ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ (KL Rahul) ಶಸ್ತ್ರ ಚಿಕಿತ್ಸೆ ಬಳಿಕ ಮೈದಾನಕ್ಕೆ ಮರಳಲು ತಯಾರಿ ಆರಂಭಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೂಲಕ ಕಂಬ್ಯಾಕ್ ಮಾಡಲು ಭರ್ಜರಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಕೆಎಲ್ಆರ್ ತಂಡದ ಭಾಗವಾಗಬಹುದೇ ಅಥವಾ ಇಲ್ಲವೇ ಎಂಬುದು ಫಿಟ್ನೆಸ್ ಪರೀಕ್ಷೆಯ ನಂತರ ಸ್ಪಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ಫಿಟ್ನೆಸ್ ಸಾಧಿಸಲು ಕೆಲ ದಿನಗಳಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಎನ್‌ಸಿಎಯಲ್ಲಿ ಕೆಎಲ್ ರಾಹುಲ್ ಅಭ್ಯಾಸಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ರಾಹುಲ್ ಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರು ಬೌಲಿಂಗ್ ಮಾಡುತ್ತಿದ್ದಾರೆ. ವಿಶ್ವದ ಅತೀ ವೇಗದ ಮಹಿಳಾ ಬೌಲರ್ ಆಗಿ ಗುರುತಿಸಿಕೊಂಡಿರುವ ಜೂಲನ್ ಎಸೆತಗಳಲ್ಲಿ ಕೆಎಲ್ಆರ್ ಡ್ರೈವ್ ಮತ್ತು ಕಟ್ ಶಾಟ್‌ಗಳನ್ನು ಆಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಇನ್ನು ಜೂಲನ್ ಗೋಸ್ವಾಮಿ ಬಗ್ಗೆ ಹೇಳುವುದಾದರೆ, ಮಹಿಳೆಯರ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ದಾಖಲೆ ಜೂಲನ್ ಹೆಸರಿನಲ್ಲಿದೆ. ಇಲ್ಲಿಯವರೆಗೆ 252 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗಿರುವ ಭಾರತ ಕ್ರಿಕೆಟ್ ತಂಡದಲ್ಲಿ ಜೂಲನ್ ಸ್ಥಾನ ಪಡೆದಿಲ್ಲ. ಇದಾಗ್ಯೂ ಎನ್‌ಸಿಎಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದೇ ವೇಳೆ ಕೆಎಲ್ ರಾಹುಲ್ ಅವರಿಗೆ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
K L Rahul is batting and Jhulan Goswami is bowling.
?NCA, Bangalore@klrahul • @cool_rahulfan pic.twitter.com/xkuvvPZsHP
— Juman Sarma (@Juman_gunda) July 18, 2022
ಸೌತ್ ಆಫ್ರಿಕಾ ಸರಣಿಗೂ ಮುನ್ನ ಗಾಯಗೊಂಡಿದ್ದ ಕೆಎಲ್ ರಾಹುಲ್ ಇತ್ತೀಚೆಗಷ್ಟೇ ಜರ್ಮನಿಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸಂಪೂರ್ಣ ಗುಣಮುಖವಾಗಿರುವ ಕೆಎಲ್ಆರ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಫಿಟ್ನೆಸ್ ಗಾಗಿ ಅಭ್ಯಾಸ ಆರಂಭಿಸಿದ್ದಾರೆ. ಕೆಎಲ್ ರಾಹುಲ್ ಅವರ ಫಿಟ್ನೆಸ್ ಪರೀಕ್ಷೆ ಇದೇ ವಾರ ನಡೆಯಲಿದ್ದು, ಅದರಲ್ಲಿ ಪಾಸಾದರೆ ಜುಲೈ 29ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ 5 ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತ-ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿಯು ಜುಲೈ 22 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಮೂರು 3 ಏಕದಿನ ಪಂದ್ಯಗಳನ್ನು ಹಾಗೂ 5 ಟಿ20 ಪಂದ್ಯಗಳನ್ನು ಆಡಲಿದೆ.