Kapil Dev: ನನ್ನ ಪಿಂಚಣಿಯನ್ನೇ ತಗೊಳ್ಳಿ: ಮಾಜಿ ಆಟಗಾರನ ನೆರವಿಗೆ ಮುಂದಾದ ಕಪಿಲ್ ದೇವ್

|

Updated on: Jul 13, 2024 | 1:00 PM

Anshuman Gaekwa: ಅಂಶುಮಾನ್ ಗಾಯಕ್ವಾಡ್ ಭಾರತ ತಂಡದ ಮಾಜಿ ಆಟಗಾರ. ಹಾಗೆಯೇ ಟೀಮ್ ಇಂಡಿಯಾದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 1 ದ್ವಿಶತಕ, 2 ಶತಕ ಹಾಗೂ 10 ಅರ್ಧಶತಕಗಳೊಂದಿಗೆ 1985 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ 15 ಪಂದ್ಯಗಳಿಂದ ಒಟ್ಟು 269 ರನ್ ಗಳಿಸಿದ್ದಾರೆ.

Kapil Dev: ನನ್ನ ಪಿಂಚಣಿಯನ್ನೇ ತಗೊಳ್ಳಿ: ಮಾಜಿ ಆಟಗಾರನ ನೆರವಿಗೆ ಮುಂದಾದ ಕಪಿಲ್ ದೇವ್
Anshuman - Kapil Dev
Follow us on

ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಶುಮಾನ್ ಗಾಯಕ್ವಾಡ್ (Anshuman Gaekwad) ಅವರಿಗೆ ಆರ್ಥಿಕ ನೆರವು ನೀಡಲು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ (Kapil Dev) ಮುಂದಾಗಿದ್ದಾರೆ. ಅಂಶುಮಾನ್ ಗಾಯಕ್ವಾಡ್ ಅವರು ಕ್ಯಾನ್ಸರ್ ಎಂಬ ಮಾರಕ ರೋಗದಿಂದ ಬಳಲುತ್ತಿದ್ದು, ಇದೀಗ ಚಿಕಿತ್ಸೆಗಾಗಿ ಸಹಾಯಹಸ್ತವನ್ನು ಎದುರು ನೋಡುತ್ತಿದ್ದಾರೆ.

ಈ ಬಗ್ಗೆ ಬಿಸಿಸಿಐ ಗಮನ ಸೆಳೆದಿರುವ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗೆ ನೆರವಾಗುವಂತೆ ಕಳೆದ ಕೆಲ ದಿನಗಳಿಂದ ಮನವಿ ಮಾಡುತ್ತಿದ್ದಾರೆ. ಇದಾಗ್ಯೂ ಬಿಸಿಸಿಐ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ಮೂಡಿಬಂದಿಲ್ಲ.  ಇದರಿಂದ ಬೇಸರಗೊಂಡಿರುವ ಕಪಿಲ್ ದೇವ್ ತಮ್ಮ ಪಿಂಚಣಿ ಮೊತ್ತವನ್ನು ಅಂಶುಮಾನ್ ಗಾಯಕ್ವಾಡ್ ಅವರಿಗೆ ಚಿಕಿತ್ಸೆಗೆ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಇದು ದುಃಖಕರ ವಿಷಯ. ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೇನೆ. ನಾನು ಅಂಶು ಜೊತೆಯಲ್ಲಿ ಆಡಿರುವ ಕಾರಣ ನಾನು ನೋವಿನಲ್ಲಿದ್ದೇನೆ. ಆತನನ್ನು ಈ ಸ್ಥಿತಿಯಲ್ಲಿ ಅವರನ್ನು ನೋಡಲು ಆಗುತ್ತಿಲ್ಲ. ಯಾರೂ ಸಹ ತೊಂದರೆ ಅನುಭವಿಸಬಾರದು ಎಂಬುದು ನನ್ನ ಭಾವನೆ. ಅವರ ಚಿಕಿತ್ಸೆಗೆ ನೆರವಾಗುವಂತೆ ಬಿಸಿಸಿಐಗೆ ಮನವಿ ಮಾಡಿದ್ದೇನೆ. ಭಾರತೀಯ ಕ್ರಿಕೆಟ್ ಮಂಡಳಿ ಅವರ ಪರ ನಿಲ್ಲಬೇಕು ಎಂದು ಕಪಿಲ್ ದೇವ್ ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದಕ್ಕಾಗಿ ತಮ್ಮ ಪಿಂಚಣಿ ಹಣವನ್ನು ನೀಡಲು ನಾನಂತು ಸಿದ್ಧನಿದ್ದೇನೆ. ಆದರೆ ಯಾರನ್ನೂ ಒತ್ತಾಯಿಸುವುದಿಲ್ಲ. ಅಂಶುಗೆ ಯಾವುದೇ ಸಹಾಯವು ನಿಮ್ಮ ಹೃದಯದಿಂದ ಬರಬೇಕು. ಈಗ ನಾವು ಅವನ ಪರವಾಗಿ ನಿಲ್ಲುವ ಸಮಯ. ನಮ್ಮ ಕ್ರಿಕೆಟ್ ಅಭಿಮಾನಿಗಳು ಅವರನ್ನು ಕೈ ಬಿಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಅವರ ಚೇತರಿಕೆಗಾಗಿ ನೀವೆಲ್ಲರೂ ಪ್ರಾರ್ಥಿಸಬೇಕು ಎಂದು ಕಪಿಲ್ ದೇವ್ ಕೇಳಿಕೊಂಡಿದ್ದಾರೆ.

ಅಂಶುಮಾನ್ ಗಾಯಕ್ವಾಡ್ ಅವರು ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿರುವ ವಿಚಾರವನ್ನು ಮಾಜಿ ಸಹ ಆಟಗಾರ ಸಂದೀಪ್ ಪಾಟೀಲ್ ಅವರು ಈ ತಿಂಗಳ ಆರಂಭದಲ್ಲಿ ದಿ ಮಿಡ್-ಡೇ ಪತ್ರಿಕೆಯಲ್ಲಿ ಬರೆದ ಅಂಕಣದಲ್ಲಿ ಬಹಿರಂಗಪಡಿಸಿದ್ದರು. ಕಳೆದ ಒಂದು ವರ್ಷದಿಂದ ಕ್ಯಾನ್ಸರ್​ನಿಂದ ಬಳಲುತ್ತಿರುವ ಅವರು ಚಿಕಿತ್ಸೆಗಾಗಿ ಲಂಡನ್‌ನಲ್ಲಿದ್ದರು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಹಣಕಾಸಿನ ನೆರವಿನ ಅಗತ್ಯತೆ ಇದ್ದು, ಬಿಸಿಸಿಐ ಕಡೆಯಿಂದ ನೆರವು ನೀಡಬೇಕೆಂದು ತಿಳಿಸಿದ್ದರು.

ಆದರೆ ಸಂದೀಪ್ ಪಾಟೀಲ್ ಈ ಮನವಿ ಮಾಡಿ ವಾರಗಳೇ ಕಳೆದರೂ ಬಿಸಿಸಿಐ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ಮೂಡಿಬಂದಿಲ್ಲ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಪಿಲ್ ದೇವ್, ಬಿಸಿಸಿಐನಲ್ಲಿ ಅಗತ್ಯದ ಸಮಯದಲ್ಲಿ ಸಹಾಯ ಮಾಡುವ ವ್ಯವಸ್ಥೆಯ ಕೊರತೆ ಇದೆ. ಹಿಂದಿನ ದಿನಗಳಲ್ಲಿ ಈಗಿನಂತೆ ಹೆಚ್ಚಿನ ಪ್ರತಿಫಲ ಸಿಗುತ್ತಿರಲಿಲ್ಲ. ಹಾಗಾಗಿ ಮಾಜಿ ಕ್ರಿಕೆಟಿಗರು ಆರ್ಥಿಕವಾಗಿ ಸಬಲರಲ್ಲ. ಹೀಗಾಗಿ ಬಿಸಿಸಿಐ ಭಾರತ ತಂಡಕ್ಕಾಗಿ ಸೇವೆ ಸಲ್ಲಿಸಿದವರನ್ನು ನೋಡಿಕೊಳ್ಳುವಂತಹ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ಈ ತಲೆಮಾರಿನ ಆಟಗಾರರು ಉತ್ತಮ ಹಣ ಗಳಿಸುವುದನ್ನು ನೋಡುವುದು ಸಂತೋಷವೇ. ಸಹಾಯಕ ಸಿಬ್ಬಂದಿಗೆ ಉತ್ತಮ ವೇತನ ನೀಡುತ್ತಿರುವುದು ಕೂಡ ಸಂತಸದ ವಿಚಾರ. ನಮ್ಮ ಕಾಲದಲ್ಲಿ ಮಂಡಳಿಯಲ್ಲಿ ಹಣವಿರಲಿಲ್ಲ. ಈಗ ನಮ್ಮದು ಶ್ರೀಮಂತ ಮಂಡಳಿ, ಹೀಗಾಗಿ ಮಾಜಿ ಹಿರಿಯ ಆಟಗಾರರ ಬಗ್ಗೆ ಬಿಸಿಸಿಐ ಕಾಳಜಿ ವಹಿಸಬೇಕು ಎಂದು ಕಪಿಲ್ ದೇವ್ ಹೇಳಿದ್ದಾರೆ.

ಇದೀಗ ಅಂಶುಮಾನ್ ಗಾಯಕ್ವಾಡ್ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅವರ ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆಯಿದೆ. ಹೀಗಾಗಿ ಅವರ ನೆರವಿಗೆ ಬಿಸಿಸಿಐ ನಿಲ್ಲಬೇಕು. ಇಲ್ಲ, ನಮ್ಮ ಪಿಂಚಣಿ ಮೊತ್ತವನ್ನು ದೇಣಿಗೆ ನೀಡುವ ಮೂಲಕ ನಾವು ಕೊಡುಗೆ ನೀಡಲು ಸಿದ್ಧರಿದ್ದೇವೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಯಾರು ಈ ಅಂಶುಮಾನ್ ಗಾಯಕ್ವಾಡ್?

71 ವರ್ಷದ ಗಾಯಕ್ವಾಡ್ ಅವರು 80ರ ದಶಕದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದ ಅಂಶುಮಾನ್ 1 ದ್ವಿಶತಕ, 2 ಶತಕ ಹಾಗೂ 10 ಅರ್ಧಶತಕಗಳೊಂದಿಗೆ 1985 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ 15 ಪಂದ್ಯಗಳನ್ನಾಡಿರುವ ಅಂಶುಮಾನ್ 1 ಅರ್ಧಶತಕದೊಂದಿಗೆ 269 ರನ್ ಗಳಿಸಿದ್ದಾರೆ.

ನಯನ್ ಮೊಂಗಿಯಾ, ಸಚಿನ್ ತೆಂಡೂಲ್ಕರ್ ಜೊತೆ ಕೋಚ್ ಅಂಶುಮಾನ್ ಗಾಯಕ್ವಾಡ್

ಇದಾಗ್ಯೂ ಅಂಶುಮಾನ್ ಗಾಯಕ್ವಾಡ್ ಅವರಿಗೆ ಹೆಸರು ತಂದುಕೊಟ್ಟಿದ್ದು ಕೋಚಿಂಗ್ ಹುದ್ದೆ ಎಂಬುದು ವಿಶೇಷ. 1997 ರಿಂದ 2000ರವರೆಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾಣಿಸಿಕೊಂಡಿದ್ದ ಅಂಶುಮಾನ್ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಿದ್ದರು. ಇದೇ ಅವಧಿಯಲ್ಲಿ ಭಾರತ ತಂಡವು ಶಾರ್ಜಾದಲ್ಲಿ ನಡೆದ ಪ್ರಸಿದ್ಧ ಕೋಕಾ-ಕೋಲಾ ಕಪ್ ಮತ್ತು ಪಾಕಿಸ್ತಾನದ ವಿರುದ್ಧ ದೆಹಲಿ ಟೆಸ್ಟ್ ಅನ್ನು ಗೆದ್ದುಕೊಂಡಿತ್ತು.

ಇದನ್ನೂ ಓದಿ: James Anderson: ವಿಶ್ವ ದಾಖಲೆಗಳೊಂದಿಗೆ ವಿದಾಯ ಹೇಳಿದ ಜೇಮ್ಸ್ ಅ್ಯಂಡರ್ಸನ್

ಇದೀಗ ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದು, ಅವರು ನೆರವಿಗೆ ನಿಲ್ಲುವಂತೆ ಭಾರತ ತಂಡದ ಮಾಜಿ ಆಟಗಾರರು ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ. ಆದರೆ ಈ ಮನವಿಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ಬರದಿರುವುದೇ ಅಚ್ಚರಿ.