
ಐಪಿಎಲ್ 2025 (IPL 2025) ರಲ್ಲಿ ಕೆಎಲ್ ರಾಹುಲ್ (KL Rahul) ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ಆಡಿರುವ 6 ಪಂದ್ಯಗಳಲ್ಲಿ 5 ಗೆಲುವು ಸಾಧಿಸುವುದಕ್ಕೆ ಕೆಎಲ್ ರಾಹುಲ್ ಕೂಡ ಪ್ರಮುಖ ಕೊಡುಗೆ ನೀಡಿದ್ದಾರೆ. ನಿನ್ನೆ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ 32 ಎಸೆತಗಳಲ್ಲಿ 38 ರನ್ ಗಳಿಸುವ ಮೂಲಕ ರಾಹುಲ್ ತಮ್ಮ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ಆದಾಗ್ಯೂ ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಚೇತೇಶ್ವರ ಪೂಜಾರ, ರಾಹುಲ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಹುಲ್ ತಮ್ಮ ವಿಕೆಟ್ ಉಳಿಸಿಕೊಳ್ಳಲು ಆಡುತ್ತಿರುವಂತೆ ಕಾಣುತ್ತಿದೆ ಎಂದು ಹೇಳುವ ಮೂಲಕ ಪೂಜಾರ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಜೊತೆಗಿನ ಸಂವಾದದಲ್ಲಿ ಚೇತೇಶ್ವರ ಪೂಜಾರ, ‘ಒಬ್ಬ ಹಿರಿಯ ಆಟಗಾರನಾಗಿ, ಕೆಎಲ್ ರಾಹುಲ್ ಸೆಟ್ ಆಗಲು 15-30 ಎಸೆತಗಳನ್ನು ತೆಗೆದುಕೊಳ್ಳುತ್ತಾರೆ. ಅದರ ನಂತರ ಅವರು ಆಕ್ರಮಣಕಾರಿಯಾಗಿ ಆಡುತ್ತಾರೆ. ಆದರೆ ಅದೇ ಸಮಯದಲ್ಲಿ, ಅವರು ಸ್ವಲ್ಪ ಹೆಚ್ಚು ಆಕ್ರಮಣಶೀಲತೆಯನ್ನು ತೋರಿಸಬೇಕಾಗಿತ್ತು. ಏಕೆಂದರೆ ಅವರು ಸೆಟ್ ಆಗಿದ್ದರು ಮತ್ತು ಪಿಚ್ ಅನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಾಕಷ್ಟು ಅವಕಾಶವಿತ್ತು. ಅವರಿಗೆ ಪರಿಸ್ಥಿತಿ ಅರ್ಥವಾಗಿತ್ತು. ಪವರ್‌ಪ್ಲೇ ನಂತರ ಅವರು ಆಕ್ರಮಣಕಾರಿ ಆಟಕ್ಕೆ ಮುಂದಾಗಬೇಕಿತ್ತು. ಆದರೆ ರಾಹುಲ್ ತನ್ನ ಸಹಜ ಆಟವನ್ನು ಆಡುವ ಬದಲು ತನ್ನ ವಿಕೆಟ್ ಉಳಿಸಿಕೊಳ್ಳಲು ಆಡುತ್ತಿದ್ದಾರೆ ಎಂದು ತೋರುತ್ತದೆ ಎಂದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೆಎಲ್ ರಾಹುಲ್ ಅವರ ಸ್ಟ್ರೈಕ್ ರೇಟ್ ಕಡಿಮೆಯಿದ್ದರೂ, ಈ ಟೂರ್ನಿಯಲ್ಲಿ ಇಲ್ಲಿಯವರೆಗೆ ಅತ್ಯಂತ ವೇಗವಾಗಿ ರನ್ ಗಳಿಸಿದ್ದಾರೆ. ರಾಹುಲ್ ಆಡಿರುವ 5 ಪಂದ್ಯಗಳಲ್ಲಿ 59 ರ ಸರಾಸರಿಯಲ್ಲಿ 238 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಸ್ಟ್ರೈಕ್ ರೇಟ್ 154 ಆಗಿದೆ. ದೊಡ್ಡ ವಿಷಯವೆಂದರೆ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸ್ಥಾನ ಬದಲಾಗುತ್ತಲೇ ಇರುತ್ತದೆ, ಆದ್ದರಿಂದ ಅವರು ಯಾವಾಗಲೂ ಒಂದೇ ರನ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ.
RCB vs DC Highlights, IPL 2025: ರಾಹುಲ್ ಕ್ಯಾಚ್ ಕೈಚೆಲ್ಲಿ ಪಂದ್ಯ ಸೋತ ಆರ್ಸಿಬಿ
ರಾಹುಲ್ ಬಗ್ಗೆ ಪೂಜಾರ ಪ್ರಶ್ನೆಗಳನ್ನು ಎತ್ತುತ್ತಿರಬಹುದು ಆದರೆ ಸತ್ಯವೆಂದರೆ ರಾಹುಲ್ ತಂಡಕ್ಕೆ ಸಾಕಷ್ಟು ಸಮತೋಲನವನ್ನು ನೀಡಿದ್ದಾರೆ. ಅವರು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧರಿರುತ್ತಾರೆ. ಅಲ್ಲದೆ ಅವರ ವಿಕೆಟ್ ಕೀಪಿಂಗ್ ಕೂಡ ಅತ್ಯುತ್ತಮವಾಗಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಾಹುಲ್ ಆಗಮನದಿಂದ ಲಾಭವಾಗಿದೆ. ಡೆಲ್ಲಿ ತಂಡ 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ