಲ. ಇದೇ ಕ್ರಮವನ್ನು ಕೊಹ್ಲಿಯ ವಿರುದ್ದ ಏಕೆ ಪ್ರಯೋಗಿಸಬಾರದು ಎಂದು ಕಪಿಲ್ ದೇವ್ ಪ್ರಶ್ನಿಸಿದ್ದಾರೆ. ಅಲ್ಲದೆ ದೀರ್ಘಕಾಲದಿಂದ ಲಯಕ್ಕೆ ಮರಳಲು ಹೋರಾಡುತ್ತಿರುವ ವಿರಾಟ್ ಕೊಹ್ಲಿ ಟಿ20 ತಂಡದಿಂದ ಹೊರಗುಳಿಯಬೇಕು ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಸುಮಾರು 3 ವರ್ಷಗಳಿಂದ ದೊಡ್ಡ ಇನ್ನಿಂಗ್ಸ್ ಆಡಲು ಹೋರಾಡುತ್ತಿದ್ದಾರೆ. ಭಾರತೀಯ ತಂಡದ ಆಡಳಿತವು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ಲಯದಲ್ಲಿರುವ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡದಿದ್ದರೆ, ಅದು ಅವರಿಗೆ ಮಾಡುವ ಅನ್ಯಾಯವಾಗುತ್ತದೆ. ಹೀಗಾಗಿ ಫಾರ್ಮ್ನಲ್ಲಿ ಇಲ್ಲದವರನ್ನು ಕೈ ಬಿಟ್ಟು ಫಾರ್ಮ್ನಲ್ಲಿ ಇರುವವರಿಗೆ ಅವಕಾಶ ನೀಡಿ ಎಂದು ಕಪಿಲ್ ದೇವ್ ತಿಳಿಸಿದ್ದಾರೆ.
ಏಕೆಂದರೆ ಟೆಸ್ಟ್‌ನಲ್ಲಿ ಎರಡನೇ ಅತ್ಯುತ್ತಮ ಬೌಲರ್ ಅಶ್ವಿನ್ ಅವರನ್ನು ತಂಡದಿಂದ ಹೊರಗಿಡಲು ಸಾಧ್ಯವಾದರೆ, ವಿಶ್ವ ನಂಬರ್-1 ಆಟಗಾರನನ್ನೂ ಕೂಡ ತಂಡದಿಂದ ಕೈಬಿಡಬಹುದು. ವಿರಾಟ್ ಕೊಹ್ಲಿ ರನ್ ಗಳಿಸಬೇಕೆಂದು ನಾನು ಸಹ ಬಯಸುತ್ತೇನೆ. ಆದರೆ ಸದ್ಯಕ್ಕೆ ಕೊಹ್ಲಿ ಚೆನ್ನಾಗಿ ಆಡುತ್ತಿಲ್ಲ. ಅವರು ತಮ್ಮ ಪ್ರದರ್ಶನದ ಆಧಾರದ ಮೇಲೆ ಹೆಸರು ಮಾಡಿದ್ದಾರೆ. ಈಗ ಪ್ರದರ್ಶನ ನೀಡದಿದ್ದರೆ, ಹೊಸ ಆಟಗಾರರನ್ನು ಹೊರಗಿಡಲು ಸಾಧ್ಯವಿಲ್ಲ. ಹೀಗಾಗಿ ಯಾರೇ ಆಗಿದ್ದರೂ ಚೆನ್ನಾಗಿ ಆಡದಿದ್ದರೆ ಅವರನ್ನು ತಂಡದಿಂದ ಕೈಬಿಟ್ಟು ಫಾರ್ಮ್ನಲ್ಲಿ ಇರುವ ಆಟಗಾರರಿಗೆ ಅವಕಾಶ ನೀಡಬೇಕೆಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೇ ಅಲ್ಲದೆ ಹೊಸ ಆಟಗಾರರು ವಿರಾಟ್‌ಗೆ ಕಷ್ಟವಾಗುವ ರೀತಿಯಲ್ಲಿ ಪ್ರದರ್ಶನ ನೀಡಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಹೊಸ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ರೆ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಗೆ ಉತ್ತಮ ಪೈಪೋಟಿ ನೀಡುವಂತಹ ಆಟಗಾರರು ತಂಡಕ್ಕೆ ಬರಬೇಕು ಎಂದು ಕಪಿಲ್ ದೇವ್ ಹೇಳಿದರು.
ಸದ್ಯ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ವಿಫಲರಾದರೆ, ಟಿ20 ತಂಡದಿಂದ ಹೊರಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಏಕೆಂದರೆ ಈಗಾಗಲೇ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ ಇದೆ. ಹೀಗಾಗಿ ಶೀಘ್ರದಲ್ಲೇ ವಿರಾಟ್ ಕೊಹ್ಲಿ ಕೂಡ ಫಾರ್ಮ್ಗೆ ಮರಳಬೇಕಾದ ಅನಿವಾರ್ಯತೆಯಿದೆ.
ಇತ್ತ ಟೆಸ್ಟ್‌ನಲ್ಲಿ ಎರಡನೇ ಅತ್ಯುತ್ತಮ ಬೌಲರ್ ಆಗಿರುವ ಅಶ್ವಿನ್ ಅವರನ್ನು ತಂಡದಿಂದ ಹೊರಗಿಡಲು ಸಾಧ್ಯವಾದರೆ, ವಿರಾಟ್ ಕೊಹ್ಲಿಯನ್ನು ಏಕೆ ತಂಡದಿಂದ ಕೈ ಬಿಡಬಾರದು ಎಂಬ ಕಪಿಲ್ ದೇವ್ ಅವರ ಪ್ರಶ್ನೆ ಇದೀಗ ಮಹತ್ವ ಪಡೆದುಕೊಂಡಿದೆ. ಹೀಗಾಗಿ ಫಾರ್ಮ್ಗೆ ಮರಳಲಿದ್ದರೆ ಕೊಹ್ಲಿ ಟೀಮ್ ಇಂಡಿಯಾದಿಂದ ಹೊರಬೀಳುವುದು ಖಚಿತ ಎಂದೇ ವಿಶ್ಲೇಷಿಸಲಾಗುತ್ತಿದೆ.