KL Rahul: ಪಂದ್ಯ ಮುಗಿದ ಬಳಿಕ ಬೇಸರದಲ್ಲಿ ನಾಯಕ ಕೆಎಲ್ ರಾಹುಲ್ ಆಡಿದ ಮಾತು ಕೇಳಿ
South Africa vs India: ದ. ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮತ್ತೆ ಕಳಪೆ ಪ್ರದರ್ಶನ ತೋರಿತು. ಸದ್ಯ ಸರಣಿ ಸೋತ ಆಘಾತದಲ್ಲಿ ಟೀಮ್ ಇಂಡಿಯಾವಿದೆ. ಪಂದ್ಯ ಮುಗಿದ ಬಳಿಕ ನಾಯಕ ಕೆಎಲ್ ರಾಹುಲ್ ಮಾತನಾಡಿದ್ದು, ಸೋಲು ಕಾಣಲು ಕಾರಣವನ್ನು ವಿವರಿಸಿದ್ದಾರೆ.
ಹೊಸ ಹುರುಪಿನೊಂದಿಗೆ ಐತಿಹಾಸಿಕ ಗೆಲುವು ಸಾಧಿಸುವ ಇರಾದೆಯಿಂದ ಹರಿಣಗಳ ನಾಡಿಗೆ ಕಾಲಿಟ್ಟ ಭಾರತ (India vs South Africa) ತಂಡಕ್ಕೆ ಭಾರೀ ನಿರಾಸೆ ಉಂಟಾಗಿದೆ. ಟೆಸ್ಟ್ನ ಮೊದಲ ಪಂದ್ಯ ಗೆದ್ದಿದ್ದು ಬಿಟ್ಟರೆ ಉಳಿದೆರಡು ಪಂದ್ಯದಲ್ಲಿ ಸೋಲು ಕಂಡು ಸರಣಿಯನ್ನು ಕೈಚೆಲ್ಲಿತ್ತು. ಇದೀಗ ಏಕದಿನ ಸರಣಿಯನ್ನೂ ಕಳೆದುಕೊಂಡಿದೆ. ವೈಟ್ವಾಷ್ನಿಂದ ಪಾರಾಗಬೇಕಾದ ಒತ್ತಡದಲ್ಲಿ ಭಾರತವಿದೆ. ಶುಕ್ರವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಮತ್ತೆ ಕಳಪೆ ಪ್ರದರ್ಶನ ತೋರಿತು. ಬ್ಯಾಟಿಂಗ್ನಲ್ಲಿ ಕೊಂಚ ಸುಧಾರಣೆ ಕಂಡರೂ ಬೌಲಿಂಗ್ನಲ್ಲಿ ಮಾರಕವಾಗಿ ಗೋಚರಿಸಿಲ್ಲ. ಆಫ್ರಿಕಾ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟಲು ಹರಸಾಹಸ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಎರಡು ಏಕದಿನ ಪಂದ್ಯಗಳಲ್ಲಿ ಭಾರತೀಯ ಬೌಲರ್ಗಳು ಪಡೆದಿದ್ದು ಆಫ್ರಿಕಾದ ಕೇವಲ 6 ವಿಕೆಟ್ಗಳನ್ನು ಮಾತ್ರ. ಸದ್ಯ ಸರಣಿ ಸೋತ ಆಘಾತದಲ್ಲಿ ಟೀಮ್ ಇಂಡಿಯಾವಿದೆ. ಪಂದ್ಯ ಮುಗಿದ ಬಳಿಕ ನಾಯಕ ಕೆಎಲ್ ರಾಹುಲ್ (KL Rahul) ಮಾತನಾಡಿದ್ದು, ಸೋಲು ಕಾಣಲು ಕಾರಣವನ್ನು ವಿವರಿಸಿದ್ದಾರೆ.
“ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡ ಅತ್ಯುತ್ತಮ ಕ್ರಿಕೆಟ್ ಆಡಿದೆ. ನಮ್ಮದು ಈ ಹಿಂದಿನಂತೆ ಅದೆ ಮಧ್ಯಮ ಕ್ರಮಾಂಕದಲ್ಲಿ ತಪ್ಪಾಗಿದೆ. ಆದರೆ, ಇದೊಂದು ನಮಗೆ ಕಲಿಯಲು ಉತ್ತಮ ಅವಕಾಶ. ನಮ್ಮದು ಗೆಲ್ಲಬಹುದಾದ ಉತ್ತಮ ತಂಡ ಆದರೆ, ಒಂದು ಸೋಲಿನಿಂದ ಕಲಿಯಬಹುದು ಮತ್ತು ಬೆಳೆಯಬಹುದು. ಕೆಲವು ವಿಚಾರಗಳನ್ನು ನಾವಿನ್ನು ಉತ್ತಮ ಪಡಿಸಬಹುದಿತ್ತು. ನಾವು ಒಂದು ದೊಡ್ಡ ಪಂದ್ಯಕ್ಕೆ ಬಂದಾಗ ಮಧ್ಯಮ ಕ್ರಮಾಂಕದಲ್ಲಿ ಜೊತೆಯಾಟ ಎಂಬುದು ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಮಿಡಲ್ ಓವರ್ನಲ್ಲಿ ಬೌಲಿಂಗ್ ಕೂಡ ಮುಖ್ಯವಾಗುತ್ತದೆ. ಈ ವಿಚಾರಗಳಲ್ಲಿ ನಾವು ಎಡವಿದ್ದೇವೆ,” ಎಂದು ರಾಹುಲ್ ಹೇಳಿದ್ದಾರೆ.
“ಮಧ್ಯಮ ಕ್ರಮಾಂಕದ ಸಮಸ್ಯೆ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಮತ್ತು ಇದರಿಂದ ಕಲಿತು ಸರಿಯಾದ ದಾರಿ ಹುಡುಕುತ್ತೇವೆ. 280 ಟಾರ್ಗೆಟ್ ಬೆನ್ನಟ್ಟುವುದು ಸುಲಭ ಎಂದು ನಾನು ನಂಬುವುದಿಲ್ಲ. ಇದರ ಕ್ರೆಡಿಟ್ ಆಫ್ರಿಕಾದ ಬ್ಯಾಟರ್ಗಳಿಗೆ ಸಲ್ಲಬೇಕು. ಅವರು ಮಧ್ಯಮ ಕ್ರಮಾಂಕದ ಜೊತೆಯಾಟ ಎಂದರೆ ಹೇಗಿರಬೇಕು ಎಂಬುದನ್ನು ತೋರ್ಪಡಿಸಿದರು. ನಮ್ಮ ಬೌಲರ್ಗಳ ಮೇಲೆ ಸಾಕಷ್ಟು ಒತ್ತಡ ಹಾಕಿದರು”.
ಇನ್ನು ಭಾರತೀಯ ಬ್ಯಾಟಿಂಗ್ ಬಗ್ಗೆ ಮಾತನಾಡಿದ ರಾಹುಲ್, “ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ನಡೆಸಿದ್ದರು. ಈ ಬಾರಿ ರಿಷಭ್ ಪಂತ್. ಮೊದಲ 20 ಎಸೆತಗಳನ್ನು ಅವರು ಎಚ್ಚರಿಕೆಯಿಂದ ಆಡುತ್ತಾರೆ, ನಂತರ ಸ್ನಿನ್ನರ್ಗಳನ್ನು ಚೆನ್ನಾಗಿ ಆಟವಾಡಿಸಿದರು. ಪಂತ್ ನಮ್ಮ ತಂಡಕ್ಕೆ ತುಂಬಾನೆ ಅಗತ್ಯವಿರುವ ಬ್ಯಾಟರ್. ಶಾರ್ದೂಲ್ ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಲೋವರ್ ಆರ್ಡರ್ನಲ್ಲಿ ಈರೀತಿ ಬ್ಯಾಟಿಂಗ್ ಮಾಡುವುದು ಒಳ್ಳೆಯ ಸಂಗತಿ. ಜಸ್ಪ್ರೀತ್ ಬುಮ್ರಾ ಮತ್ತು ಯುಜ್ವೇಂದ್ರ ಚಹಾಲ್ ಕೂಡ ಇಂದು ಉತ್ತಮ ಬೌಲಿಂಗ್ ಮಾಡಿದ್ದಾರೆ,” ಎಂದು ಹೇಳಿದರು.
“ನಮ್ಮಲ್ಲಿ ಇನ್ನೂ ಶಕ್ತಿ ಇದೆ. ಚಾಲೆಂಜ್ ಅನ್ನು ನಾವು ಸ್ವೀಕರಿಸುತ್ತೇವೆ. ಮೊದಲ ಎರಡು ಪಂದ್ಯ ಸೋತಿರಬಹುದು, ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲು ಪ್ರಯತ್ನ ಮಾಡುತ್ತೇವೆ,” ಎಂಬುದು ರಾಹುಲ್ ಮಾತಾಗಿತ್ತು. ಇದೇವೇಳೆ ಮೂರನೇ ಏಕದಿನ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಲೇ ಈ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದರು.
KL Rahul: ದಾಖಲೆಯ ಮೊತ್ತಕ್ಕೆ ಕೆಎಲ್ ರಾಹುಲ್ರನ್ನು ಖರೀದಿಸಿದ ಲಖನೌ: ಹಾರ್ದಿಕ್ ಕೂಡ ಸೇಲ್
South Africa vs India: ಕೊಹ್ಲಿ ನಾಯಕತ್ವ ತೊರೆದ ಬಳಿಕ ಬರೀ ಸೋಲು: ಹರಿಣಗಳ ನಾಡಿನಲ್ಲಿ ಭಾರತಕ್ಕೆ ಭಾರೀ ಮುಖಭಂಗ