ಟೀಂ ಇಂಡಿಯಾದಲ್ಲಿನ ಆಂತರಿಕ ಜಗಳಕ್ಕೆ ಬಲಿಪಶು ಆದ್ರ ಅಭಿಷೇಕ್ ನಾಯರ್?
Team India coaching staff: ಭಾರತ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಐಪಿಎಲ್ ನಡುವೆಯೇ ಸಹಾಯಕ ಕೋಚ್ ಅಭಿಷೇಕ್ ನಾಯರ್, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ತರಬೇತುದಾರ ಸೋಹಮ್ ದೇಸಾಯಿ ಅವರನ್ನು ತಂಡದಿಂದ ತೆಗೆದುಹಾಕಲಾಗಿದೆ. ಕಳಪೆ ಟೆಸ್ಟ್ ಪ್ರದರ್ಶನ ಮತ್ತು ಆಂತರಿಕ ಜಗಳ ಇದಕ್ಕೆ ಕಾರಣ ಎಂದು ವರದಿಯಾಗಿದೆ.

ಐಪಿಎಲ್ (IPL 2025) ನಡುವೆಯೇ ಟೀಂ ಇಂಡಿಯಾದಲ್ಲಿ (Team India) ಮೇಜರ್ ಸರ್ಜರಿ ಆಗಿದೆ. ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆದ ಬಳಿಕ ಕೋಚಿಂಗ್ ಸಿಬ್ಬಂದಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಆದರೀಗ ಕೇವಲ ಎಂಟೇ ತಿಂಗಳಿಗೆ ಕೋಚಿಂಗ್ ಸಿಬ್ಬಂದಿಯಲ್ಲಿ ಮೂವರಿಗೆ ತಂಡದಿಂದ ಗೇಟ್ಪಾಸ್ ನೀಡಲಾಗಿದೆ. ಅದರಂತೆ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ತರಬೇತುದಾರ ಸೋಹಮ್ ದೇಸಾಯಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ. ಅಭಿಷೇಕ್ ನಾಯರ್ ಅವರನ್ನು ಕೇವಲ 8 ತಿಂಗಳ ಹಿಂದೆಯಷ್ಟೇ ನೇಮಿಸಲಾಗಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಕಳಪೆ ಪ್ರದರ್ಶನದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಮೂವರ ತಲೆದಂಡಕ್ಕೆ ಬೇರೆಯದ್ದೇ ಕಾರಣವಿದೆ ಎಂಬುದನ್ನು ಮೂಲಗಳು ಹೇಳುತ್ತಿವೆ.
ವಾಸ್ತವವಾಗಿ ಟೀಂ ಇಂಡಿಯಾಕ್ಕೆ ಕಳೆದ ಕೆಲವು ದಿನಗಳಿಂದ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 0-3 ಅಂತರದ ಸೋಲನ್ನು ಎದುರಿಸಿದ್ದ ರೋಹಿತ್ ಪಡೆ ಇದರ ನಂತರ, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 1-3 ಅಂತರದಿಂದ ಕಳೆದುಕೊಂಡಿತು. ಹೀಗಾಗಿ ಭಾರತ ತಂಡವನ್ನು ಎಲ್ಲೆಡೆ ಟೀಕಿಸಲಾಯಿತು. ಹೀಗಾಗಿಯೇ ಕೋಚಿಂಗ್ ಸಿಬ್ಬಂದಿಯಲ್ಲಿ ಬದಲಾವಣೆ ತರಲು ಬಿಸಿಸಿಐ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ, ಟೀಂ ಇಂಡಿಯಾದಲ್ಲಿನ ಆಂತರಿಕ ಜಗಳದಿಂದಾಗಿ ಈ ಮೂವರನ್ನು ಅದರಲ್ಲೂ ಅಭಿಷೇಕ್ ನಾಯರ್ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಬಲಿಪಶು ಆದ್ರ ನಾಯರ್?
ಮೂಲಗಳ ಪ್ರಕಾರ, ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಯ ಪ್ರಮುಖ ಸದಸ್ಯರು ಮತ್ತು ಹಿರಿಯ ಸ್ಟಾರ್ ಆಟಗಾರನ ನಡುವಿನ ವೈಮನಸಿಗೆ ಅಭಿಷೇಕ್ ನಾಯರ್ ಬಲಿಪಶುವಾದರು ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಸೀತಾಂಶು ಕೊಟಕ್ ಅವರನ್ನು ತಂಡದ ಸಹಾಯಕ ಸಿಬ್ಬಂದಿಗೆ ಹೆಚ್ಚುವರಿ ಬ್ಯಾಟಿಂಗ್ ಕೋಚ್ ಆಗಿ ಸೇರಿಸಿದಾಗಿನಿಂದ ನಾಯರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಯೋಜನೆ ಜಾರಿಯಲ್ಲಿತ್ತು. ಆಸ್ಟ್ರೇಲಿಯಾ ಪ್ರವಾಸದ ನಂತರ ಬಿಸಿಸಿಐ ಪರಿಶೀಲನಾ ಸಭೆ ನಡೆಸಿತ್ತು. ಈ ಸಭೆಯಲ್ಲಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಸೇರಿದಂತೆ ಮಂಡಳಿಯ ಉನ್ನತ ಅಧಿಕಾರಿಗಳು, ಟೀಂ ಇಂಡಿಯಾದ ಪ್ರಮುಖ ಸದಸ್ಯರು ಮತ್ತು ರಾಷ್ಟ್ರೀಯ ಆಯ್ಕೆದಾರರು ಭಾಗವಹಿಸಿದ್ದರು.
ಈ ಸಭೆಯಲ್ಲಿ, ಸಹಾಯಕ ಸಿಬ್ಬಂದಿಯ ಹಿರಿಯ ಸದಸ್ಯರೊಬ್ಬರು, ನಾಯರ್ ಉಪಸ್ಥಿತಿಯು ಡ್ರೆಸ್ಸಿಂಗ್ ಕೋಣೆಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಆರೋಪ ಹೊರಿಸಿದ್ದರು. ಇದಾದ ನಂತರ ಮಂಡಳಿಯು ತಕ್ಷಣ ಕ್ರಮ ಕೈಗೊಳ್ಳಲಿಲ್ಲವಾದರೂ ಸೀತಾಂಶು ಕೊಟಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವದರೊಂದಿಗೆ ನಾಯರ್ ಬದಲಿಯನ್ನು ಕರೆತರುವ ಕೆಲಸ ನಡೆಸಿತ್ತು. ಇದಕ್ಕೆ ಪೂರಕವಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಭಿಷೇಕ್ ನಾಯರ್ ಅವರನ್ನು ಬದಿಗಿಡುವ ಕೆಲಸ ಆರಂಭವಾಗಿತ್ತು.
ಟೀಂ ಇಂಡಿಯಾದಲ್ಲಿ ಸಿಗದ ಮನ್ನಣೆ ಆರ್ಸಿಬಿ ಸೇರಿದ ಬಳಿಕ ಸಿಕ್ತು! ಜಿತೇಶ್ ಶಾಕಿಂಗ್ ಹೇಳಿಕೆ; ವಿಡಿಯೋ
ಗಂಭೀರ್ ಮೊದಲ ಆಯ್ಕೆ ನಾಯರ್ ಆಗಿರಲಿಲ್ಲ
ಮೂಲಗಳ ಪ್ರಕಾರ, ಅಭಿಷೇಕ್ ನಾಯರ್ ಅವರು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಸಹಾಯಕ ಕೋಚ್ ಹುದ್ದೆಗೆ ಮೊದಲ ಆಯ್ಕೆಯಾಗಿರಲಿಲ್ಲ. ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ನಡುವೆ ಉತ್ತಮ ಸ್ನೇಹವಿರುವುದರಿಂದ ಅವರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ನಾಯರ್ ಅವರನ್ನು ನೇಮಿಸಲಾಯಿತು. ನಾಯರ್ ಮತ್ತು ಗೌತಮ್ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರಿಂದ್ದ ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ಅಲ್ಲದೆ ಇವರಿಬ್ಬರ ತರಬೇತಿಯಲ್ಲಿ, ಕೆಕೆಆರ್ 2024 ರ ಐಪಿಎಲ್ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹಾಗಾಗಿ ನಾಯರ್ ಅವರನ್ನು ಟೀಂ ಇಂಡಿಯಾ ಕೋಚಿಂಗ್ ಸಿಬ್ಬಂದಿಯಲ್ಲಿ ಸೇರಿಸಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ