IND vs ENG: ಅದು ನಕಲಿ; ವೈರಲ್ ಫೋಟೋ ಬಗ್ಗೆ ಮೌನ ಮುರಿದ ಕರುಣ್ ನಾಯರ್
Karun Nair Speaks Out: ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕರುಣ್ ನಾಯರ್ ಅವರ ಪ್ರದರ್ಶನ ನಿರಾಶಾದಾಯಕವಾಗಿದ್ದರೂ, ಓವಲ್ ಪಂದ್ಯದಲ್ಲಿ ಅವರ ಅರ್ಧಶತಕ ಗಮನ ಸೆಳೆಯಿತು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಅವರ ಒಂದು ಫೋಟೋ ವೈರಲ್ ಆಯಿತು. ಆದರೆ ಕರುಣ್, ಅದು AI ನಿಂದ ರಚಿಸಲ್ಪಟ್ಟದ್ದು ಎಂದು ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ 2-2 ರಿಂದ ಸಮಬಲದೊಂದಿಗೆ ಅಂತ್ಯವಾದರೂ, ಕನ್ನಡಿಗ ಕರುಣ್ ನಾಯರ್ಗೆ (Karun Nair) ಮಾತ್ರ ಈ ಸರಣಿ ದುಸ್ವಪ್ನವಾಗಿ ಕಾಡಿತು ಎಂದರೆ ತಪ್ಪಾಗಲಾರದು. ಬರೋಬ್ಬರಿ 8 ವರ್ಷಗಳ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಕರುಣ್ ಈ ಸರಣಿಯಲ್ಲಿ ಅರ್ಧಶತಕದ ಒಂದೇ ಒಂದು ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ, ಉಳಿದ ಇನ್ನಿಂಗ್ಸ್ಗಳಲ್ಲಿ ನೀರಸ ಪ್ರದರ್ಶನ ನೀಡಿದರು. ಅದರಲ್ಲೂ ಉತ್ತಮ ಆರಂಭ ಸಿಕ್ಕ ಬಳಿಕ ವಿಕೆಟ್ ಒಪ್ಪಿಸಿದ್ದು, ಕರುಣ್ ವೃತ್ತಿಜೀವನಕ್ಕೆ ಅಂತ್ಯಹಾಡುತ್ತಿರುವಂತೆ ಕಾಣುತ್ತಿತ್ತು. ಇದೆಲ್ಲದರ ನಡುವೆ ಓವಲ್ ಟೆಸ್ಟ್ ಪಂದ್ಯದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಅದೊಂದು ಫೋಟೋ, ಕರುಣ್ ಇನ್ನೇನು ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಬಹುದು ಎಂಬ ವದಂತಿಗಳನ್ನು ಎಬ್ಬಿಸಿತ್ತು.
ವಾಸ್ತವವಾಗಿ ಓವಲ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು 6 ರನ್‌ಗಳಿಂದ ಗೆಲ್ಲುವ ಮೂಲಕ ಭಾರತ ತಂಡ ಸರಣಿಯನ್ನು ಸಮಬಲಗೊಳಿಸಿತು. ಈ ಸರಣಿಯ ಕೊನೆಯ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಕರುಣ್ ನಾಯರ್ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಆದಾಗ್ಯೂ ಎರಡನೇ ಇನ್ನಿಂಗ್ಸ್ನಲ್ಲಿ ಕರುಣ್ಗೆ ಹೆಚ್ಚಿನದನ್ನು ಮಾಡಲು ಸಾಧ್ಯವಾಗಿರಲಿಲ್ಲ. ಈ ವೇಳಿ ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತಿದ್ದ ಕರುಣ್ ಅಳುತ್ತಿರುವಂತೆ ಮತ್ತು ಕೆಎಲ್ ರಾಹುಲ್ ಅವರನ್ನು ಸಮಾಧಾನಪಡಿಸುತ್ತಿರುವಂತೆ ಬಿಂಬಿಸುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ವೈರಲ್ ಫೋಟೋದ ಬಗ್ಗೆ ನಾಯರ್ ಹೇಳಿದ್ದೇನು?
ಇದೀಗ ಆ ವೈರಲ್ ಫೋಟೋ ಬಗ್ಗೆ ಕರುಣ್ ನಾಯರ್ ಮೌನ ಮುರಿದಿದ್ದು, ‘ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕ್ರೀಡಾಂಗಣದ ಬಾಲ್ಕನಿಯಲ್ಲಿ ರಾಹುಲ್ ಜೊತೆಗಿನ ತಮ್ಮ ಫೋಟೋವನ್ನು AI ರಚಿಸಿದೆ. ಅದು AI ರಚಿಸಿದ ವೀಡಿಯೊ ಎಂದು ನಾನು ಭಾವಿಸುತ್ತೇನೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಹೌದು, ನಾವು ಖಂಡಿತವಾಗಿಯೂ ಬಾಲ್ಕನಿಯಲ್ಲಿ ಕುಳಿತಿದ್ದೆವು, ಆದರೆ ಈಗ ವೈರಲ್ ಆಗಿರುವ ಫೋಟೋ ನಿಜವಲ್ಲ’ ಎಂದು ನಾಯರ್ ಹೇಳಿದ್ದಾರೆ.
Karun Nair has opened up on a viral video of him allegedly breaking down in dressing room while being consoled by KL Rahul.#ENGvsIND #KarunNair #KLRahul #CricketTwitter pic.twitter.com/IvmtyokLoM
— InsideSport (@InsideSportIND) August 12, 2025
ಇದು ಮಾತ್ರವಲ್ಲದೆ ತಂಡದಲ್ಲಿದ್ದ ಇನ್ನಿಬ್ಬರು ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿರುವ ಕರುಣ್, ‘ಪ್ರಸಿದ್ಧ್ ಮತ್ತು ಕೆಎಲ್ ರಾಹುಲ್ ಜೊತೆಗಿದ್ದು ನನಗೆ ಒಳ್ಳೆಯದಾಯಿತು. ಕಳೆದ ಎರಡು ತಿಂಗಳುಗಳಲ್ಲಿ ನಾವು ತುಂಬಾ ಆನಂದಿಸಿದೆವು. ನಾವು ಒಟ್ಟಿಗೆ ಸಾಕಷ್ಟು ಸಮಯ ಕಳೆದೆವು. ಕ್ರಿಕೆಟ್ ಬಗ್ಗೆ ಮಾತನಾಡಿದೆವು. ತಂಡಕ್ಕೆ ಮರಳುವುದನ್ನು ಹೊರತುಪಡಿಸಿ ಇತರ ವಿಷಯಗಳ ಬಗ್ಗೆ ನಾವು ಸಾಕಷ್ಟು ಮಾತನಾಡಿದ್ದೇವೆ. ನಾವು ಉತ್ತಮ ಸಮಯವನ್ನು ಕಳೆದೆವು ಮತ್ತು ಸರಣಿಯು ಸಹ ಉತ್ತಮ ರೀತಿಯಲ್ಲಿ ಕೊನೆಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ’ ಎಂದು ನಾಯರ್ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
