23.75 ಕೋಟಿ ಪಡೆದಿದ್ದ ವೆಂಕಟೇಶ್ ಅಯ್ಯರ್​ಗೆ ಕೆಕೆಆರ್​ ತಂಡದಿಂದ ಗೇಟ್​ಪಾಸ್?

KKR to Release Venkatesh Iyer: 2025ರ ಐಪಿಎಲ್​ನಲ್ಲಿ ಕೆಕೆಆರ್ ತಂಡದ ಪರ ಆಡಿದ್ದ ವೆಂಕಟೇಶ್ ಅಯ್ಯರ್ ಕಳಪೆ ಪ್ರದರ್ಶನ ನೀಡಿದ್ದರು. ಇದರಿಂದಾಗಿ ಕೆಕೆಆರ್ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡ ಅಯ್ಯರ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ವಹಿಸಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ವರದಿಗಳಿಗೆ ಇನ್ನೂ ಅಧಿಕೃತ ದೃಢೀಕರಣ ದೊರೆತಿಲ್ಲ.

23.75 ಕೋಟಿ ಪಡೆದಿದ್ದ ವೆಂಕಟೇಶ್ ಅಯ್ಯರ್​ಗೆ ಕೆಕೆಆರ್​ ತಂಡದಿಂದ ಗೇಟ್​ಪಾಸ್?
ವೆಂಕಟೇಶ್ ಅಯ್ಯರ್, ಇಶಾನ್ ಕಿಶನ್

Updated on: Jul 18, 2025 | 5:56 PM

2025 ರ ಐಪಿಎಲ್ (IPL 2025) ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆದಿತ್ತು. ಮೆಗಾ ಹರಾಜೆಂದರೆ ಇದರಲ್ಲಿ ಆಟಗಾರರ ಮಳೆ ಸುರಿಯುವುದನ್ನು ನಾವು ಹೊಸದಾಗಿ ಹೇಳಬೇಕಿಲ್ಲ. ತಂಡಕ್ಕೆ ಅಗತ್ಯವಾಗಿರುವ ಆಟಗಾರನನ್ನು ಖರೀದಿಸಲು ಫ್ರಾಂಚೈಸಿಗಳು ಜಿದ್ದಿಗೆ ಬೀಳುತ್ತವೆ. ಹಾಗೆ ಆರ್​ಸಿಬಿ (RCB) ಜೊತೆ ಪೈಪೋಟಿಗೆ ಬಿದ್ದು ಕೆಕೆಆರ್ (KKR)​ ತಂಡ ಯುವ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ (Venkatesh Iyer) ಅವರನ್ನು ಬರೋಬ್ಬರಿ 23.75 ಕೋಟಿ ರೂ.ಗೆ ಖರೀದಿ ಮಾಡಿತ್ತು. ಕೆಕೆಆರ್ ಅಯ್ಯರ್​ಗೆ​ ಇಷ್ಟು ಮೊತ್ತದ ಹಣ ಕೊಡಲೂ ಕಾರಣವೂ ಇತ್ತು. ಅದೆನೆಂದರೆ 2024 ರ ಐಪಿಎಲ್​ನಲ್ಲಿ ಕೆಕೆಆರ್ ತಂಡ ಚಾಂಪಿಯನ್‌ ಆಗುವಲ್ಲಿ ವೆಂಕಟೇಶ್ ಅಯ್ಯರ್ ಪಾತ್ರ ಅಪಾರವಾಗಿತ್ತು. ಹೀಗಾಗಿ ಅವರನ್ನು ಅಧಿಕ ಮೊತ್ತ ನೀಡಿ ಕೆಕೆಆರ್ ಖರೀದಿಸಿತ್ತು. ಆದರೆ 2025 ರ ಐಪಿಎಲ್​ನಲ್ಲಿ ವೆಂಕಟೇಶ್ ಅಯ್ಯರ್ ಪ್ರದರ್ಶನ ತೀರ ಕಳಪೆಯಾಗಿತ್ತು. ಹೀಗಾಗಿ ತಂಡವೂ ಕೂಡ ಸತತ ಸೋಲುಗಳಿಂದ ಕಂಗೆಡಬೇಕಾಯಿತು.

ಇದೀಗ ಮುಂದಿನ ಐಪಿಎಲ್​ಗೂ ಮುನ್ನ ತಂಡದ ನ್ಯೂನತೆಗಳನ್ನು ಸರಿಪಡಿಸಲು ಮುಂದಾಗಿರುವ ಕೆಕೆಆರ್ ತಂಡ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ತಂಡದಿಂದ ಕೈಬಿಡಲಿದೆ ಎಂದು ವರದಿಯಾಗಿದೆ. ಅಲ್ಲದೆ ವೆಂಕಟೇಶ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮುಂದಾಗಿದೆ ಎಂತಲೂ ವರದಿಯಾಗಿದೆ. ಆದಾಗ್ಯೂ ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ವೆಂಕಟೇಶ್ ಅಯ್ಯರ್​ಗೆ ಗೇಟ್​ಪಾಸ್?

ಐಪಿಎಲ್ 2025 ರ ಹರಾಜಿನಲ್ಲಿ, ಕೆಕೆಆರ್ ವೆಂಕಟೇಶ್ ಅಯ್ಯರ್ ಅವರನ್ನು 23.75 ಕೋಟಿ ರೂಪಾಯಿಗಳ ಬೃಹತ್ ಮೊತ್ತಕ್ಕೆ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಈ ಮೂಲಕ ಅಯ್ಯರ್ ಈ ಆವೃತ್ತಿಯ ನಾಲ್ಕನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ ಅವರ ಪ್ರದರ್ಶನ ತುಂಬಾ ಕಳಪೆಯಾಗಿತ್ತು. ಕೆಕೆಆರ್ ಪರ 11 ಪಂದ್ಯಗಳನ್ನು ಆಡಿದ್ದ ಅಯ್ಯರ್ 7 ಇನ್ನಿಂಗ್ಸ್‌ಗಳಲ್ಲಿ ಕೇವಲ 20.28 ರ ಸರಾಸರಿಯಲ್ಲಿ 142 ರನ್ ಗಳಿಸಿದ್ದರು. ಇದರಲ್ಲಿ ಅರ್ಧಶತಕವೂ ಸೇರಿತ್ತು. ಬೌಲಿಂಗ್‌ನಲ್ಲಿ ಅವರಿಗೆ ಒಂದೇ ಒಂದು ಓವರ್ ಬೌಲ್ ಮಾಡುವ ಅವಕಾಶ ಸಿಗಲಿಲ್ಲ.

ಹೀಗಾಗಿ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ವೆಂಕಟೇಶ್ ಅಯ್ಯರ್ ಅವರನ್ನು ತಂಡದಿಂದ ಕೈಬಿಡಲು ಕೆಕೆಆರ್ ನಿರ್ಧರಿಸಿದೆ ಎಂದು ವರದಿಯಾಗಿದೆ. ಅಲ್ಲದೆ ಕಾವ್ಯ ಮಾರನ್ ಒಡೆತನದ ಎಸ್‌ಆರ್‌ಹೆಚ್ ತಂಡ ಅಯ್ಯರ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದರ ಜೊತೆಗೆ ಇಶಾನ್ ಕಿಶನ್ ಬದಲಿಗೆ ವೆಂಕಟೇಶ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಈ ಸೀಸನ್‌ನಲ್ಲಿ ಭರ್ಜರಿ ಶತಕ ಬಾರಿಸಿದ್ದ ಇಶಾನ್ ಕಿಶನ್ ಕೂಡ ಆ ಬಳಿಕ ವಿಶೇಷವಾದದ್ದೇನೂ ಮಾಡಲಿಲ್ಲ.

IPL 2025 Points Table: ಸೋಲಿನೊಂದಿಗೆ ವಿದಾಯ ಹೇಳಿದ ಕೆಕೆಆರ್: ಇಲ್ಲಿದೆ ನೂತನ ಪಾಯಿಂಟ್ಸ್ ಟೇಬಲ್

ಕಿಶನ್​ಗೆ SRH ನಿಂದ ಗೇಟ್​ಪಾಸ್?

ಇಶಾನ್ ಕಿಶನ್ ಅವರನ್ನು 11.25 ಕೋಟಿ ರೂ. ನೀಡಿ ಹೈದರಾಬಾದ್‌ ತಂಡ ಖರೀದಿ ಮಾಡಿತ್ತು. ಕಿಶನ್ ಆಡಿದ ಮೊದಲ ಪಂದ್ಯದಲ್ಲೇ ಅದ್ಭುತ ಶತಕ ಬಾರಿಸುವ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡಿದ್ದರು. ಆದರೆ ಅದರ ನಂತರ ಅವರ ಬ್ಯಾಟ್ ಇಡೀ ಸೀಸನ್‌ನಲ್ಲಿ ಮೌನವಾಗಿತ್ತು. ತಂಡದ ಪರ 14 ಪಂದ್ಯಗಳನ್ನು ಆಡಿದ್ದ ಕಿಶನ್, 35.40 ಸರಾಸರಿಯಲ್ಲಿ 354 ರನ್ ಬಾರಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು ಅರ್ಧಶತಕ ಸೇರಿತ್ತು. ಅವರ ಪ್ರದರ್ಶನವನ್ನು ನೋಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಅವರನ್ನು ತಂಡದಿಂದ ಕೈಬಿಡುವ ಬಗ್ಗೆ ಯೋಚಿಸುತ್ತಿದ್ದು, ಅವರ ಸ್ಥಾನದಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಸೇರಿಸಿಕೊಳ್ಳುವ ಸುದ್ದಿ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ