
ಹುಬ್ಬಳ್ಳಿಯ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಸೋಲು ಖಚಿತವಾಗಿದೆ. ಅದು ಕೂಡ ಜಮ್ಮು-ಕಾಶ್ಮೀರ ತಂಡದ ಬೃಹತ್ ಮುನ್ನಡೆಯೊಂದಿಗೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರ ತಂಡವು ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 584 ರನ್ ಕಲೆಹಾಕಿದ್ದರು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಕರ್ನಾಟಕ ತಂಡವು ಕೇವಲ 293 ರನ್ಗಳಿಸಿ ಆಲೌಟ್ ಆಗಿತ್ತು. ಇತ್ತ 291 ರನ್ಗಳ ಹಿನ್ನಡೆ ಅನುಭವಿಸಿದರೂ ಕರ್ನಾಟಕ ತಂಡಕ್ಕೆ ನಾಲ್ಕನೇ ದಿನದಾಟದಲ್ಲಿ ಕಂಬ್ಯಾಕ್ ಮಾಡಲು ಅವಕಾಶವಿತ್ತು.
ಆದರೆ ದ್ವಿತೀಯ ಇನಿಂಗ್ಸ್ನಲ್ಲೂ ಜಮ್ಮು-ಕಾಶ್ಮೀರ ಬ್ಯಾಟರ್ಗಳು ಕ್ರೀಸ್ ಕಚ್ಚಿ ನಿಂತಿದ್ದಾರೆ. ದ್ವಿತೀಯ ಇನಿಂಗ್ಸ್ನ ಮೊದಲ ಮೂರು ಓವರ್ಗಳಲ್ಲೇ 2 ವಿಕೆಟ್ ಕಬಳಿಸಿ ಕರ್ನಾಟಕ ಬೌಲರ್ಗಳು ಪಂದ್ಯ ಹೊಸ ಭರವಸೆ ಮೂಡಿಸಿದ್ದರು. ಆದರೆ ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಖಮ್ರಾನ್ ಇಕ್ಬಾಲ್ ಕರ್ನಾಟಕ ತಂಡದ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದ್ದಾರೆ.
ಇದೀಗ ಜಮ್ಮು-ಕಾಶ್ಮೀರ ತಂಡದ ಮುನ್ನಡೆ 500 ರನ್ಗಳನ್ನು ದಾಟಿದೆ. ಅಂದರೆ ಕಾಶ್ಮೀರಿ ಪಡೆ ಇನ್ನು ಡಿಕ್ಲೇರ್ ಘೋಷಿಸಿದರೂ ಕರ್ನಾಟಕ ತಂಡಕ್ಕೆ ಈ ಗುರಿ ಬೆನ್ನತ್ತಲು ಸಾಧ್ಯವಾಗುವುದಿಲ್ಲ.
ಏಕೆಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಯಾವುದೇ ತಂಡ ಕೊನೆಯ ಇನಿಂಗ್ಸ್ನಲ್ಲಿ 500 ರನ್ಗಳನ್ನು ಬೆನ್ನತ್ತಿ ಗೆದ್ದ ಚರಿತ್ರೆಯೇ ಇಲ್ಲ. ಹೀಗಾಗಿ ಜಮ್ಮು-ಕಾಶ್ಮೀರ ತಂಡವು ಇನ್ನು ಡಿಕ್ಲೇರ್ ಘೋಷಿಸಿದರೂ ಕರ್ನಾಟಕ ತಂಡವು 500+ ರನ್ಗಳನ್ನು ಚೇಸ್ ಮಾಡುವುದು ಅಸಾಧ್ಯ.
ಒಂದು ವೇಳೆ ನಾಲ್ಕನೇ ದಿನದಾಟದಲ್ಲೇ ಕರ್ನಾಟಕ ಬೌಲರ್ಗಳು 4 ರಿಂದ 5 ವಿಕೆಟ್ ಕಬಳಸಿದ್ದರೆ, ಐದನೇ ದಿನದಾಟದ ಮೊದಲ ಸೆಷನ್ನಲ್ಲಿ ಆಲೌಟ್ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದಿತ್ತು. ಈ ಮೂಲಕ ಕೊನೆಯ ಎರಡು ಸೆಷನ್ಗಳಲ್ಲಿ 400 ರಿಂದ 450 ರನ್ಗಳ ಗುರಿ ಪಡೆದು ಚೇಸಿಂಗ್ ಪ್ರಯತ್ನಕ್ಕೆ ಕೈ ಹಾಕಬಹುದಿತ್ತು.
ಆದರೆ ಜಮ್ಮು-ಕಾಶ್ಮೀರ ತಂಡದ ಆರಂಭಿಕ ದಾಂಡಿಗ ಖಮ್ರಾನ್ ಇಕ್ಬಾಲ್ ಅವರ ಭರ್ಜರಿ ಶತಕದೊಂದಿಗೆ ಕರ್ನಾಟಕ ತಂಡದ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದೆ. ಅಲ್ಲದೆ ಜಮ್ಮು-ಕಾಶ್ಮೀರ ತಂಡದ ಮುನ್ನಡೆ 500 ರನ್ಗಳನ್ನು ದಾಟಿರುವ ಕಾರಣ ಈ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಳ್ಳುವುದು ಸಹ ಖಚಿತವಾಗಿದೆ.
ರಣಜಿ ಟೂರ್ನಿಯ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜಯಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಕರ್ನಾಟಕ ವಿರುದ್ಧ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 291 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಹೀಗಾಗಿ ಈ ಬಾರಿಯ ರಣಜಿ ಟೂರ್ನಿಯ ಚಾಂಪಿಯನ್ ಜಮ್ಮು-ಕಾಶ್ಮೀರ. ಇದರೊಂದಿಗೆ 11 ವರ್ಷಗಳ ಬಳಿಕ ಮತ್ತೊಮ್ಮೆ ರಣಜಿ ಟ್ರೋಫಿ ಎತ್ತಿ ಹಿಡಿಯುವ ಕರ್ನಾಟಕ ತಂಡದ ಕನಸು ಕೂಡ ಕಮರಿದೆ.
ಜಮ್ಮು ಮತ್ತು ಕಾಶ್ಮೀರ ಪ್ಲೇಯಿಂಗ್ XI: ಖಮ್ರಾನ್ ಇಕ್ಬಾಲ್, ಯಾವರ್ ಹಸನ್, ಶುಭಂ ಪುಂಡೀರ್, ಪರಸ್ ಡೋಗ್ರಾ (ನಾಯಕ), ಅಬ್ದುಲ್ ಸಮದ್, ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್), ಅಬಿದ್ ಮುಷ್ತಾಕ್, ಆಖಿಬ್ ನಬಿ ದಾರ್, ಯುದ್ವೀರ್ ಸಿಂಗ್ ಚರಕ್, ಸಾಹಿಲ್ ಲೋತ್ರಾ, ಸುನೀಲ್ ಕುಮಾರ್.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ ಬ್ರಿಯಾನ್ ಬೆನ್ನೆಟ್
ಕರ್ನಾಟಕ ಪ್ಲೇಯಿಂಗ್ XI: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ (ನಾಯಕ), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ.
Published On - 10:58 am, Sat, 28 February 26