ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಂದು ಕರ್ನಾಟಕ ಹಾಗೂ ಸಿಕ್ಕಿಂ ನಡುವೆ ಪಂದ್ಯ ನಡೆಯಿತು. ಈ ಪಂದ್ಯವನ್ನು ಕರ್ನಾಟಕ ತಂಡ ಕೇವಲ 6 ಓವರ್ಗಳಲ್ಲಿ ಗೆದ್ದುಕೊಳ್ಳುವ ಮೂಲಕ ಟೂರ್ನಿಯಲ್ಲಿ ಅಮೋಘ ಜಯ ಸಾಧಿಸಿದೆ. ಇಂದೋರ್ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಕ್ಕಿಂ ತಂಡ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗದೆ ಕೇವಲ 18.2 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 82 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 2 ವಿಕೆಟ್ ಕಳೆದುಕೊಂಡು 5.4 ಓವರ್ಗಳಲ್ಲಿ ಗೆಲುವಿನ ದಡ ಮುಟ್ಟಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಕ್ಕಿಂ ತಂಡ ಶ್ರೇಯಸ್ ಗೋಪಾಲ್ ಸ್ಪಿನ್ ದಾಳಿಯ ಮುಂದೆ ಸಂಪೂರ್ಣವಾಗಿ ಶರಣಾಯಿತು. ಸಿಕ್ಕಿಂ ತಂಡದ ಆಶೀಸ್ ತಾಪ ಗರಿಷ್ಠ 18 ರನ್ಗಳ ಇನ್ನಿಂಗ್ಸ್ ಆಡಿದರೆ, ಪ್ರಾಣೇಶ್ ಲಲಿತ್ ಚೆಟ್ರಿ 17 ರನ್ಗಳ ಕಾಣಿಕೆ ನೀಡಿದರು. ತಂಡದ ಮೂವರು ಬ್ಯಾಟರ್ಸ್ಗಳು ಶೂನ್ಯ ಸಾಧನೆ ಮಾಡಿದರೆ, ಮೂವರು ಆಟಗಾರರಿ ಕೇವಲ 1 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಇತ್ತ ಕರ್ನಾಟಕದ ಪರ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಗರಿಷ್ಠ 5 ವಿಕೆಟ್ ಪಡೆದರೆ, ವಿದ್ಯಾಧರ ಪಾಟೀಲ 3ಹಾಗೂ ವೈಶಾಕ್ ವಿಜಯ್ಕುಮಾರ್ 2 ವಿಕೆಟ್ ಪಡೆದರು.
ಈ ಅಲ್ಪ ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕದ ಪರ ಆರಂಭಿಕ ಮನೀಶ್ ಪಾಂಡೆ ಕೇವಲ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ ಅಜೇಯ 30 ರನ್ ಬಾರಿಸಿದರೆ, ಶ್ರೀಜಿತ್ 13 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 37 ರನ್ ಬಾರಿಸಿದರು. 4ನೇ ಕ್ರಮಾಂಕದಲ್ಲಿ ಬಂದ ಸ್ಮರಣ್ 7 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 19 ರನ್ ಸಿಡಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ದೇಶಿಯ ಕ್ರಿಕೆಟ್ನಿಂದ ಐಪಿಎಲ್ವರೆಗೆ ಹಲವು ಬಾರಿ ತಮ್ಮ ಲೆಗ್ ಬ್ರೇಕ್ ಮತ್ತು ಗೂಗ್ಲಿ ಕೌಶಲ್ಯವನ್ನು ತೋರಿಸಿರುವ ಗೋಪಾಲ್ ಈ ಬಾರಿಯೂ ನಿರಾಸೆಗೊಳಿಸಲಿಲ್ಲ. ಅರ್ಧ ಸಿಕ್ಕಿಂ ತಂಡವನ್ನು ಪೆವಿಲಿಯನ್ಗಟ್ಟಿದ ಗೋಪಾಲ್ 4 ಓವರ್ಗಳಲ್ಲಿ ಕೇವಲ 13 ರನ್ ನೀಡಿ 5 ವಿಕೆಟ್ ಪಡೆದರು. ಇಲ್ಲಿ ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಶ್ರೇಯಸ್ ಬೌಲ್ ಮಾಡಿದ 24 ಎಸೆತಗಳಲ್ಲಿ 13 ಎಸೆತಗಳಲ್ಲಿ ಯಾವುದೇ ರನ್ ನೀಡಲಿಲ್ಲ. ಈ ಅದ್ಭುತ ಪ್ರದರ್ಶನದ ಮೂಲಕ ಶ್ರೇಯಸ್, ಐಪಿಎಲ್ ಹರಾಜಿನಲ್ಲಿ ತನ್ನನ್ನು ಕಡೆಗಣಿಸಿದ ಆರ್ಸಿಬಿಗೆ ತಕ್ಕ ಉತ್ತರ ನೀಡಿದ್ದಾರೆ.
ವಾಸ್ತವವಾಗಿ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿ ಕರ್ನಾಟಕದ ಹಲವು ಆಟಗಾರರನ್ನು ಖರೀದಿಸುವ ಮನಸು ಮಾಡಲಿಲ್ಲ. ಅದರಲ್ಲಿ ಶ್ರೇಯಸ್ ಕೂಡ ಒಬ್ಬರು. ಅಂತಿಮವಾಗಿ ಶ್ರೇಯಸ್ರನ್ನು ಚೆನ್ನೈ ಸೂಪರ್ಕಿಂಗ್ಸ್ ಫ್ರಾಂಚೈಸಿ 30 ಲಕ್ಷ ಮೂಲ ಬೆಲೆಗೆ ಖರೀದಿಸಿತು. ಇದೀಗ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶ್ರೇಯಸ್ಗೆ ಸಿಎಸ್ಕೆ ಪ್ಲೇಯಿಂಗ್ 11 ನಲ್ಲಿ ಆಡುವ ಅವಕಾಶ ಸಿಗಲಿ ಎಂಬುದು ಕನ್ನಡಿಗರ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:00 pm, Fri, 29 November 24