ಕರ್ನಾಟಕಕ್ಕೆ ಮುಳುವಾದ ಆರ್​ಸಿಬಿ ಬಾಯ್ಸ್; ಟೂರ್ನಿಯಲ್ಲಿ ಮೊದಲ ಸೋಲು

Vijay Hazare Trophy: ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ 6 ಗೆಲುವುಗಳ ನಂತರ ಕರ್ನಾಟಕ ತಂಡ ಮಧ್ಯಪ್ರದೇಶದ ವಿರುದ್ಧ ಮೊದಲ ಸೋಲು ಕಂಡಿತು. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ 207 ರನ್‌ಗಳಿಗೆ ಆಲೌಟ್ ಆಗಿ, ಸುಲಭವಾಗಿ ಸೋಲೊಪ್ಪಿಕೊಂಡಿತು. ಮಧ್ಯಪ್ರದೇಶ 7 ವಿಕೆಟ್‌ಗಳ ಅಂತರದಿಂದ ಗೆದ್ದಿತು. ಆರ್​ಸಿಬಿ ಆಟಗಾರರಾದ ಪಡಿಕ್ಕಲ್ ವೈಫಲ್ಯ ಮತ್ತು ವೆಂಕಟೇಶ್ ಅಯ್ಯರ್ ಪ್ರದರ್ಶನ ಸೋಲಿಗೆ ಪ್ರಮುಖ ಕಾರಣವಾಯಿತು.

ಕರ್ನಾಟಕಕ್ಕೆ ಮುಳುವಾದ ಆರ್​ಸಿಬಿ ಬಾಯ್ಸ್; ಟೂರ್ನಿಯಲ್ಲಿ ಮೊದಲ ಸೋಲು
Vijay Hazare Trophy

Updated on: Jan 08, 2026 | 5:04 PM

ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಸತತ 6 ಪಂದ್ಯಗಳನ್ನು ಗೆದ್ದು ಎಲೈಟ್ ಎ ಗುಂಪಿನಲ್ಲಿ ಅಜೇಯ ತಂಡ ಎನಿಸಿಕೊಂಡಿದ್ದ ಕರ್ನಾಟಕ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಟೂರ್ನಿಯ ಎಲೈಟ್ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು ಎದುರಿಸಿದ್ದ ಕರ್ನಾಟಕ (Karnataka vs Madhya Pradesh) ತಂಡ 7 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ಮಧ್ಯಪ್ರದೇಶದ ಬೌಲಿಂಗ್ ಎದುರು ತತ್ತರಿಸಿತು. ಹೀಗಾಗಿ ತಂಡ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಮೊತ್ತ 207 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ ಕೇವಲ 3 ವಿಕೆಟ್ ಕಳೆದುಕೊಂಡು 24ನೇ ಓವರ್​ನಲ್ಲಿಯೇ ಗೆಲುವಿನ ದಡ ಮುಟ್ಟಿತು. ಕರ್ನಾಟಕದ ಈ ಸೋಲಿನಲ್ಲಿ ಆರ್​ಸಿಬಿ (RCB) ತಂಡದಲ್ಲಿ ಆಡುವ ಆಟಗಾರರು ಪ್ರಮುಖ ಪಾತ್ರವಹಿಸಿದರು.

ಕರ್ನಾಟಕ ತಂಡಕ್ಕೆ ಮೊದಲ ಸೋಲು

ಮೋದಿ ಮೈದಾನದಲ್ಲಿ ಈ ಹಿಂದೆ ಆಡಿದ್ದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದ್ದ ಕರ್ನಾಟಕಕ್ಕೆ, ಈ ಪಂದ್ಯದಲ್ಲೂ ಸುಲಭ ಜಯ ಧಕ್ಕಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮಧ್ಯಪ್ರದೇಶದ ಬೌಲರ್​ಗಳು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಎಂದಿನಂತೆ ಕರ್ನಾಟಕ ತಂಡಕ್ಕೆ ಆರಂಭಿಕರಿಬ್ಬರು ಮೊದಲ ವಿಕೆಟ್​ಗೆ 77 ರನ್​ಗಳ ಜೊತೆಯಾಟವನ್ನು ಒದಗಿಸಿಕೊಟ್ಟರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ತಂಡದ ಇನ್ನಿಂಗ್ಸ್ ಕುಸಿಯಿತು. ಈ ಟೂರ್ನಿಯಲ್ಲಿ ಅತ್ಯದ್ಭುತ ಫಾರ್ಮ್​ನಲ್ಲಿರುವ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲೂ ಉತ್ತಮ ಆರಂಭ ಪಡೆದುಕೊಂಡರು. ಆದರೆ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಎಡವಿದರು.

5 ವಿಕೆಟ್ ಪಡೆದ ಶಿವಾಂಗ್

ಪಡಿಕ್ಕಲ್ 35 ರನ್ ಬಾರಿಸಿ ಔಟಾದ ಬಳಿಕ ತಂಡದ ಇತರೆ ಬ್ಯಾಟ್ಸ್‌ಮನ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು. ಅನುಭವಿ ಕರುಣ್ ನಾಯರ್ ಕಳಪೆ ಪ್ರದರ್ಶನ ಈ ಪಂದ್ಯದಲ್ಲೂ ಮುಂದುವರೆಯಿತು. ಅವರು ಕೇವಲ 10 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಶ್ರೀಜಿತ್, ಸ್ಮರಣ್ ಹಾಗೂ ಅಭಿನವ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ ಒತ್ತಡಕ್ಕೊಳಗಾಗಿತು. ತಂಡದ ಪರ ನಾಯಕ ಮಯಾಂಕ್ ಅತ್ಯಧಿಕ 49 ರನ್​ಗಳ ಇನ್ನಿಂಗ್ಸ್ ಆಡಿದರೆ, ವಿದ್ಯಾದರ್ ಪಾಟೀಲ್ 34 ರನ್​ಗಳ ಕಾಣಿಕೆ ನೀಡಿದರು. ಅಂತಿಮವಾಗಿ ತಂಡ 48 ನೇ ಓವರ್​ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 207 ರನ್​ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಮಧ್ಯಪ್ರದೇಶ ಪರ ಬೌಲಿಂಗ್‌ನಲ್ಲಿ ಮಿಂಚಿದ ಶಿವಾಂಗ್ ಕುಮಾರ್ 5 ವಿಕೆಟ್​ಗಳ ಗೊಂಚಲು ಪಡೆದರು.

VHT 2025-26: ಮಿಂಚಿದ ಮಯಾಂಕ್, ಪಡಿಕ್ಕಲ್, ಪ್ರಸಿದ್ಧ್; ಕರ್ನಾಟಕಕ್ಕೆ ಸತತ 6ನೇ ಜಯ

ವೆಂಕಟೇಶ್ ಅಯ್ಯರ್​ ಅಜೇಯ ಅರ್ಧಶತಕ

ಈ ಗುರಿ ಬೆನ್ನಟ್ಟಿದ ಮಧ್ಯಪ್ರದೇಶಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್​ಗೆ 78 ರನ್​ಗಳ ಜೊತೆಯಾಟ ನಡೆಯಿತು. ಆರಂಭಿಕರಾದ ಯಶ್ ದುಬೆ 48 ರನ್ ಬಾರಿಸಿದರೆ, ಹಿಮಾಂಶು ಮಂತ್ರಿ 34 ರನ್​​ ಕಲೆಹಾಕಿದರು. ಆ ಬಳಿಕ ಬಂದ ವೆಂಕಟೇಶ್ ಅಯ್ಯರ್ ಅಜೇಯ 65 ರನ್ ಬಾರಿಸಿ ತಂಡದ ಗೆಲುವು ಖಚಿತಪಡಿಸಿದರು. ವೆಂಕಟೇಶ್ ಅಯ್ಯರ್ ಈ ಆವೃತ್ತಿಯ ಐಪಿಎಲ್‌ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯುತ್ತಿದ್ದು, ಅವರು ಫಾರ್ಮ್​ ಕಂಡುಕೊಂಡಿರುವುದು ತಂಡಕ್ಕೆ ಶುಭ ಸೂಚಕವಾಗಿದೆ. ವೆಂಕಟೇಶ್ ಜೊತೆಗೆ ಆರ್​ಸಿಬಿ ನಾಯಕ ರಜತ್ ಪಾಟಿದರ್ ಕೂಡ ಮಧ್ಯಪ್ರದೇಶ ತಂಡದಲ್ಲಿದ್ದರು. ಆದರೆ ಅವರಿಗೆ ಈ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡುವ ಅವಕಾಶ ಸಿಗಲಿಲ್ಲ. ಇನ್ನು ಈ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ ಕರ್ನಾಟಕ ತಂಡ ಈ ಗುಂಪಿನಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದು, ಕರ್ನಾಟಕವನ್ನು ಸೋಲಿಸಿದ ಮಧ್ಯಪ್ರದೇಶ 2ನೇ ಸ್ಥಾನವನ್ನು ಪಡೆದುಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Thu, 8 January 26