KL Rahul: ಐಪಿಎಲ್​ಗೂ ಮುನ್ನ ಕೆಎಲ್ ರಾಹುಲ್​ಗೆ ಫಿಟ್​​ನೆಸ್​ ಟೆಸ್ಟ್​

| Updated By: ಝಾಹಿರ್ ಯೂಸುಫ್

Updated on: Mar 05, 2024 | 2:38 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ತಮ್ಮ ಫಿಟ್​ನೆಸ್ ಅನ್ನು ಸಾಬೀತುಪಡಿಸಬೇಕು. ಇಲ್ಲದಿದ್ದರೆ ರಾಹುಲ್​ಗೆ ಐಪಿಎಲ್ ಆಡಲು ಅವಕಾಶ ಇರುವುದಿಲ್ಲ. ಹೀಗಾಗಿ ಈ ವಾರದೊಳಗೆ ಕೆಎಲ್​ಆರ್ ಅವರ ಫಿಟ್​ನೆಸ್ ಟೆಸ್ಟ್ ನಡೆಯುವ ಸಾಧ್ಯತೆಯಿದೆ.

KL Rahul: ಐಪಿಎಲ್​ಗೂ ಮುನ್ನ ಕೆಎಲ್ ರಾಹುಲ್​ಗೆ ಫಿಟ್​​ನೆಸ್​ ಟೆಸ್ಟ್​
KL Rahul
Follow us on

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ (KL Rahul) ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ತೊಡೆಸಂಧು ನೋವಿನ ಸಮಸ್ಯೆಗೆ ಒಳಗಾಗಿದ್ದ ರಾಹುಲ್ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಕೊನೆಯ ಟೆಸ್ಟ್ ಪಂದ್ಯದಿಂದಲೂ ಹಿಂದೆ ಸರಿದಿದ್ದಾರೆ.

ಇತ್ತ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ಕೆಎಲ್ ರಾಹುಲ್, ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯಬೇಕಿದ್ದರೆ ಫಿಟ್​ನೆಸ್ ಟೆಸ್ಟ್​ಗೆ ಒಳಗಾಗಬೇಕಿರುವುದು ಅನಿವಾರ್ಯ. ಅಂದರೆ ಬಿಸಿಸಿಐ ನಿಯಮದ ಪ್ರಕಾರ ಟೀಮ್ ಇಂಡಿಯಾ ಆಟಗಾರರು ಗಾಯಗೊಂಡ ಬಳಿಕ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಿಂದ ಫಿಟ್​ನೆಸ್ ಟೆಸ್ಟ್ ಸರ್ಟಿಫಿಕೇಟ್ ಪಡೆಯಬೇಕು.

ಅದರಂತೆ ಇದೀಗ ಕೆಎಲ್ ರಾಹುಲ್ ಐಪಿಎಲ್​ಗೂ ಮುನ್ನ ತಮ್ಮ ಫಿಟ್​ನೆಸ್ ಅನ್ನು ಸಾಬೀತುಪಡಿಸಬೇಕಿದೆ. ಈ ಟೆಸ್ಟ್​ನಲ್ಲಿ ರಾಹುಲ್ ವಿಫಲರಾದರೆ ಐಪಿಎಲ್​ನಿಂದ ಹೊರಬೀಳಲಿದ್ದಾರೆ. ಹೀಗಾಗಿ ಐಪಿಎಲ್​ ಆರಂಭಕ್ಕೂ ಮುನ್ನ ಕೆಎಲ್ ರಾಹುಲ್ ಅಗ್ನಿಪರೀಕ್ಷೆಯನ್ನು ಎದುರಿಸಲಿರುವುದು ಖಚಿತ.

ಲಂಡನ್​ಗೆ ತೆರಳಿದ್ದ ಕೆಎಲ್ ರಾಹುಲ್:

ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯದ ವೇಳೆ ಕೆಎಲ್ ರಾಹುಲ್ ಶೇ.90 ರಷ್ಟು ಫಿಟ್​ ಆಗಿದ್ದಾರೆ ಎನ್ನಲಾಗಿತ್ತು. ಇದಾಗ್ಯೂ ನೋವಿನ ಸಮಸ್ಯೆಯು ತಲೆದೂರಿದ್ದರಿಂದ ಅವರು ಲಂಡನ್​ನಲ್ಲಿ ಉನ್ನತ ವೈದ್ಯಕೀಯ ತಜ್ಞರನ್ನು ಭೇಟಿಯಾಗಿದ್ದರು. ಇದೀಗ ಚಿಕಿತ್ಸೆ ಮುಗಿಸಿ ಭಾನುವಾರ ಭಾರತಕ್ಕೆ ಮರಳಿದ್ದಾರೆ.

ಅಲ್ಲದೆ ಇದೀಗ ಬೆಂಗಳೂರಿನಲ್ಲಿರುವ ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. NCA ನಲ್ಲಿ ಕೆಎಲ್ ರಾಹುಲ್ ಫಿಟ್​ನೆಸ್​ಗೆ ಒಳಗಾಗಲಿದ್ದು, ಇದರಲ್ಲಿ ಪಾಸ್ ಆದರೆ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ

LSG ಗೆ ಹೊಸ ಉಪನಾಯಕ:

ಈ ಬಾರಿಯ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಇವರ ಜೊತೆಗೆ ಉಪನಾಯಕನಾಗಿ ನಿಕೋಲಸ್ ಪೂರನ್ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಸೀಸನ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಉಪನಾಯಕರಾಗಿ ಕೃಣಾಲ್ ಪಾಂಡ್ಯ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಅವರನ್ನು ವೈಸ್ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಲಾಗಿದ್ದು, ಬದಲಿಗೆ ವೆಸ್ಟ್ ಇಂಡೀಸ್​ನ ನಿಕೋಲಸ್ ಪೂರನ್​ಗೆ ಉಪನಾಯಕತ್ವ ನೀಡಲಾಗಿದೆ.