VHT 2026: ಕರ್ನಾಟಕ ತಂಡಕ್ಕೆ ಮುಳುವಾದ ಕನ್ನಡಿಗ; ಸೆಮಿಫೈನಲ್ ಸೋತ ಮಯಾಂಕ್ ಪಡೆ

Vijay Hazare Semi-Final: ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿದರ್ಭ ವಿರುದ್ಧ ಸೋಲನುಭವಿಸಿದೆ. ಕಳೆದ ಆವೃತ್ತಿಯಲ್ಲಿ ಫೈನಲ್‌ನಲ್ಲಿ ಸೋಲಿಸಿದ್ದ ತಂಡದ ವಿರುದ್ಧವೇ ಈ ಬಾರಿ ಸೋತಿದೆ. ಕರ್ನಾಟಕದ ಆಟಗಾರ ಆರ್. ಸಮರ್ಥ್ ವಿದರ್ಭ ಪರ ಆಡಿ, ಅಜೇಯ 76 ರನ್ ಗಳಿಸಿ ಕರ್ನಾಟಕದ ಸೋಲಿಗೆ ಪ್ರಮುಖ ಕಾರಣರಾದರು.

VHT 2026: ಕರ್ನಾಟಕ ತಂಡಕ್ಕೆ ಮುಳುವಾದ ಕನ್ನಡಿಗ; ಸೆಮಿಫೈನಲ್ ಸೋತ ಮಯಾಂಕ್ ಪಡೆ
Karnataka Team

Updated on: Jan 15, 2026 | 10:03 PM

ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ನಡೆದ ಕರ್ನಾಟಕ ಹಾಗೂ ವಿದರ್ಭ (Karnataka vs Vidarbha) ನಡುವಿನ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ (Vijay Hazare Trophy Semi-final) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸೋಲನುಭವಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ ಕಳೆದ ಆವೃತ್ತಿಯ ಫೈನಲ್​ನಲ್ಲಿ ಕರ್ನಾಟಕ ತಂಡ ಯಾವ ತಂಡವನ್ನು ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತೋ ಅದೇ ತಂಡದ ವಿರುದ್ಧ ಈ ಆವೃತ್ತಿಯ ಸೆಮಿಫೈನಲ್ ಪಂದ್ಯದ ಸೋತಿದೆ. ಇನ್ನೊಂದು ನೋವಿನ ಸಂಗತಿಯೆಂದರೆ ಕರ್ನಾಟಕದ ಈ ಸೋಲಿಗೆ ಕರ್ನಾಟಕದ ಆಟಗಾರನೇ ಕಾರಣನಾಗಿದ್ದು, ವಿದರ್ಭ ತಂಡದಲ್ಲಿರುವ ಆರ್​. ಸಮರ್ಥ್​ ಕರ್ನಾಟಕದವರಾಗಿದ್ದು, ಈ ಆವೃತ್ತಿಯಲ್ಲಿ ವಿದರ್ಭ ಪರ ಆಡುತ್ತಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ವಿದರ್ಭ ಪರ ಅಜೇಯ ಅರ್ಧಶತಕದ ಇನ್ನಿಂಗ್ಸ್ ಆಡಿದ ಸಮರ್ಥ್ ಕರ್ನಾಟಕದ ಸೋಲಿನ ಪ್ರಮುಖ ರೂವಾರಿ ಎನಿಸಿಕೊಂಡರು.

ಆರಂಭದಲ್ಲೆ ಎಡವಿದ ಕರ್ನಾಟಕ

ಈ ಪಂದ್ಯದಲ್ಲಿ ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ನಾಯಕನ ಈ ತೀರ್ಮಾನ ಸಂಪೂರ್ಣ ತಪ್ಪು ಎಂಬುದು ಗೊತ್ತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಇಡೀ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಸೆಮಿಫೈನಲ್ ಪಂದ್ಯದಲ್ಲಿ ಸಂಪೂರ್ಣವಾಗಿ ವಿಫಲರಾದರು. ಮಯಾಂಕ್ 9 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ದೇವದತ್ ಇನ್ನಿಂಗ್ಸ್ ಕೇವಲ 4 ರನ್​ಗಳಿಗೆ ಅಂತ್ಯವಾಯಿತು. ಹೀಗಾಗಿ ಕರ್ನಾಟಕ ಕೇವಲ 20 ರನ್​ಗಳಿಗೆ ತನ್ನ ಎರಡು ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡಿತು.

281 ರನ್​ಗಳ ಗುರಿ

ಕಳೆದ ಆವೃತ್ತಿಯಲ್ಲಿ ವಿದರ್ಭ ಪರ ಆಡಿದ್ದ ಕರುಣ್ ನಾಯರ್, ಈ ಆವೃತ್ತಿಯಲ್ಲಿ ಕರ್ನಾಟಕದ ಇನ್ನಿಂಗ್ಸ್ ನಿಭಾಯಿಸಿದ್ದು ಮಾತ್ರವಲ್ಲದೆ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದರೆ ಕರುಣ್​ಗೆ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಕರುಣ್ 76 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಧೃವ್ 28 ರನ್​ಗಳಿಗೆ ಔಟಾದರು. ಕರುಣ್ ಬಳಿಕ ತಂಡದ ಪರ ಎರಡನೇ ಗರಿಷ್ಠ ಸ್ಕೋರ್ ದಾಖಲಿಸಿದ ಶ್ರೀಜಿತ್ 54 ರನ್ ಬಾರಿಸಿದರು. ಶ್ರೇಯಸ್ ಗೋಪಾಲ್ 36 ರನ್ ಬಾರಿಸಿದರೆ, ಮನೋಹರ್ 26 ರನ್​ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಕರ್ನಾಟಕ ತಂಡ ಕೊನೆಯ ಓವರ್​ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 280 ರನ್ ಕಲೆಹಾಕಿತು.

ಕರ್ನಾಟಕಕ್ಕೆ ಮುಳುವಾದ ಆರ್​ಸಿಬಿ ಬಾಯ್ಸ್; ಟೂರ್ನಿಯಲ್ಲಿ ಮೊದಲ ಸೋಲು

ಕರ್ನಾಟಕಕ್ಕೆ ಮುಳುವಾದ ಕನ್ನಡಿಗ

ಈ ಗುರಿ ಬೆನ್ನಟ್ಟಿದ ವಿದರ್ಭ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. 9 ರನ್​ಗಳಿಗೆ ತಂಡದ ಮೊದಲ ವಿಕೆಟ್ ಪತನವಾಯಿತು. ಆದರೆ ಆ ಬಳಿಕ ಜೊತೆಯಾದ ಅಮನ್ ಹಾಗೂ ಧೃವ್ ತಂಡವನ್ನು ಶತಕದ ಗಡಿ ದಾಟಿಸಿದರು. ಈ ವೇಳೆ ಧೃವ್ 47 ರನ್ ಬಾರಿಸಿ ಔಟಾದರೆ, ಅಮನ್ 128 ರನ್​ಗಳ ಇನ್ನಿಂಗ್ಸ್ ಆಡಿ ತಂಡದ ಗೆಲುವು ಖಚಿತಪಡಿಸಿದರು. ಅಮನ್ ಜೊತೆಗೆ ತಂಡದ ಗೆಲುವಿಗೆ ನೆರವಾದ ಆರ್. ಸಮರ್ಥ್​ ಅಜೇಯ 76 ರನ್​ಗಳ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 pm, Thu, 15 January 26