Virat Kohli: ಇದೊಂದೇ ಮಾರ್ಗ, ಕಳಪೆ ತಂಡದ ವಿರುದ್ದ ಕೊಹ್ಲಿಯನ್ನು ಕಣಕ್ಕಿಳಿಸಲು ಪ್ಲ್ಯಾನ್
Virat Kohli: ಏಷ್ಯಾಕಪ್ನಲ್ಲಿ ಕಣಕ್ಕಿಳಿಯುವ ತಂಡವನ್ನೇ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲೂ ಕಣಕ್ಕಿಳಿಸುವ ಸಾಧ್ಯತೆಯಿದೆ.
ಟೀಮ್ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕಳಪೆ ಫಾರ್ಮ್ನಲ್ಲಿರುವುದು ಗೊತ್ತೇ ಇದೆ. ಹೀಗಾಗಿಯೇ ಅವರಿಗೆ ಹೆಚ್ಚಿನ ವಿಶ್ರಾಂತಿಯನ್ನು ನೀಡಲಾಗುತ್ತಿದೆ. ಇತ್ತೀಚೆಗೆ ಮುಕ್ತಾಯಗೊಂಡಿದ್ದ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲೂ ಕೊಹ್ಲಿ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಇದಾಗ್ಯೂ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಆದರೆ ಮುಂಬರುವ ಸರಣಿಗಳು ಟೀಮ್ ಇಂಡಿಯಾ ಪಾಲಿಗೆ ಬಹಳ ಮಹತ್ವದ್ದಾಗಿದೆ. ಅದರಲ್ಲೂ ಕೊಹ್ಲಿ ಫಾರ್ಮ್ ಕೂಡ ತಂಡದ ಪಾಲಿಗೆ ನಿರ್ಣಾಯಕ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯ ಬಳಿಕ ಟೀಮ್ ಇಂಡಿಯಾ ಏಷ್ಯಾಕಪ್ ಆಡಲಿದೆ.
ಏಷ್ಯಾಕಪ್ನಲ್ಲಿ ಕಣಕ್ಕಿಳಿಯುವ ತಂಡವನ್ನೇ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲೂ ಕಣಕ್ಕಿಳಿಸುವ ಸಾಧ್ಯತೆಯಿದೆ. ಆದರೆ ಇತ್ತ ಕಳಪೆ ಫಾರ್ಮ್ ಕಾರಣ ಕೊಹ್ಲಿಯ ಆಯ್ಕೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಅದರಲ್ಲೂ ತಂಡದಿಂದ ಹೊರಗುಳಿದಿರುವ ಕೊಹ್ಲಿಯನ್ನು ಏಷ್ಯಾಕಪ್ ಆಯ್ಕೆ ಮಾಡುವ ಬಗ್ಗೆ ಚರ್ಚೆಗಳು ಶುರುವಾಗಿದೆ.
ಇತ್ತ ವಿರಾಟ್ ಕೊಹ್ಲಿ ಏಷ್ಯಾಕಪ್ಗೂ ಮುನ್ನ ಫಾರ್ಮ್ ಕಂಡುಕೊಳ್ಳಲು ಜಿಂಬಾಬ್ವೆ ಸರಣಿಗೆ ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಅಂದರೆ ಏಷ್ಯಾಕಪ್ಗೂ ಮುನ್ನ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ದ ಕೇವಲ 3 ಪಂದ್ಯಗಳ ಸರಣಿ ಆಡಲಿದೆ. ಈ ಸರಣಿಯಿಂದ ಟೀಮ್ ಇಂಡಿಯಾದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತದೆ. ಅಲ್ಲದೆ ಮೀಸಲು ಆಟಗಾರರ ತಂಡವನ್ನು ಕಳುಹಿಸಲು ನಿರ್ಧರಿಸಲಾಗಿದೆ. ಆದರೀಗ ಈ ಸರಣಿಗೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ನಿರ್ಧರಿಸಿದೆ.
ಆಗಸ್ಟ್ 18 ರಿಂದ ಜಿಂಬಾಬ್ವೆ ವಿರುದ್ದದ 3 ಪಂದ್ಯಗಳ ಏಕದಿನ ಸರಣಿ ಶುರುವಾಗಲಿದ್ದು, ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಗೆ ಫಾರ್ಮ್ ಕಂಡುಕೊಳ್ಳಲು ಅವಕಾಶ ನೀಡಲು ಬಿಸಿಸಿಐ ಆಯ್ಕೆ ಸಮಿತಿ ಮುಂದಾಗಿದೆ.
ಆಗಸ್ಟ್ 27 ರಿಂದ ಏಷ್ಯಾಕಪ್ ಶುರುವಾಗುವ ಸಾಧ್ಯತೆಯಿದ್ದು, ಅದಕ್ಕೂ ಮುನ್ನ ವಿರಾಟ್ ಕೊಹ್ಲಿ ಜಿಂಬಾಬ್ವೆ ವಿರುದ್ದ 3 ಏಕದಿನ ಪಂದ್ಯಗಳನ್ನು ಆಡಬೇಕಿದೆ. ಒಂದು ವೇಳೆ ಈ ಸರಣಿಯಲ್ಲೂ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ, ಏಷ್ಯಾಕಪ್ಗೆ ಅವರ ಆಯ್ಕೆ ಬಗ್ಗೆ ಅಪಸ್ವರಗಳು ಕೇಳಿ ಬರಬಹುದು.
ಇಂತಹ ಟೀಕೆಗಳನ್ನು ತಪ್ಪಿಸಲೆಂದೇ ಇದೀಗ ಬಿಸಿಸಿಐ ಜಿಂಬಾಬ್ವೆ ವಿರುದ್ದದ ಸರಣಿಗೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಲು ನಿರ್ಧರಿಸಿದೆ. ಈ ಮೂಲಕ ಫಾರ್ಮ್ ಕಂಡುಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಆದರೆ ಇತ್ತ ಏಕದಿನ ರ್ಯಾಂಕಿಂಗ್ನಲ್ಲಿ 14ನೇ ಸ್ಥಾನದಲ್ಲಿರುವ ಜಿಂಬಾಬ್ವೆ ವಿರುದ್ದ ವಿರಾಟ್ ಕೊಹ್ಲಿಯನ್ನು ಕಣಕ್ಕಿಳಿಸುತ್ತಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕುವ ಸಾಧ್ಯತೆಯಿದೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ವಿರಾಟ್ ಕೊಹ್ಲಿಗೆ ಫಾರ್ಮ್ ಕಂಡುಕೊಳ್ಳಲು ಇದೊಂದೇ ಮಾರ್ಗ ಉಳಿದಿದೆ ಎನ್ನಬಹುದು.